
ಮೈಸ್ಕೂರು ಸಿಲ್ಕ್ ಸೀರೆಯಲ್ಲಿ ಕಳೆಕಳೆಯಾಗಿರುವ ಹೆಂಗಳೆಯರು
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅದರಲ್ಲೂ ಇನ್‌ಸ್ಟಾಗ್ರಾಮ್‌ನಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ (ಕೆಎಸ್‌ಐಸಿ) ಮೈಸೂರು ಸಿಲ್ಕ್ ಸೀರೆಗಳು ಭಾರಿ ಟ್ರೆಂಡ್ ಆಗಿವೆ. ಹೆಂಗಳೆಯರು ಈ ಸೀರೆ ಖರೀದಿಗೆ ಏಕೆ ಮುಗಿ ಬೀಳುತ್ತಿದ್ದಾರೆ. ಅಷ್ಟಕ್ಕೂ ಈ ಸೀರೆ ಇಷ್ಟೊಂದು ಕ್ರೇಜ್ ಹುಟ್ಟು ಹಾಕಿದ್ದು ಹೇಗೆ..
ಈಗಂತೂ ಸಾಮಾಜಿಕ ಮಾಧ್ಯಮಗಳೇ ಖರೀದಿಯ ಕೇಂದ್ರ ಬಿಂದು. ಉಪ್ಪಿನಿಂದ ಹಿಡಿದು ಬಟ್ಟೆಯವರೆಗೂ ಎಲ್ಲದಕ್ಕೂ ಆನ್‌ಲೈನ್ ಶಾಪಿಂಗ್ ಇದೀಗ ಸಾಮಾನ್ಯವಾಗಿದೆ. ಆದರೆ ಇನ್‌ಸ್ಟಾಗ್ರಾಮ್‌ನಲ್ಲಿ ಇನ್‌ಫ್ಲುಯೆನ್ಸರ್‌ಗಳ ಪ್ರಭಾವ ಹೆಚ್ಚಾಗಿದೆ. ಪ್ರತಿ ಭಾರಿ ತಾವು ತೊಡುವ ಸೀರೆ, ಆಭರಣಗಳ ಮಾಹಿತಿ ಹಂಚಿಕೊಳ್ಳುತ್ತ ಇತರರನ್ನು ಪ್ರಭಾವಿಸುತ್ತಾರೆ. ಇದೇ ಕಾರಣದಿಂದ ಇದೀಗ ಕೆಎಸ್‌ಐಸಿ ಮೈಸೂರು ಸಿಲ್ಕ್ ಸೀರೆಗಳ ಟ್ರೆಂಡ್ ಪ್ರಾರಂಭವಾಗಿದೆ.
ಕೆಎಸ್‌ಐಸಿ ಸೀರೆಗಳ ಖರೀದಿಸಲು ಮೈಸೂರಿಗೆ ತೆರಳುವ, ಸೀರೆ ಖರೀದಿ ನಂತರ ಅನ್‌ಬಾಕ್ಸ್ ವಿಡಿಯೊ, ಸೀರೆಯಲ್ಲಿ ಹೇಗೆ ಕಾಣ್ತಾ ಇದ್ದೀನಿ.. ಹೀಗೆ ಇನ್‌ಫ್ಲುಯೆನ್ಸರ್‌ಗಳಿಂದ ಹಿಡಿದು ಸಾಮಾನ್ಯ ಜನರು ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಮಹಿಳೆಯರು ಕೆಎಸ್‌ಐಸಿ ಸೀರೆ ಖರೀದಿಸಲು ಹೆಚ್ಚು ಒಲವು ಹೊಂದಿದ್ದಾರೆ.
ಈ ಹಿಂದೆ ಸರ್ಕಾರಿ ನೌಕರರೂ ಹಾಗೂ ಕೆಲವರು ಮಾತ್ರ ಕೆಎಸ್‌ಐಸಿ ಸೀರೆಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದರು. ಆದರೆ ಈ ಟ್ರೆಂಡ್ ಬದಲಾಗಿದೆ. ಈಗಂತೂ ನಿಶ್ಚಿತಾರ್ಥ, ಗೃಹ ಪ್ರವೇಶ, ಮದುವೆ ಸಮಾರಂಭ ಸೇರಿದಂತೆ ಇತರೆ ಶುಭ ಸಮಾರಂಭಗಳಿಗೆ ಪರಿಶುದ್ಧ ಮೈಸೂರು ರೇಷ್ಮೆ ಸೀರೆಗಳನ್ನು ಖರೀದಿಸುತ್ತಿದ್ದಾರೆ.
ಕೆಎಸ್‌ಐಸಿ ಸೀರೆಗಳನ್ನು ಖರೀದಿಸಲು ಆಗದೆ ಇರುವವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಸೆಮಿ ಮೈಸೂರು ಸಿಲ್ಕ್ ಸೀರೆಗಳು ಖರೀದಿಸುತ್ತಿದ್ದಾರೆ. ಏಕೆಂದರೆ ಪರಿಶುದ್ಧ ಮೈಸೂರು ರೇಷ್ಮೆ ಸೀರೆಗಳು ₹6 ಸಾವಿರದಿಂದ ₹30 ಸಾವಿರಕ್ಕೂ ಹೆಚ್ಚು ಬೆಲೆ ಹೊಂದಿರುತ್ತದೆ.
ಕೆಎಸ್‌ಐಸಿ ಮೈಸೂರು ಸಿಲ್ಕ್ ಸೀರೆ ಬೆಲೆ ಹಾಗೂ ವಿನ್ಯಾಸ
ಸೀರೆಯ ಜಿಎಸ್‌ಎಂ ಆಧಾರದ ಮೇಲೆ ಕೆಎಸ್‌ಐಸಿ ಸೀರೆಗಳ ಬೆಲೆ ನಿಗದಿಯಾಗುತ್ತದೆ.
100–120 ಜಿಎಸ್‌ಎಂ ಮೈಸೂರು ಸಿಲ್ಕ್ ಸೀರೆಗಳು ₹9 ಸಾವಿರದಿಂದ ₹15 ಸಾವಿರ ಇರುತ್ತದೆ
ವಿಶೇಷ ವಿನ್ಯಾಸದ ಸೀರೆಗಳು ₹20 ರಿಂದ ₹30 ಸಾವಿರಕ್ಕೂ ಹೆಚ್ಚು ಬೆಲೆ ಹೊಂದಿರುತ್ತದೆ.
ಕೆಎಸ್‌ಐಸಿ ಮೈಸೂರು ಸಿಲ್ಕ್ ಸೀರೆಯ ವಿಶೇಷತೆ ಏನು?
* ಈ ಸೀರೆಯಲ್ಲಿ ನಿಜವಾದ ಬೆಳ್ಳಿ ಅಥವಾ ಚಿನ್ನ ಮಿಶ್ರಿತ ಜರಿಗಳನ್ನು ಕಾಣಬಹುದು
* ಸೀರೆ ಸಾಫ್ಟ್ ಆಗಿ ಇರುವುದರಿಂದ ಉಡುವುದು ಸುಲಭ.
* ಗಂಡಭೇರುಂಡ ವಿನ್ಯಾಸ ಹೆಚ್ಚು ಪ್ರಸಿದ್ಧಿ ಪಡೆದಿದೆ.
* ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ.
* ಈ ಸೀರೆಗಳು ಎಲಿಗೆಂಟ್ ಜತೆಗೆ ರಿಚ್ ಲುಕ್ ನೀಡುತ್ತದೆ.
* ಕೆಎಸ್‌ಐಸಿ ಮೈಸೂರು ಸಿಲ್ಕ್ ಸೀರೆಗಳಲ್ಲಿ ಬ್ಲೌಸ್ ಪೀಸ್ ಇರುವುದಿಲ್ಲ.
ಕೆಎಸ್‌ಐಸಿ ಮೈಸೂರು ಸಿಲ್ಕ್ ಸೀರೆ ಸ್ಟೈಲ್ ಮಾಡುವುದು ಹೇಗೆ?
ನಿಮಗೆ ಸಿಂಪಲ್ ಲುಕ್ ಬೇಕಿದ್ದರೆ ಸಿಂಪಲ್ ಬ್ಲೌಸ್‌ನೊಂದಿಗೆ ಕೆಎಸ್‌ಐಸಿ ಸೀರೆಯನ್ನು ಉಟ್ಟುಕೊಳ್ಳಬಹುದು. ಇಲ್ಲವಾದರೆ ಡಿಸೈನರ್ ಬ್ಲೌಸ್‌ಗೆ ಕೆಎಸ್‌ಐಸಿ ಸೀರೆ ಉಟ್ಟರೆ ನಿಮ್ಮ ಲುಕ್ ಮತ್ತಷ್ಟು ಹೆಚ್ಚುತ್ತದೆ. ಕಾಟ್ರಸ್ಟ್ ಬ್ಲೌಸ್‌ನೊಂದಿಗೆ ಸೀರೆಗಳು ಉಡುಬಹುದು. ನಿಮ್ಮ ಸೀರೆಗಳಿಗೆ ತಕ್ಕಂತೆ ಆಭರಣಗಳನ್ನು ಮ್ಯಾಚ್ ಮಾಡಿ ಹಾಕಿಕೊಳ್ಳುವುದರಿಂದ ಸೀರೆಯ ಸೊಬಗು ಇಮ್ಮಡಿಗೊಳ್ಳುತ್ತದೆ.
ಕೆಎಸ್‌ಐಸಿ ಮೈಸೂರು ಸಿಲ್ಕ್ ಸೀರೆಯೇ ಎಂಬುವುದನ್ನು ಹೇಗೆ ಪರಿಶೀಲಿಸುವುದು?
ಕೆಎಸ್‌ಐಸಿ ಸೀರೆ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ನಕಲಿ ಸೀರೆಗಳು ಲಭ್ಯವಿದ್ದು, ಸೀರೆ ಖರೀದಿಸುವ ಮುನ್ನ ಕೆಎಸ್‌ಐಸಿ ಹಾಲ್ ಮಾರ್ಕ್ ಇದೆಯೇ ಎಂದು ಪರಿಶೀಲಿಸಬೇಕು. ಕೆಎಸ್‌ಐಸಿ ಹಾಲ್ ಮಾರ್ಕ್ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದಿರುವುದರಿಂದ ಗುಣಮಟ್ಟದಲ್ಲಿ ಯಾವುದೇ ರಾಜಿ ಇರುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.