ADVERTISEMENT

ಹೊಸ ಅವತಾರದಲ್ಲಿ ಹಿಮಾಲಯನ್‌...

ಜಯಸಿಂಹ ಆರ್.
Published 13 ಅಕ್ಟೋಬರ್ 2020, 19:30 IST
Last Updated 13 ಅಕ್ಟೋಬರ್ 2020, 19:30 IST
ಚಿತ್ರ: ರಾಯಲ್ ಎನ್‌ಫೀಲ್ಡ್‌
ಚಿತ್ರ: ರಾಯಲ್ ಎನ್‌ಫೀಲ್ಡ್‌   
""

ರಾಯಲ್ ಎನ್‌ಫೀಲ್ಡ್ ತನ್ನ ಅಡ್ವೆಂಚರ್ ಟೂರರ್ ಬೈಕ್ ಹಿಮಾಲಯನ್‌ನ ಬಿಎಸ್‌–6 ಅವತರಣಿಕೆಯನ್ನು ಈಚೆಗೆ ಬಿಡುಗಡೆ ಮಾಡಿದೆ. ಭಾರತದಲ್ಲಿ ಮಿಡ್‌ರೇಂಜ್ ಅಡ್ವೆಂಚರ್ ವರ್ಗದಲ್ಲಿ (300 ಸಿಸಿ–500 ಸಿಸಿ) ಎರಡೇ ಬೈಕ್‌ಗಳಿದ್ದು, ಅವುಗಳಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವುದು ಹಿಮಾಲಯನ್‌. ಬಿಎಸ್‌–6 ಅವತರಣಿಕೆಯಲ್ಲಿ ಎಂಜಿನ್‌ ಮಾತ್ರ ಮೇಲ್ದರ್ಜೆಗೆ ಏರಿಸಿಲ್ಲ; ಬದಲಿಗೆ ಮತ್ತಷ್ಟು ಆಧುನಿಕ ಸವಲತ್ತುಗಳನ್ನು ಹಿಮಾಲಯನ್‌ಗೆ ಒದಗಿಸಲಾಗಿದೆ.

ಕಂಪನಿಯು ಹಿಮಾಲಯನ್ ಬಿಎಸ್‌–6ನ್ನು ಪರೀಕ್ಷಾರ್ಥ ಚಾಲನೆಗಾಗಿ ‘ಪ್ರಜಾವಾಣಿ’ಗೆ ನೀಡಿತ್ತು. ಒಟ್ಟು 600 ಕಿ.ಮೀ. ಪರೀಕ್ಷಾರ್ಥ ಚಾಲನೆ ನಡೆಸಲಾಯಿತು. ಪರೀಕ್ಷಾರ್ಥ ಚಾಲನೆಗೆ ನಗರದ ರಸ್ತೆಗಳು, ಸಂಚಾರ ದಟ್ಟಣೆಯ ರಸ್ತೆಗಳು, ಹೆದ್ದಾರಿ ಮತ್ತು ಕಚ್ಚಾರಸ್ತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.

411 ಸಿ.ಸಿ. ಸಾಮರ್ಥ್ಯದ ಎಂಜಿನ್‌ ಬಿಎಸ್‌–4 ಅವತರಣಿಕೆಯಲ್ಲಿ 25 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತಿತ್ತು. ಬಿಎಸ್‌–6 ಅವತರಣಿಕೆಯಲ್ಲಿ 24.5 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. ಆದರೆ ಪವರ್‌ನಲ್ಲಿ ಆಗಿರುವ ಈ ಕುಸಿತವು ಚಾಲನೆ ವೇಳೆ ಗಮನಕ್ಕೆ ಬರುವುದಿಲ್ಲ. ಏಕೆಂದರೆ ಎಂಜಿನ್‌ ಆರ್‌ಪಿಎಂ 6,500 ಮುಟ್ಟಿದಾಗ, 24.5 ಬಿಎಚ್‌ಪಿ ಶಕ್ತಿ ಉತ್ಪಾದನೆಯಾಗುತ್ತದೆ. ಹೆದ್ದಾರಿಯಲ್ಲಿ ವೇಗದ ಚಾಲನೆ ವೇಳೆಯೂ ಎಂಜಿನ್‌ ಸ್ಪೀಡ್‌ 6,500 ಮುಟ್ಟುವುದಿಲ್ಲ ಅಥವಾ ಅಷ್ಟು ವೇಗದ ಚಾಲನೆ ಸಾಧ್ಯವಿಲ್ಲ.

ADVERTISEMENT

ಹೆದ್ದಾರಿಯಲ್ಲಿ ದಿನಪೂರ್ತಿ 70–80 ಕಿ.ಮೀ. ವೇಗದ ಚಾಲನೆ ಮಾಡಲು ಅಡ್ಡಿಯಿಲ್ಲ. ಎಂಜಿನ್‌ಗೂ ಹೊಡೆತ ಬೀಳುವುದಿಲ್ಲ, ಸವಾರನಿಗೂ ಆಯಾಸವಾಗುವುದಿಲ್ಲ. 100 ಕಿ.ಮೀ, 120 ಕಿ.ಮೀ. ವೇಗದಲ್ಲಿ ಚಾಲನೆ ಮಾಡಲೂ ಸಾಧ್ಯವಿದ್ದು, ಆ ವೇಗದಲ್ಲಿ ಎಂಜಿನ್‌ನ ವೈಬ್ರೇಷನ್‌ ತುಸು ಹೆಚ್ಚು ಅನಿಸುವಷ್ಟು ಇದೆ. ತೂಕ ಕಡಿಮೆ ಇರುವ ಸವಾರನಿಗೆ ಇದು ಸ್ವಲ್ಪಮಟ್ಟಿನ ಕಿರಿಕಿರಿಯಾಗಬಹುದು. ಆದರೆ ಹಿಂಬದಿ ಸವಾರನಿಗೆ ವೈಬ್ರೇಷನ್‌ ಒಂದಿನಿತೂ ಅನುಭವಕ್ಕೆ ಬರುವುದಿಲ್ಲ. ವೈಬ್ರೇಷನ್‌ನ ಕಾರಣದಿಂದ ರಸ್ತೆಹಿಡಿತವೇನೂ ಸಡಿಲವಾಗುವುದಿಲ್ಲ. ಹೀಗಾಗಿ ಹೆದ್ದಾರಿ ಚಾಲನೆಯಲ್ಲಿ ಆಯಾಸವಾಗುವುದಿಲ್ಲ. ಬಿಎಸ್‌–4 ಅವತರಣಿಕೆಯಲ್ಲಿ ಈ ವೈಬ್ರೇಷನ್ ಇನ್ನೂ ಹೆಚ್ಚು ಇತ್ತು.

ನಗರ ಮತ್ತು ನಗರದ ಸಂಚಾರದಟ್ಟಣೆಯ ರಸ್ತೆಗಳಲ್ಲಿ ಚಾಲನೆ ಸುಲಭವಾಗಿಯೇ ಇದೆ ಎನ್ನಬಹುದು. ಈ ಎಂಜಿನ್‌ 4,000–5,000 ಆರ್‌ಪಿಎಂನಲ್ಲಿ ಬರೋಬ್ಬರಿ 32 ನ್ಯೂಟನ್ ಮೀಟರ್ (ಎನ್‌ಎಂ) ಟಾರ್ಕ್ ಉತ್ಪಾದಿಸುತ್ತದೆ. 1,500 ಆರ್‌ಪಿಎಂನಲ್ಲಿಯೇ 20ಕ್ಕೂ ಹೆಚ್ಚು ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್‌ ಅತ್ಯಂತ ಕಡಿಮೆ ವೇಗದಲ್ಲಿ ಇದ್ದಾಗಲೇ ಇಷ್ಟು ಟಾರ್ಕ್ ಉತ್ಪಾದನೆಯಾಗುವ ಕಾರಣ, ವೇಗವರ್ಧನೆ ಅತ್ಯುತ್ತಮವಾಗಿದೆ. ಎರಡು ಸಂಚಾರ ದೀಪಗಳ ನಡುವಿನ ಅಂತರವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಕ್ರಮಿಸಲು ಅಗತ್ಯವಾದ ವೇಗವನ್ನು ಪಡೆದುಕೊಳ್ಳಲು ಟಾರ್ಕ್ ನೆರವಾಗುತ್ತದೆ. ಉತ್ತಮ ಟಾರ್ಕ್ ಲಭ್ಯವಿರುವ ಕಾರಣ ಕಡಿಮೆ ವೇಗದಲ್ಲಿ ಗಿಯರ್‌ ಡೌನ್‌ಶಿಫ್ಟ್ ಮಾಡುವ ಅವಶ್ಯಕತೆ ಇಲ್ಲ. ಬಹುತೇಕ ಸಂದರ್ಭದಲ್ಲಿ ಗಿಯರ್‌ಲೆಸ್‌ ಬೈಕ್‌ನಂತೆ ಚಾಲನೆ ಮಾಡಬಹುದು.

