ADVERTISEMENT

ಟಾಟಾ: 17 ಹೊಸ ಟ್ರಕ್‌ಗಳ ಬಿಡುಗಡೆ, ಇಲ್ಲಿದೆ ಸಂಪೂರ್ಣ ಮಾಹಿತಿ

ಆದಿತ್ಯ ಕೆ.ಎ
Published 20 ಜನವರಿ 2026, 23:30 IST
Last Updated 20 ಜನವರಿ 2026, 23:30 IST
ಟಾಟಾ ಮೋಟಾರ್ಸ್‌‌ ಕಂಪನಿಯ ಹೊಸ ಟ್ರಕ್‌ಗಳನ್ನು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್, ಬ್ಯುಸಿನೆಸ್ ವಿಭಾಗದ ಮುಖ್ಯಸ್ಥ ರಾಜೇಶ್ ಕೌಲ್ ಹಾಗೂ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಅನಿರುದ್ಧ ಕುಲಕರ್ಣಿ ಅವರು ನವದೆಹಲಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು
ಟಾಟಾ ಮೋಟಾರ್ಸ್‌‌ ಕಂಪನಿಯ ಹೊಸ ಟ್ರಕ್‌ಗಳನ್ನು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್, ಬ್ಯುಸಿನೆಸ್ ವಿಭಾಗದ ಮುಖ್ಯಸ್ಥ ರಾಜೇಶ್ ಕೌಲ್ ಹಾಗೂ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಅನಿರುದ್ಧ ಕುಲಕರ್ಣಿ ಅವರು ನವದೆಹಲಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು   

ನವದೆಹಲಿ: ಟಾಟಾ ಮೋಟಾರ್ಸ್ ಕಂಪನಿಯು ವಿದ್ಯುತ್‌ ಚಾಲಿತ (ಇ.ವಿ) ಟ್ರಕ್‌ಗಳೂ ಸೇರಿದಂತೆ ಬೃಹತ್ ಪ್ರಮಾಣದಲ್ಲಿ ಸರಕು ಸಾಗಿಸುವ 17 ಹೊಸ ಟ್ರಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಇಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ‌್ ಹಾಗೂ ಬ್ಯುಸಿನೆಸ್ ಹೆಡ್ ರಾಜೇಶ್ ಕೌಲ್ ಅವರು ಹೊಸ ಮಾದರಿಯ ಟ್ರಕ್‌ಗಳನ್ನು ಬಿಡುಗಡೆ ಮಾಡಿದರು.

ಚಾಲಕರ ಸುರಕ್ಷತೆ, ಮಾಲೀಕರಿಗೆ ಲಾಭ ಹಾಗೂ ದೇಶದ ಪ್ರಗತಿಯನ್ನು ಗಮನದಲ್ಲಿ ಇರಿಸಿಕೊಂಡು ಟ್ರಕ್‌ ಅಭಿವೃದ್ಧಿಪಡಿಸಲಾಗಿದೆ ಎಂದು ಗಿರೀಶ್ ವಾಘ್ ಹೇಳಿದರು.

ADVERTISEMENT

‘ಹೊಸ ಟ್ರಕ್‌ಗಳಲ್ಲಿ 23 ಸುರಕ್ಷತಾ ವೈಶಿಷ್ಟ್ಯಳನ್ನು ಅಳವಡಿಸಲಾಗಿದೆ. ಇಂಧನ ಕ್ಷಮತೆ, ಪರ್ಯಾಯ ಇಂಧನಗಳ ಬಳಕೆಯತ್ತ ಗಮನವಿರಿಸಿ, ಸುರಕ್ಷತೆಗೆ ಒತ್ತು ನೀಡಲಾಗಿದೆ.  ಹೆಚ್ಚಿನ ಪ್ರಮಾಣದಲ್ಲಿ ಸರಕು ಸಾಗಿಸಲು ಅನುಕೂಲ ಆಗುವಂತೆ ಟ್ರಕ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇ.ವಿ ಮಾದರಿಯ ಟ್ರಕ್‌ಗಳ ಸರಕು ಸಾಗಣೆ ಸಾಮರ್ಥ್ಯವು 7 ಟನ್‌ನಿಂದ 55 ಟನ್ ವರಗೆ ಇದೆ’ ಎಂದು ವಾಘ್ ಮಾಹಿತಿ ನೀಡಿದರು.

