ನವದೆಹಲಿ: ‘ವಿದ್ಯುತ್‌ಚಾಲಿತ ವಾಹನಗಳ ತಯಾರಿಕಾ ಕಂಪನಿ ಟೆಸ್ಲಾ ಭಾರತದಲ್ಲಿ ತಯಾರಿಕಾ ಘಟಕ ಸ್ಥಾಪಿಸಲು ಆಸಕ್ತಿ ಹೊಂದಿಲ್ಲ. ಆದರೆ, ಮಳಿಗೆಗಳನ್ನು ತೆರೆಯುವ ಉದ್ದೇಶವನ್ನು ಹೊಂದಿದೆ’ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸೋಮವಾರ ತಿಳಿಸಿದ್ದಾರೆ.
ಭಾರತದಲ್ಲಿ ವಿದ್ಯುತ್‌ಚಾಲಿತ ಕಾರುಗಳ ಉತ್ಪಾದನೆಯನ್ನು ಉತ್ತೇಜಿಸುವ ಯೋಜನೆಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಕಳೆದ ವರ್ಷ ಮಾರ್ಚ್ 15ರಂದು ಈ ಯೋಜನೆಯನ್ನು ಪ್ರಕಟಿಸಲಾಗಿದ್ದರೂ ಈಗ ಇದರ ಮಾರ್ಗಸೂಚಿಗಳನ್ನು ಹೊರಡಿಸಲಾಯಿತು ಎಂದು ಹೇಳಿದ್ದಾರೆ.
ಮರ್ಸಿಡೀಸ್ ಬೆಂಜ್, ಸ್ಕೋಡಾ–ಫೋಕ್ಸ್‌ವ್ಯಾಗನ್, ಹುಂಡೈ ಮತ್ತು ಕಿಯಾ ಸೇರಿದಂತೆ ಜಾಗತಿಕ ಆಟೊಮೊಬೈಲ್ ತಯಾರಕರು ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಆಸಕ್ತಿ ತೋರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇಲ್ಲಿಯವರೆಗೆ ಟೆಸ್ಲಾ ಕಾರುಗಳ ತಯಾರಿಕಾ ಘಟಕ ಸ್ಥಾಪಿಸಲು ಆಸಕ್ತಿ ತೋರಿಸಿಲ್ಲ. ಭಾರತದಲ್ಲಿ ವಿದ್ಯುತ್‌ಚಾಲಿತ ಕಾರುಗಳ ತಯಾರಕರ ಸಭೆಯಲ್ಲಿ ಟೆಸ್ಲಾದ ಪ್ರತಿನಿಧಿಗಳು ಮೊದಲ ಸುತ್ತಿನ ಪಾಲುದಾರರ ಚರ್ಚೆಗಳಲ್ಲಿ ಮಾತ್ರ ಭಾಗವಹಿಸಿದ್ದರು. ಎರಡು ಮತ್ತು ಮೂರನೇ ಸುತ್ತಿನ ಚರ್ಚೆಗಳಲ್ಲಿ ಭಾಗವಹಿಸಿರಲಿಲ್ಲ ಎಂದು ತಿಳಿಸಿದ್ದಾರೆ.
‘ಭಾರತ ವಿಧಿಸುವ ಸುಂಕ ತಪ್ಪಿಸಿಕೊಳ್ಳಲು ಟೆಸ್ಲಾ ಸಿಇಒ ಇಲಾನ್ ಮಸ್ಕ್ ಅವರು ಅಲ್ಲಿಯೇ ಟೆಸ್ಲಾ ವಿದ್ಯುತ್‌ಚಾಲಿತ ಕಾರು ತಯಾರಿಕಾ ಘಟಕ ಸ್ಥಾಪಿಸಿದರೆ, ಅದು ಅಮೆರಿಕಕ್ಕೆ ಮಾಡುವ ಅನ್ಯಾಯವಾಗಲಿದೆ’ ಎಂದು ಇತ್ತೀಚೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.
ಇ.ವಿ ಕಾರು ಉತ್ಪಾದನೆಗೆ ಮಾರ್ಗಸೂಚಿ ಪ್ರಕಟ
ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ (ಇ.ವಿ) ಉತ್ತೇಜನ ನೀಡುವ ಉದ್ದೇಶದ ಬೃಹತ್ ಹೂಡಿಕೆ ಯೋಜನೆಯನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಘೋಷಿಸಿದರು.
ದೇಶದಲ್ಲಿ ಭೂಸಾರಿಗೆ ಕ್ಷೇತ್ರದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವನ್ನು ಈಡೇರಿಸುವ ಗುರಿಯೊಂದಿಗೆ ಈ ಹೂಡಿಕೆ ಯೋಜನೆಯನ್ನು ಘೋಷಣೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಈ ಯೋಜನೆಯು ಜಾಗತಿಕ ಮಟ್ಟದ ವಿದ್ಯುತ್ ಚಾಲಿತ ವಾಹನಗಳ ತಯಾರಕರನ್ನು ಭಾರತದಲ್ಲಿ ಹೂಡಿಕೆ ಮಾಡಲು ಮತ್ತು ದೇಶೀಯವಾಗಿಯೇ ಕಾರುಗಳನ್ನು ತಯಾರಿಸಲು ಆಕರ್ಷಿಸುವ ಗುರಿಯನ್ನು ಹೊಂದಿದೆ. ಮೂರು ವರ್ಷದಲ್ಲಿ ಕಂಪನಿಗಳು ಕನಿಷ್ಠ ₹4,150 ಕೋಟಿ ಹೂಡಿಕೆ ಮಾಡಬೇಕಿದೆ. ಈ ಕಂಪನಿಗಳಿಗೆ ಆಮದು ಸುಂಕದಲ್ಲಿ ರಿಯಾಯಿತಿ ಸಿಗಲಿದೆ ಎಂದರು.
ಯೋಜನೆಯಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ. ಆರಂಭದಲ್ಲಿ 120 ದಿನಗಳವರೆಗೆ ವಿಂಡೋ ತೆರೆದಿರುತ್ತದೆ. ಭವಿಷ್ಯದಲ್ಲಿ ಅಗತ್ಯವಿರುವಂತೆ ಸಚಿವಾಲಯವು ಅದನ್ನು ಪುನಃ ತೆರೆಯಬಹುದು. ಈ ಯೋಜನೆಯು 2026ರ ಮಾರ್ಚ್ 15ರ ವರೆಗೆ ಅರ್ಜಿಗಳನ್ನು ಸ್ವೀಕರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.