
ಮೇಘಶ್ರೀ
ಪದೇಪದೇ ಪಾರ್ಲರ್, ಚರ್ಮತಜ್ಞರ ಕ್ಲಿನಿಕ್ಕಿಗೆ ಹೋಗುವುದಿಲ್ಲ. ಆದರೆ ಕೆಲವು ‘ಮಿನಿಮಲ್’ ಕ್ರೀಂಗಳನ್ನು ಬಳಸುತ್ತೇನೆ. ತ್ವಚೆ ಸದಾ ತೇವಯುಕ್ತವಾಗಿರಲು ಮಾಯಿಶ್ಚರೈಸರ್, ಟೋನರ್, ಬಿಸಿಲಿನಿಂದಾಗುವ ಟ್ಯಾನ್ ತಪ್ಪಿಸಲು ಸನ್‌ಸ್ಕ್ರೀನ್ ಹಚ್ಚುತ್ತೇನೆ.
ಬಿಸಿಲಿನಲ್ಲಿ ಓಡಾಡಿದಾಗ ಚರ್ಮ ಟ್ಯಾನ್ ಆದಾಗ ಗಟ್ಟಿ ಮೊಸರನ್ನು ಮುಖಕ್ಕೆ ಹಚ್ಚುತ್ತೇನೆ. ಚಮತ್ಕಾರದ ರೀತಿಯಲ್ಲಿ ಕೆಲಸ ಮಾಡುವ ಮೊಸರು ನನಗೆ ಉತ್ತಮ ಆಯ್ಕೆ ಎನಿಸಿದೆ. ಅದು ಮುಖದಲ್ಲಿ ಇರುವ ಶಾಖವನ್ನು 15 ನಿಮಿಷದಲ್ಲಿ ಹೀರಿಕೊಂಡು, ಶೇ 50ರಷ್ಟು ಟ್ಯಾನ್ ಅನ್ನು ಹೊಡೆದೋಡಿಸುತ್ತದೆ.
ಇದು ಬಿಟ್ಟರೆ ಮನೆಯಲ್ಲಿ ಕಾಫಿಪುಡಿ, ಸಕ್ಕರೆ ಹಾಗೂ ಜೇನುತುಪ್ಪದಿಂದ ಸ್ಕ್ರಬ್ ಮಾಡಿಕೊಳ್ಳುತ್ತೇನೆ. ಚರ್ಮ ಹೊಳೆಯಲು ಚೆನ್ನಾಗಿ ನೀರು ಕುಡಿಯಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಗೆ ‘ಎಬಿಸಿ’ (ಆಮ್ಲ, ಬೀಟ್ರೂಟ್, ಕ್ಯಾರೆಟ್) ಜ್ಯೂಸ್ ಕುಡಿಯುತ್ತೇನೆ. ಕೂದಲಿಗೂ ಇದು ಉತ್ತಮವಾದ್ದರಿಂದ ಈ ಜ್ಯೂಸ್‌ಗೆ ಕರಿಬೇವು ಸೇರಿಸಿಕೊಳ್ಳುತ್ತೇನೆ. ಸಮಯವಿದ್ದಾಗ ಈ ಮೂರು ಮಿಶ್ರಣದ ಐಸ್‌ಕ್ಯೂಬ್ ಮಾಡಿಟ್ಟುಕೊಂಡು, ಬಿಸಿನೀರಿಗೆ ಕ್ಯೂಬ್ ಸೇರಿಸಿ ಕುಡಿಯುತ್ತೇನೆ.
ಕೂದಲು ಉದುರುವುದನ್ನು ತಡೆಯಲು ಮನೆಯಲ್ಲೇ ತಯಾರಿಸಿದ ರೋಸ್ಮರಿ ನೀರನ್ನು ಬಳಸುತ್ತೇನೆ. ರೋಸ್ಮರಿ ಸೊಪ್ಪು ತಂದು ಅದನ್ನು ನೀರಿನಲ್ಲಿ ಲವಂಗದ ಜತೆ ಚೆನ್ನಾಗಿ ಕುದಿಸಿ, ನಿತ್ಯ ರಾತ್ರಿ ಹಚ್ಚಿಕೊಳ್ಳುತ್ತೇನೆ. ವಾರಕ್ಕೊಮ್ಮೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುತ್ತೇನೆ. ಇದು ಬಿಟ್ಟರೆ, ದೂಳಿನಿಂದ ಹಾಳಾದ ಕೂದಲನ್ನು ಎರಡು ದಿನಕ್ಕೊಮ್ಮೆ ಶ್ಯಾಂಪೂ ಬಳಸಿ ತೊಳೆಯುತ್ತೇನೆ.
ಸೌಂದರ್ಯ ಎನ್ನುವುದು ನಮ್ಮ ನಗು, ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದನ್ನು ಅವಲಂಬಿಸಿರುತ್ತದೆ. ಒಟ್ಟಾರೆ ನಮ್ಮ ವ್ಯಕ್ತಿತ್ವವೇ ಸೌಂದರ್ಯದ ಧಾತು ಆಗಿರುತ್ತದೆ. ಹಾಗಾಗಿ, ಒಳಗಿನ ಸೌಂದರ್ಯಕ್ಕೆ ಅಗತ್ಯವಿರುವ ಚಟುವಟಿಕೆಗಳನ್ನೂ ಆಗಾಗ್ಗೆ ಮಾಡುತ್ತಿರಬೇಕು. ದೃಢ ವ್ಯಕ್ತಿತ್ವವನ್ನು ಹೊಂದಲು ಬೇಕಾದ ಅಂಶಗಳನ್ನು ಅಳವಡಿಸಿಕೊಳ್ಳುವುದೂ ಸೌಂದರ್ಯ ಇಮ್ಮಡಿಯಾಗಿಸಿಕೊಳ್ಳುವುದರ ಭಾಗವೇ ಆಗಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.