ADVERTISEMENT

ಭಾರತದ ಕಾರು ಮಾರುಕಟ್ಟೆಗೆ ಹೊಸ ಸಂಚಲನ ತಂದ ಜಪಾನ್‌ನ ಒಸಾಮು ಸುಜುಕಿ ನಿಧನ

ರಾಯಿಟರ್ಸ್
Published 27 ಡಿಸೆಂಬರ್ 2024, 10:21 IST
Last Updated 27 ಡಿಸೆಂಬರ್ 2024, 10:21 IST
<div class="paragraphs"><p>ಒಸಾಮು ಸುಜುಕಿ</p></div>

ಒಸಾಮು ಸುಜುಕಿ

   

ರಾಯಿಟರ್ಸ್ ಚಿತ್ರ

ಟೊಕಿಯೊ: ಮಾರುತಿ–ಸುಜುಕಿ ಮೂಲಕ ಭಾರತದ ವಾಹನ ಲೋಕದಲ್ಲಿ ಕ್ರಾಂತಿಗೆ ಕಾರಣರಾದ ಜಪಾನ್‌ನ ಒಸಾಮು ಸುಜುಕಿ ಅವರು ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

ADVERTISEMENT

ಸುಜುಕಿ ಮೋಟಾರು ಕಂಪನಿಯನ್ನು ಮುನ್ನಡೆಸಿದ ಒಸಾಮು ಅವರು ನಾಲ್ಕು ದಶಕಗಳ ಕಾಲ ಕಂಪನಿಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವುದರ ಜತೆಗೆ, ಭಾರತದಲ್ಲೂ ಸುಜುಕಿ ಕಂಪನಿಯ ಬೆಳವಣಿಗೆಗೆ ಶ್ರಮಿಸಿದವರು.

660 ಸಿಸಿ ಸಾಮರ್ಥ್ಯದ ಅಗ್ಗದ ಹಾಗೂ ಪುಟ್ಟ ಕಾರುಗಳನ್ನು ಉತ್ಪಾದಿಸುವ ಮೂಲಕ ಗ್ರಾಹಕರಿಗೆ ತೆರಿಗೆ ಹೊರೆಯನ್ನೂ ಒಸಾಮು ತಗ್ಗಿಸಿದ್ದರು. 

ಒಸಾಮು ಅವರು ಮತ್ಸುಡಾ ಕುಟುಂಬಕ್ಕೆ ಸೇರಿದವರಾಗಿದ್ದರು. ಆದರೆ ಪತ್ನಿಯ ಕುಟುಂಬದ ಉಪನಾಮ ಸುಜುಕಿ ಇದ್ದಿದ್ದರಿಂದ ಹಾಗೂ ಗಂಡು ಸಂತಾನವಿಲ್ಲದ ಕುಟುಂಬದ ಹೆಣ್ಣುಮಗಳನ್ನು ವರಿಸಿದ್ದರಿಂದ ಜಪಾನ್‌ನ ಸಂಪ್ರದಾಯದಂತೆ ಅಲ್ಲಿಯ ಉಪನಾಮವನ್ನೇ ಇಟ್ಟುಕೊಂಡರು.

ಬ್ಯಾಂಕ್ ಉದ್ಯೋಗಿಯಾಗಿದ್ದ ಒಸಾಮು, ನಂತರ ಪತ್ನಿಯ ಅಜ್ಜ ಸ್ಥಾಪಿಸಿದ್ದ ಕಂಪನಿಯಲ್ಲಿ ಕೆಲಸ ಆರಂಭಿಸಿದರು. 1958ರಲ್ಲಿ ಕಂಪನಿ ಸೇರಿದರೂ, ಕೇವಲ ಎರಡೇ ದಶಕದಲ್ಲಿ ಉನ್ನತ ಹುದ್ದೆಗೇರಿದರು. ಹೊಸ ಪರಿಸರ ನೀತಿಗೆ ಪೂರಕವಾಗಿ ಎಂಜಿನ್‌ ಅನ್ನು ಟೊಯೊಟಾದಿಂದ ಪಡೆಯುವ ಮೂಲಕ 1970ರಲ್ಲಿ ಸುಜುಕಿ ಕಂಪನಿಯನ್ನು ಒಸಾಮು ಉಳಿಸಿದರು. 

ಅಲ್ಲಿಂದ ಆಲ್ಟೊ ಮಿನಿವಾಹನವು ಭಾರೀ ಬೇಡಿಕೆ ಪಡೆಯಿತು. 1981ರಲ್ಲಿ ಜನರಲ್ ಮೋಟಾರ್ಸ್ ಜತೆ ಸುಜುಕಿ ಕೈಜೋಡಿಸಿತು. 

ಆಲ್ಟೊ ಕಾರಿನೊಂದಿಗೆ ಒಸಾಮು ಸುಜುಕಿ

ಭಾರತಕ್ಕೆ ಕಾಲಿಟ್ಟ ಸುಜುಕಿ

ಕಂಪನಿಯು ತನ್ನ ಒಂದು ವರ್ಷದ ಆದಾಯವನ್ನು ಭಾರತದಲ್ಲಿ ಕಂಪನಿ ಸ್ಥಾಪಿಸಲು ಖರ್ಚು ಮಾಡುವ ಮೂಲಕ ದೊಡ್ಡ ಸವಾಲನ್ನು ಎದುರಿಸಿತು. ಒಸಾಮು ಅವರು ವೈಯಕ್ತಿಕ ಆಸಕ್ತಿಯಿಂದ ಹಾಗೂ ಜಗತ್ತಿನ ಯಾವುದಾದರೂ ರಾಷ್ಟ್ರದಲ್ಲಿ ನಂ.1 ಆಗಲೇಬೇಕು ಎಂಬ ಛಲದಿಂದಾಗಿ ತಮ್ಮ ಕನಸಿಗೆ ರೆಕ್ಕೆ ಕಟ್ಟಿದರು. ಆ ಸಂದರ್ಭದಲ್ಲಿ ಭಾರತದಲ್ಲಿ ವಾರ್ಷಿಕ 40 ಸಾವಿರಕ್ಕಿಂತಲೂ ಕಡಿಮೆ ಕಾರುಗಳು ಮಾರಾಟವಾಗುತ್ತಿದ್ದವು. ಅದರಲ್ಲೂ ಬ್ರಿಟಿಷ್ ಕಂಪನಿಗಳ ಪಾರುಪತ್ಯವೇ ನಡೆದಿತ್ತು.

1971ರಲ್ಲಿ ಸಂಜಯ್ ಗಾಂಧಿ ಅವರ ಕನಸಿನ ಯೋಜನೆಯಾಗಿ ಮಾರುತಿ ಕಂಪನಿಯನ್ನು ಸರ್ಕಾರ ಪ್ರಾರಂಭಿಸಿತ್ತು. ಆ ಮೂಲಕ ಭಾರತದ ಜನರಿಗೆ ಸ್ವದೇಶಿ ನಿರ್ಮಿತ, ಅಗ್ಗದ ಕಾರು ತಯಾರಿಸಿ ನೀಡುವ ಯೋಜನೆಯನ್ನು ಅವರು ಹೊಂದಿದ್ದರು. ಇದನ್ನು ಸಾಕಾರಗೊಳಿಸಲು ಒಂದು ವಿದೇಶಿ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಬಯಸಿದ್ದರು. ಹೀಗಾಗಿ ಆರಂಭದಲ್ಲಿ ರಿನೋದೊಂದಿಗೆ ಪಾಲುದಾರಿಕೆಗೆ ಸಜ್ಜಾಗುವ ಮೂಲಕ ಸೆಡಾನ್‌ ಮಾದರಿಯ ಕಾರನ್ನು ಅಭಿವೃದ್ಧಿಪಡಿಸುವ ಯೋಜನೆ ಹೊಂದಲಾಗಿತ್ತು. ಆದರೆ ಅದು ತೀರಾ ದುಬಾರಿ ಮತ್ತು ಇಂಧನ ಕ್ಷಮತೆ ಅಷ್ಟಾಗಿ ಇರದ ಕಾರಣ ಆ ಯೋಜನೆ ನೆನೆಗುದಿಗೆ ಬಿದ್ದಿತು.

ಆ ಸಂದರ್ಭದಲ್ಲಿ ಮಾರುತಿಯು ವಿವಿಧ ಕಂಪನಿಗಳ ಕದ ತಟ್ಟಿತು. ಇದರಲ್ಲಿ ಫಿಯಟ್‌ ಹಾಗೂ ಸುಬರು ಕೂಡಾ ಸೇರಿತ್ತು. ಈ ನಡುವೆ ಮಾರುತಿಯು ಜಪಾನ್‌ನ ಡೈಹಾಟ್ಸು ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಆದರೆ ಅದು ಮುರಿದುಬಿದ್ದ ಮಾಹಿತಿ ಪಡೆದ ಸುಜುಕಿ, ತಮಗೊಂದು ಅವಕಾಶ ನೀಡುವಂತೆ ಮಾಹಿತಿ ಮುಟ್ಟಿಸಿದ್ದರು. ಹೀಗೆ ಸುಜುಕಿ ಜತೆಗೂಡಿದ ಮಾರುತಿ, ಮತ್ತೆಂದೂ ಹಿಂದೆ ತಿರುಗಿ ನೋಡುವಂತೆ ಮಾಡಲಿಲ್ಲ. 

