
ಚಿತ್ರ: ಗೆಟ್ಟಿ
ಚಳಿಗಾಲದಲ್ಲಿ ಚರ್ಮದ ಸಮಸ್ಯೆ ಕಾಡುವುದು ಸಾಮಾನ್ಯ. ಅದಕ್ಕೆ ಕಾರಣ ಅತಿಯಾದ ಶೀತ ಗಾಳಿ ಮತ್ತು ತಣ್ಣನೆಯ ವಾತಾವರಣ.
ಶೀತ ವಾತಾವರಣದ ಬದಲಾವಣೆಯಿಂದಾಗಿ ದೇಹದಲ್ಲಿನ ಉಷ್ಣತೆ ಹೆಚ್ಚುತ್ತದೆ. ಇದರಿಂದ ಜಠರದ ಕೆಲಸ ತೀವ್ರಗೊಳ್ಳುತ್ತದೆ. ಈ ವೇಳೆ ಜಠರಕ್ಕೆ ಸಮರ್ಪಕ ಆಹಾರ ದೊರಕದಿದ್ದಾಗ ದೇಹದಲ್ಲಿ ತೇವಾಂಶ ಕಡಿಮೆಯಾಗಿ ಚರ್ಮ ಒರಟಾದಂತೆ ಕಾಣಿಸುತ್ತದೆ. ಪರಿಣಾಮ ತ್ವಚೆ ಹೊಳಪನ್ನು ಕಳೆದುಕೊಳ್ಳುತ್ತದೆ.
ಕಾಂತಿಯುತ ತ್ವಚೆಗೆ ಈ ಆಹಾರ ಸೇವಿಸಿ
ಸಾಮಾನ್ಯವಾಗಿ ಬಾಯಲ್ಲಿ ನೀರೂರಿಸುವ (ಆದರೆ ಮನೆಯಲ್ಲೇ ತಯಾರಿಸಿದ), ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಈ ಸಮಯದಲ್ಲಿ ಸೇವಿಸಬಹುದು. ಹಾಗೆಯೇ ