
ಸಿಂಪಲ್ ಅಲ್ಟ್ರಾ ಸ್ಕೂಟರ್
ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳ ತಯಾರಿಕಾ ಕಂಪನಿ ಸಿಂಪಲ್ ಎನರ್ಜಿ, ‘ಸಿಂಪಲ್ ಒನ್’ ಮತ್ತು ‘ಸಿಂಪಲ್ ಒನ್‌ಎಸ್’ ಮಾದರಿಗಳ ಎರಡನೆಯ ತಲೆಮಾರಿನ (ಜೆನ್ 2) ವಾಹನವನ್ನು ಸೋಮವಾರ ಬಿಡುಗಡೆ ಮಾಡಿದೆ.
ಇವುಗಳ ಜೊತೆಯಲ್ಲೇ, ಒಂದು ಬಾರಿಗೆ ಚಾರ್ಜ್ ಮಾಡಿದರೆ 400 ಕಿ.ಮೀ. ಕ್ರಮಿಸಬಹುದಾದ ‘ಸಿಂಪಲ್ ಅಲ್ಟ್ರಾ’ ಮಾದರಿಯನ್ನೂ ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ ಒಂದು ಬಾರಿಯ ಚಾರ್ಜ್‌ನೊಂದಿಗೆ ಅತಿಹೆಚ್ಚು ದೂರ ಕ್ರಮಿಸುವ ಸಾಮರ್ಥ್ಯದ ಸ್ಕೂಟರ್ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
‘ಇದರಲ್ಲಿ 6.5 ಕೆಡಬ್ಲ್ಯುಎಚ್ ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದೆ. ಇದು ಭಾರತದ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಅಳವಡಿಸಲಾಗಿರುವ ಅತಿಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಎಂಬ ಹೆಗ್ಗಳಿಕೆ ಪಡೆದಿದೆ’ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
‘ಸಿಂಪಲ್ ಅಲ್ಟ್ರಾ’ ಭಾರತದ ಎರಡನೆಯ ಅತ್ಯಂತ ವೇಗದ ಸ್ಕೂಟರ್ ಆಗಿದೆ. ಮೊದಲ ಸ್ಥಾನದಲ್ಲಿ ‘ಸಿಂಪಲ್ ಒನ್‌ಎಸ್’ ಇದೆ. ಈ ಮಾದರಿಗಳ ಬಿಡುಗಡೆಯೊಂದಿಗೆ ಸಿಂಪಲ್ ಎನರ್ಜಿ ಕಂಪನಿಯು ಈಗ ನಾಲ್ಕು ಭಿನ್ನವಾದ ಸ್ಕೂಟರ್‌ಗಳನ್ನು ಗ್ರಾಹಕರಿಗೆ ಒದಗಿಸಿದಂತಾಗಿದೆ. ಪ್ರತಿ ಮಾದರಿಯನ್ನು ಕೂಡ, ಬ್ಯಾಟರಿ ಸಾಮರ್ಥ್ಯ ಮತ್ತು ಎಷ್ಟು ದೂರ ಕ್ರಮಿಸಬಹುದು ಎಂಬ ಕುರಿತಾಗಿ ಗ್ರಾಹಕರಲ್ಲಿ ಇರಬಹುದಾದ ಆತಂಕವನ್ನು ನಿವಾರಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ವಿವರಿಸಿದೆ.
ಕಂಪನಿ ನೀಡಿರುವ ವಿವರಣೆ ಹೀಗಿದೆ:
‘ಸಿಂಪಲ್ ಅಲ್ಟ್ರಾ’ ಇ.ವಿ. ಪ್ರತಿ ಗಂಟೆಗೆ ಗರಿಷ್ಠ 115 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. ಇದು ನಿಲುಗಡೆಯ ಸ್ಥಿತಿಯಿಂದ ಪ್ರತಿ ಗಂಟೆಗೆ 40 ಕಿ.ಮೀ. ವೇಗದ ಸ್ಥಿತಿಗೆ ಕೇವಲ 2.77 ಸೆಕೆಂಡುಗಳಲ್ಲಿ ತಲುಪಬಲ್ಲದು. ಈ ಮೂಲಕ ಇದು ದೀರ್ಘವಾದ ಪ್ರಯಾಣಕ್ಕೆ ಹಾಗೂ ವೇಗದ ಸವಾರಿಗೆ ಹೇಳಿ ಮಾಡಿಸಿದಂತೆ ಇದೆ. ‘ಸಿಂಪಲ್ ಒನ್‌ಎಸ್’ನ ಎರಡನೆಯ ತಲೆಮಾರಿನ (ಜೆನ್ 2) ಮಾದರಿಯು ಒಂದು ಬಾರಿ ಚಾರ್ಜ್ ಮಾಡಿದರೆ ಹೆಚ್ಚು ದೂರ ಕ್ರಮಿಸುವ (192 ಕಿ.ಮೀ) ಸಾಮರ್ಥ್ಯ ಹೊಂದಿದೆ. ಇದಕ್ಕೆ ಬೆಂಗಳೂರಿನಲ್ಲಿ ₹1,49,999 (ಎಕ್ಸ್ ಷೋರೂಂ) ಬೆಲೆ ನಿಗದಿ ಮಾಡಲಾಗಿದೆ.