ಮಾರುತಿ ಹಾಗೂ ಸುಜುಕಿ ಜತೆಗೂಡಿ ಮೊದಲು ಹೊರತಂದಿದ್ದೇ ‘ಮಾರುತಿ 800’ ಕಾರನ್ನು. ಆಲ್ಟೊ ಕಾರಿನ ಪ್ಲಾಟ್‌ಫಾರ್ಮ್‌ನಡಿ ಸಿದ್ಧಗೊಂಡ ಈ ಕಾರು 1983ರಲ್ಲಿ ಬಿಡುಗಡೆಗೊಂಡಿತು. ಜತೆಗೆ ಭಾರೀ ಜನಪ್ರಿಯತೆಯನ್ನೂ ಪಡೆಯಿತು. ಸದ್ಯ ಮಾರುತಿ ಸುಜುಕಿ ಕಂಪನಿಯು ದೇಶದ ಪ್ರಯಾಣಿಕ ವಾಹನ ಕ್ಷೇತ್ರದಲ್ಲಿ ಶೇ 40ರಷ್ಟು ಪಾಲನ್ನು ಹೊಂದಿದೆ.

ವೃತ್ತಿ ಸ್ಥಳದಲ್ಲಿ ಸಮಾನತೆ ಇರಬೇಕು ಎಂಬ ನಿಯಮವನ್ನು ರೂಪಿಸಿದ್ದ ಸುಜುಕಿ, ಕಾರ್ಖಾನೆ, ಕಚೇರಿ ಎಲ್ಲಾ ಕಡೆ ಸಮವಸ್ತ್ರವನ್ನು ಜಾರಿಗೆ ತಂದರು. ಜತೆಗೆ ಕಾರ್ಮಿಕರಿಂದ ಅಧಿಕಾರಿಗಳವರೆಗೂ ಒಂದೇ ಕ್ಯಾಂಟೀನ್ ಬಳಸುವುದನ್ನೂ ಕಡ್ಡಾಯಗೊಳಿಸಿದ್ದರು.

ಒಸಾಮು ಸುಜುಕಿ ಅವರು ತಮ್ಮ 80ನೇ ಜನ್ಮದಿನದದಂದು ಫೋಕ್ಸ್‌ವ್ಯಾಗನ್ ಕಂಪನಿಯೊಂದಿಗೆ (2009ರಲ್ಲಿ) ಒಪ್ಪಂದ ಮಾಡಿಕೊಂಡರು. ಆದರೆ ಇದು ಕಂಪನಿಗೆ ದುಬಾರಿ ಎನಿಸಿತು. ಸುಜುಕಿ ಕಂಪನಿಯು ತಾನು ಉತ್ಪಾದಿಸುವ ಕಾರುಗಳಿಗೆ ಡೀಸೆಲ್ ಎಂಜಿನ್ ಅನ್ನು ಫಿಯಟ್‌ನಿಂದ ಖರೀದಿಸಲು ಮುಂದಾಯಿತು. ಇದು ಫೋಕ್ಸ್‌ವ್ಯಾಗನ್‌ ಕಂಪನಿಯ ಕಣ್ಣು ಕೆಂಪಗಾಗಿಸಿತು. ಈ ಪ್ರಕರಣ ಮುಂದೆ ಅಂತರರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತು. ಸುಮಾರು 2 ವರ್ಷಗಳ ವಾದ ಹಾಗೂ ಪ್ರತಿವಾದದ ನಂತರ ಜರ್ಮನಿಯ ಕಾರು ಕಂಪನಿಗೆ ನೀಡಿದ್ದ ಶೇ 19.9ರಷ್ಟು ಪಾಲನ್ನು ಹಿಂಪಡೆಯುವಲ್ಲಿ ಸುಜುಕಿ ಯಶಸ್ವಿಯಾಯಿತು.

ಒಸಾಮು ಸುಜುಕಿ ಅವರು ಸದಾ ಗಾಲ್ಫ್‌ ಆಡುವುದನ್ನು ರೂಢಿಸಿಕೊಂಡಿದ್ದರು. 2016ರಲ್ಲಿ ಕಂಪನಿಯ ಸಿಇಒ ಆಗಿ ತಮ್ಮ ಪುತ್ರ ತೊಷಿಹಿರೊ ಅವರಿಗೆ ಅಧಿಕಾರ ನೀಡಿದರು. ಆದರೆ ತಮ್ಮ 91ನೇ ವಯಸ್ಸಿನವರೆಗೂ ಸುಜುಕಿ ಕಂಪನಿಯ ಅಧ್ಯಕ್ಷರಾಗಿಯೇ ಮುಂದುವರಿದರು. ಕೊನೆಯ ಉಸಿರಿನವರೆಗೂ ಅವರು ಕಂಪನಿಯ ಸಲಹಾ ಮಂಡಳಿಯ ಉನ್ನತ ಹುದ್ದೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.