ADVERTISEMENT

ಮನೆಯಲ್ಲೇ ಬೈಕ್‌ ಕ್ಲೀನ್‌ ಮಾಡಲು ಇಲ್ಲಿವೆ ಸುಲಭ ವಿಧಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಫೆಬ್ರುವರಿ 2026, 10:15 IST
Last Updated 14 ಫೆಬ್ರುವರಿ 2026, 10:15 IST
   

ವಾರಪೂರ್ತಿ ಹೊತ್ತು ತಿರುಗುವ ಬೈಕ್‌ಗೆ ವಾರಾಂತ್ಯದಲ್ಲಿ ಮಜ್ಜನ ಅಗತ್ಯವಾಗಿರುತ್ತದೆ. ಕಚೇರಿಗೆ, ಕಾಲೇಜಿಗೆ ಅಥವಾ ಬೇರೆ ಯಾವುದೋ ಕೆಲಸಕ್ಕೆ ಹೋಗಬೇಕೆಂದರೆ ಹೆಚ್ಚಿನವರು ಆಯ್ಕೆ ಮಾಡಿಕೊಳ್ಳುವುದು ಬೈಕ್‌ಗಳನ್ನೇ. ಆದರೆ ಗುಂಡಿ ತುಂಬಿದ ರಸ್ತೆ, ಗಲೀಜು ಹರಿಯುವ ರಸ್ತೆ, ದೂಳು ತುಂಬಿದ ವಾತಾವರಣದಲ್ಲಿ ತನ್ನ ಕರ್ತವ್ಯ ಮರೆಯದ ಬೈಕ್‌ ಅನ್ನು ಕನಿಷ್ಠ ವಾರದಲ್ಲಿ ಒಮ್ಮೆಯಾದರೂ ಶುಚಿಗೊಳಿಸಿ, ಹದ ಮಾಡುವ ಅಗತ್ಯ ಇದ್ದೇ ಇರುತ್ತದೆ.

ಮನೆಯಲ್ಲೇ ಬೈಕ್‌ಅನ್ನು ಸ್ವಚ್ಛಗೊಳಿಸುವ ವಿಧಾನ

ಬೈಕ್‌ಗಳಲ್ಲಿ ಎರಡು ವಿಧ. ಒಂದು ಸ್ಕೂಟರ್, ಇನ್ನೊಂದು ಮೋಟರ್ ಬೈಕ್‌.

ಮೋಟರ್‌ ಬೈಕ್‌ಗಳನ್ನು ಕ್ಲೀನ್‌ ಮಾಡಲು ಮೊದಲು ಮಧ್ಯದ ಸ್ಟ್ಯಾಂಡ್‌ ಹಾಕಿ ನಿಲ್ಲಿಸಿಕೊಳ್ಳಿ. ನಂತರ ಮೊದಲು ಸ್ವಚ್ಛಗೊಳಿಸಬೇಕಿರುವುದು ಚೈನ್‌ಗಳನ್ನು. ಚೈನ್‌ ಕ್ಲೀನ್‌ ಮಾಡುವ ಲೂಬ್ಸ್‌ಗಳ ಮೂಲಕ ಅಥವಾ ಡೀಸೆಲ್‌ ಮೂಲಕ ಸ್ವಚ್ಛಗೊಳಿಸಬಹುದು. ಏಕೆಂದರೆ ಗಾಡಿ ಸ್ವಚ್ಛಗೊಳಿಸಿದ ನಂತರ ಚೈನ್‌ ಕ್ಲೀನ್‌ ಮಾಡಿದರೆ ಅದರಲ್ಲಿರುವ ಕೊಳೆ ರಿಮ್ಸ್‌ಗಳಿಗೆ ಬರುತ್ತದೆ.