ಸಿಂಪಲ್ ಒನ್ ಎರಡನೆಯ ತಲೆಮಾರಿನ (ಜೆನ್ 2) ಮಾದರಿಯು ಈಗ ಎರಡು ಬಗೆಯ ಬ್ಯಾಟರಿಗಳಲ್ಲಿ ಲಭ್ಯವಾಗಲಿದೆ. 4.5 ಕೆಡಬ್ಲ್ಯುಎಚ್ ಸಾಮರ್ಥ್ಯದ ಬ್ಯಾಟರಿಯ ಮಾದರಿಯು 236 ಕಿ.ಮೀ. ಸಾಗಬಲ್ಲದು ಎಂದು ಪ್ರಮಾಣೀಕರಿಸಲಾಗಿದೆ. ಇದರ ಬೆಲೆಯು ₹1,69,999 (ಎಕ್ಸ್ ಷೋರೂಂ). 5 ಕೆಡಬ್ಲ್ಯುಎಚ್ ಸಾಮರ್ಥ್ಯದ ಬ್ಯಾಟರಿಯ ಮಾದರಿಯು ಒಂದು ಬಾರಿ ಚಾರ್ಜ್ ಮಾಡಿದರೆ 265 ಕಿ.ಮೀ. ಸಾಗಬಲ್ಲದು ಎಂದು ಪ್ರಮಾಣೀಕರಿಸಲಾಗಿದೆ. ಇದರ ಬೆಲೆಯು ಬೆಂಗಳೂರಿನಲ್ಲಿ (ಎಕ್ಸ್ ಷೋರೂಂ) ₹1,77,999ನಿಂದ ಆರಂಭವಾಗುತ್ತದೆ.
ಸಿಂಪಲ್ ಒನ್ (4.5 kWh), ಸಿಂಪಲ್ ಒನ್ (5 kWh) ಮತ್ತು ಸಿಂಪಲ್ ಒನ್‌ಎಸ್ ಮಾದರಿಗಳು ತಕ್ಷಣವೇ ಖರೀದಿಗೆ ಲಭ್ಯವಾಗಲಿವೆ. ಗ್ರಾಹಕರು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಮೂಲಕವೂ ಈ ಮಾದರಿಯ ಸ್ಕೂಟರ್‌ಗಳನ್ನು ಖರೀದಿಸಬಹುದು.
ಹೊಸ ಮಾದರಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಸಿಂಪಲ್ ಎನರ್ಜಿ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಸುಹಾಸ್ ರಾಜ್‌ಕುಮಾರ್ ಅವರು ‘ಭಾರತದ ಅಷ್ಟೂ ಗ್ರಾಹಕರಿಗೆ ಒಂದೇ ಬಗೆಯ ಮಾದರಿಗಳನ್ನು ಮಾರಾಟ ಮಾಡಲು ಆಗುವುದಿಲ್ಲ, ಅವರೆಲ್ಲರ ಅಭಿರುಚಿ ಬೇರೆ. ಗ್ರಾಹಕರಲ್ಲಿನ ಒಂದು ವರ್ಗವು ಒಂದು ಬಾರಿಯ ಚಾರ್ಜ್‌ನೊಂದಿಗೆ ಕ್ರಮಿಸಬಹುದಾದ ದೂರ ಹಾಗೂ ದಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿಗೆ ಸಿದ್ಧವಿಲ್ಲ. ಇಂತಹ ಗ್ರಾಹಕರನ್ನು ಗಮನದಲ್ಲಿ ಇರಿಸಿಕೊಂಡೇ ಸಿಂಪಲ್ ಅಲ್ಟ್ರಾ ಮಾದರಿಯನ್ನು ರೂಪಿಸಲಾಗಿದೆ’ ಎಂದು ಹೇಳಿದ್ದಾರೆ.