‘ಚಾಲಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೃಷಿ ಉತ್ಪನ್ನಗಳು, ಇ–ಕಾಮರ್ಸ್, ಹಣ್ಣು–ತರಕಾರಿ ಸಾಗಣೆಗೆ ಈ ಟ್ರಕ್‌ಗಳನ್ನು ಬಳಸಿಕೊಳ್ಳಬಹುದು’ ಎಂದು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಅನಿರುದ್ಧ ಕುಲಕರ್ಣಿ ವಿವರಿಸಿದರು.

ಟ್ರಕ್ ಮಾದರಿ: ಪ್ರೈಮಾ ಇ.ವಿ, ಅಲ್ಟ್ರಾ ಇ.ವಿ, ಸಿಗ್ನಾ, ಅಜುರಾ ಶ್ರೇಣಿಯ 17 ಟ್ರಕ್‌ ಮಾದರಿಗಳನ್ನು ಬಿಡುಗಡೆ ಮಾಡಲಾಯಿತು.‌ ‘ಇ.ವಿ ಮಾದರಿಯ ಟ್ರಕ್‌ಗಳ ದರವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು, ಒಮ್ಮೆ ಚಾರ್ಜ್ ಮಾಡಿದರೆ ಇ.ವಿ ಟ್ರಕ್‌ 350 ಕಿ.ಮೀ ಸಾಗುತ್ತದೆ’ ಎಂದು ಕುಲಕರ್ಣಿ ಹೇಳಿದರು.

ವೈಶಿಷ್ಟ್ಯಗಳು: ಯುರೋಪಿನ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಭಾರತದ ರಸ್ತೆಗಳಿಗೆ ಈ ಟ್ರಕ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಹೊಚ್ಚಹೊಸ ‘ಅಜುರಾ’, ಅತ್ಯಾಧುನಿಕ ‘ಟಾಟಾ ಟ್ರಕ್ಸ್.ಇವಿ’ ಶ್ರೇಣಿ ಮತ್ತು ಈಗಾಗಲೇ ಜನಪ್ರಿಯವಾಗಿರುವ ಪ್ರೈಮಾ, ಸಿಗ್ನಾ ಹಾಗೂ ಅಲ್ಟ್ರಾ ವಾಹನಗಳ ಸುಧಾರಿತ ಆವೃತ್ತಿಗಳನ್ನು ಬಿಡುಗಡೆ ಮಾಡಲಾಗಿದೆ.

‘ಅಜುರಾ’ ಶ್ರೇಣಿಯ ಟ್ರಕ್, ಮಧ್ಯಮ ಮತ್ತು ಹಗುರವಾದ ವಾಣಿಜ್ಯ ವಾಹನ (ಐಎಲ್ಎಂಸಿವಿ) ವಿಭಾಗದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ, ಹೆಚ್ಚಿನ ಸೌಕರ್ಯ ಮತ್ತು ಹೆಚ್ಚಿನ ಅವಧಿಗೆ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಉತ್ಪಾದಕತೆ, ಸುರಕ್ಷತೆ ಮತ್ತು ಆರಾಮದಾಯಕ ಚಾಲನೆಗೆ ಅನುಕೂಲ ಆಗುವಂತೆ ಸಿದ್ಧಪಡಿಸಲಾಗಿದೆ ಎಂದು ಕಂಪನಿ ಹೇಳಿದೆ.

(ಕಂಪನಿಯ ಆಹ್ವಾನದ ಮೇರೆಗೆ ಪ್ರತಿನಿಧಿ ನವದೆಹಲಿಗೆ ತೆರಳಿದ್ದರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.