ಬಿಎಸ್‌–6 ಅವತರಣಿಕೆಯಲ್ಲಿ ಡ್ಯುಯಲ್ ಚಾನೆಲ್ ಸ್ವಿಚ್ಚೆಬಲ್ ಎಬಿಎಸ್‌ ನೀಡಲಾಗಿದೆ. ಅಂದರೆ ಮುಂದಿನ ಚಕ್ರ ಮತ್ತು ಹಿಂದಿನ ಚಕ್ರಕ್ಕೆ ಎಬಿಎಸ್‌ ಸವಲತ್ತು ಇದ್ದು, ಹಿಂದಿನ ಚಕ್ರದ ಎಬಿಎಸ್‌ಅನ್ನು ‘ಆಫ್’ ಮಾಡಬಹುದು. ಎಬಿಎಸ್‌ ಇರುವ ಕಾರಣ ದಿಢೀರ್ ಬ್ರೇಕಿಂಗ್‌ನಲ್ಲಿ ಬೈಕ್ ಸ್ಕಿಡ್‌ ಆಗುವುದಿಲ್ಲ, ರಸ್ತೆ ಹಿಡಿತ ಕಳೆದುಕೊಳ್ಳುವುದಿಲ್ಲ. ಮಳೆ ಬಿದ್ದಿದ್ದಾಗ, ರಸ್ತೆಯಲ್ಲಿ ಮಣ್ಣು–ಮರಳು ಇದ್ದಾಗ
ಬ್ರೇಕ್ ಹಾಕಿದರೂ ಬೈಕ್ ಯಾವುದೇ ಡ್ರಾಮಾ ಇಲ್ಲದೆ ನಿಲ್ಲುತ್ತದೆ. ಹಿಂದಿನ ಚಕ್ರದ ಎಬಿಎಸ್‌ ಆಫ್ ಮಾಡಲು ಸಾಧ್ಯವಿರುವ ಕಾರಣ ಕಚ್ಚಾರಸ್ತೆಯಲ್ಲಿ, ಆಫ್‌ರೋಡಿಂಗ್‌ನಲ್ಲಿ ಮೋಜಿನ ಸವಾರಿ ಸಾಧ್ಯ. ಬಿಎಸ್‌–4 ಅವತರಣಿಕೆಯಲ್ಲಿ ಸ್ವಿಚ್ಚೆಬಲ್ ಎಬಿಎಸ್‌ ಇರಲಿಲ್ಲ. ಹೀಗಾಗಿ ಆಫ್‌ರೋಡಿಂಗ್‌ನಲ್ಲಿ ಬೈಕ್‌ ರಸ್ತೆಹಿಡಿತ ಕಳೆದುಕೊಳ್ಳುವ ಅಪಾಯವಿತ್ತು. ಬಿಎಸ್‌–6 ಅವತರಣಿಕೆಯಲ್ಲಿ ಇದನ್ನು ಸರಿಪಡಿಸಲಾಗಿದೆ.

ಒಟ್ಟಾರೆ ಬೈಕ್‌ನ ಚಾಲನೆ ಉತ್ತಮವಾಗಿದೆ. ವೇಗದ ಚಾಲನೆಗಿಂತ ಆರಾಮದಾಯಕ ಚಾಲನೆ ಬಯಸುವವರಿಗೆ ಇದು ಹೇಳಿ ಮಾಡಿಸಿದ ಬೈಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.