ADVERTISEMENT

ನಂತರ ಚಕ್ರಗಳು. ಚಕ್ರಗಳಲ್ಲಿ ಎರಡು ವಿಧ. ಸ್ಪೋಕ್‌ ವೀಲ್‌ ಮತ್ತು ಮ್ಯಾಗ್‌ ವೀಲ್. ಸ್ಪೋಕ್‌ ವೀಲ್ಸ್‌ ಎಂದರೆ ಸೈಕಲ್‌ಗಳಲ್ಲಿ ಇರುವಂತೆ ಹಲವು ಕಡ್ಡಿಗಳಿರುತ್ತವೆ. ಮ್ಯಾಗ್ ವೀಲ್‌ಗಳಲ್ಲಿ ನಾಲ್ಕೈದು ಕಡ್ಡಿಗಳಿರುತ್ತವೆ. ಹೀಗಾಗಿ ಮ್ಯಾಗ್‌ ವೀಲ್ ಇದ್ದರೆ ಸ್ವಚ್ಛಗೊಳಿಸುವುದು ಸುಲಭ. ಪ್ರೆಶರ್‌ ವಾಷರ್‌ ಮೂಲಕ ಚಕ್ರಗಳು ಸೇರಿ ಇಡೀ ಬೈಕ್‌ಗೆ ನೀರನ್ನು ಸೋಕಿಸಿ. ಇಲ್ಲವಾದರೆ ಬಕೆಟ್‌ನಲ್ಲಿ ನೀರು ತುಂಬಿಸಿಕೊಂಡು ಜೋರಾಗಿ ಸೋಕಿಸಿ. ಮುಖ್ಯವಾಗಿ ಚಕ್ರಗಳ ಮೇಲೆ, ರಿಮ್‌ಗಳ ಮೇಲೆ ನೀರನ್ನು ಹಾಕಿ ಸ್ವಚ್ಛಗೊಳಿಸಿಕೊಳ್ಳಿ.

ನಂತರ ಸ್ವಚ್ಛವಾದ ಬಟ್ಟೆಯ ಮೂಲಕ ಒರೆಸಿಕೊಳ್ಳಿ. ನೆನಪಿಡಿ, ಗಾಡಿಯ ಮೇಲೆ ಧೂಳು ಇರದಂತೆ ನೋಡಿಕೊಂಡು ಒರೆಸಿಕೊಳ್ಳಿ. ಏಕೆಂದರೆ ಬೈಕ್‌ ಮೇಲೆ ಧೂಳು ಇದ್ದರೆ ಬಟ್ಟೆಯ ಮೂಲಕ ಒರೆಸಿದಾಗ ತರಚಿದಂತ ಗೀರುಗಳು ಬೀಳಬಹುದು.

ಅದರ ನಂತರ ಬಕೆಟ್‌ನಲ್ಲಿ ನೀರು ತುಂಬಿಸಿ ಅದಕ್ಕೆ ಶಾಂಪೂ ಹಾಕಿ ಚೆನ್ನಾಗಿ ನೊರೆ ಬರುವಂತೆ ಮಾಡಿಕೊಳ್ಳಿ. ಅದನ್ನು ಗಾಡಿಯ ಮೇಲೆ ಹಾಕಿ ಮೈಕ್ರೋ ಫೈಬರ್‌ ಬಟ್ಟೆಯ ಮೂಲಕ ಒರೆಸಿಕೊಳ್ಳಿ. ನಂತರ ಕೊನೆಯಲ್ಲಿ ಸ್ಚಚ್ಛವಾದ ನೀರನ್ನು ಹಾಕಿ ಶುಚಿಗೊಳಿಸಿಕೊಳ್ಳಿ.

ಬೈಕ್‌ನ ಕನ್ನಡಿಗಳನ್ನು ಸ್ವಚ್ಛಗೊಳಿಸಲು ಕೋಲಿನ್‌ ಬಳಸಬಹುದು.

ಮೋಟರ್ ಬೈಕ್ ಸ್ವಚ್ಛಗೊಳಿಸುವ ವಿಧಾನ

ಪ್ರೆಶರ್‌ ವಾಷರ್‌ ಇಲ್ಲದಿದ್ದರೆ ಈಗ ಮಾರುಕಟ್ಟೆ, ಕ್ವಿಕ್‌ ಕಾಮರ್ಸ್‌ ಆ್ಯಪ್‌ಗಳಲ್ಲಿ ಸಿಗುವ ಬಾಟಲ್ ವಾಟರ್‌ ಸ್ಪ್ರೇಯರ್ ಗನ್‌ಗಳ ಮೂಲಕ ಬೈಕ್‌ಗಳನ್ನು ಸ್ವಚ್ಛಗೊಳಿಸಬಹುದು. ಇವುಗಳನ್ನು ಮನೆಯಲ್ಲಿರುವ ಬಾಟಲಿಗಳಿಗೆ ಅಳವಡಿಸಿಕೊಂಡೂ ಬಳಸಬಹುದು.

ಬಾಟಲ್ ವಾಟರ್‌ ಸ್ಪ್ರೇಯರ್ ಗನ್‌

ನಗರಗಳಲ್ಲಿ ಇದ್ದವರು ಗಮನಿಸಲೇಬೇಕಾದ ಸಂಗತಿಯೆಂದರೆ ನೀರಿನ ಬಗ್ಗೆ. ಏಕೆಂದರೆ ನಗರಗಳಲ್ಲಿ ಸಾಮಾನ್ಯವಾಗಿ ಕೊಳವೆಬಾವಿ ಅಥವಾ ಟ್ಯಾಂಕರ್‌ ನೀರನ್ನು ಬಳಸಲಾಗುತ್ತದೆ. ಈ ನೀರು ಗಡುಸಾಗಿ ಇರುವ ಕಾರಣ ಬೈಕ್‌ ತೊಳೆದಾಗ ಕಲೆಗಳು ಉಳಿಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೊನೆಯಲ್ಲಿ ಒಣ ಬಟ್ಟೆಯಿಂದ ಮತ್ತೊಮ್ಮೆ ಒರೆಸಿಕೊಳ್ಳಬೇಕು.

ಸ್ಕೂಟಿಗಳನ್ನು ಹೀಗೆ ಶುಚಿಗೊಳಿಸಿ

ಸ್ಕೂಟರ್‌ಗಳನ್ನು ಶುಚಿಗೊಳಿಸುವುದು ಬಹಳ ಸುಲಭ. ಆರಂಭದಲ್ಲಿ ಪ್ರೆಶರ್ ವಾಷರ್ ಮೂಲಕ ಅಥವಾ ಬಕೆಟ್‌ನಲ್ಲಿ ನೀರನ್ನು ಹಾಕಿಕೊಂಡು ಜೋರಾಗಿ ಸೋಕಿಸಬೇಕು. ನಂತರ ಶಾಂಪೂ ಮಿಶ್ರಿತ ನೀರಿನಲ್ಲಿ ಮೈಕ್ರೋ ಫೈಬರ್ ಬಟ್ಟೆಯನ್ನು ನೆನೆಸಿಕೊಂಡು ಸ್ಕೂಟರ್‌ನ ಸೀಟ್‌, ಚಕ್ರ ಸೇರಿ ಎಲ್ಲಾ ಭಾಗಗಳನ್ನು ಚೆನ್ನಾಗಿ ಉಜ್ಜಿ ತೊಳೆದುಕೊಂಡು ನೀರು ಹಾಕಿದರೆ ಸ್ವಚ್ಛವಾಗುತ್ತದೆ. ಕೊನೆಯಲ್ಲಿ ಒಣಗಿದ ಕಾಟನ್‌ ಬಟ್ಟೆಗಳ ಮೂಲಕ ಒರೆಸಿಕೊಂಡರೆ ಪಳ ಪಳ ಹೊಳೆಯುವ ಸ್ಕೂಟರ್ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.