
ಸ್ಕೋಡಾ ಆಟೊ ಇಂಡಿಯಾ ಕಂಪನಿಯ ಭಾರತೀಯ ಬ್ರಾಂಡ್ ನಿರ್ದೇಶಕ ಅಶೀಶ್ ಗುಪ್ತಾ ಕೊಚ್ಚಿಯಲ್ಲಿ ಕುಶಾಕ್ ಫೇಸ್‌ಲಿಫ್ಟ್ –2026
ಬಿಡುಗಡೆ ಮಾಡಿದರು
ಕೊಚ್ಚಿ: ಬೆಳೆಯುತ್ತಿರುವ ಭಾರತದ ಎಸ್‌ಯುವಿ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಸ್ಕೋಡಾ ಆಟೊ ಇಂಡಿಯಾ ಕಂಪನಿ, ‘ಕುಶಾಕ್’ನ ನವೀಕೃತ ಮಾದರಿಯನ್ನು ಪರಿಚಯಿಸಿದೆ.
ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಕೋಡಾ ನಿರ್ದೇಶಕ ಮಂಡಳಿ ಸದಸ್ಯ ಮಾರ್ಟಿನ್ ಜಾನ್ ಮತ್ತು ಭಾರತೀಯ ಬ್ರಾಂಡ್ ನಿರ್ದೇಶಕ ಅಶೀಶ್ ಗುಪ್ತಾ ಕುಶಾಕ್ ಫೇಸ್‌ಲಿಫ್ಟ್ –2026 ಬಿಡುಗಡೆ ಮಾಡಿದರು.
‘₹15 ಸಾವಿರ ಪಾವತಿಸಿ ಹೊಸ ಕುಶಾಕ್ ಬುಕಿಂಗ್ ಮಾಡಿಕೊಳ್ಳಬಹುದು. ಮಾರ್ಚ್‌ನಿಂದ ಡೆಲಿವರಿ
ಪಡೆದುಕೊಳ್ಳಬಹುದು’ ಎಂದು ಗುಪ್ತಾ ಹೇಳಿದರು.
ಶಿಮ್ಲಾ ಗ್ರೀನ್, ಸ್ಟೀಲ್ ಗ್ರೇ ಮತ್ತು ಚೆರ್‍ರಿ ರೆಡ್ ಎಂಬ ಮೂರು ಹೊಸ ಬಣ್ಣಗಳು ಸೇರಿ ಒಟ್ಟು 8 ಬಣ್ಣಗಳಲ್ಲಿ ಕುಶಾಕ್‌ನ ನವೀಕೃತ ಮಾದರಿ ಲಭ್ಯವಿದೆ. ಹೊಸ ಕುಶಾಕ್‌ನ ಬೆಲೆಯನ್ನು ಕಂಪನಿ ಅಧಿಕೃತವಾಗಿ ಪ್ರಕಟಿಸಿಲ್ಲ. ಇದು ₹10.70 ಲಕ್ಷದಿಂದ ₹19 ಲಕ್ಷದವರೆಗೆ ಇರಲಿದೆ ಎಂದು ಮೂಲಗಳು ತಿಳಿಸಿವೆ.
ಕುಶಾಕ್ ಫೇಸ್‌ಲಿಫ್ಟ್‌ನಲ್ಲಿ ವಿನ್ಯಾಸ ಮತ್ತು ಪವರ್‌ಟ್ರೇನ್ ಆಯ್ಕೆಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಾಗಿದೆ. ಎಲ್ಲ ವೇರಿಯಂಟ್‌ಗಳಲ್ಲಿ ಪನೋರಮಿಕ್ ಸನ್‌ರೂಫ್ ಮತ್ತು 6 ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಮುಂಭಾಗದಲ್ಲಿ ಪಾರ್ಕಿಂಗ್ ಸೆನ್ಸರ್ ಅಳವಡಿಸಲಾಗಿದೆ.
‘ಎಫ್‌ಟಿಎ’ ಲಾಭ: ಭಾರತ–ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಭಾರತದಲ್ಲಿ ತಯಾರಿಸಿದ ಕಾರುಗಳನ್ನು ಪಶ್ಚಿಮ ಏಷ್ಯಾ ಸೇರಿ ವಿವಿಧ ದೇಶಗಳಿಗೆ ರಫ್ತು ಮಾಡಲು ಮತ್ತು ಯೂರೋಪ್‌ನಿಂದ ಬಿಡಿಭಾಗಗಳನ್ನು ತರಿಸಿಕೊಳ್ಳಲು ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ. ಭಾರತದ ಇ.ವಿ ಕಾರುಗಳ ಮಾರುಕಟ್ಟೆಯತ್ತಲೂ ನಾವು ಗಮನ ಹರಿಸಿದ್ದೇವೆ ಎಂದು ಮಾರ್ಟಿನ್
ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.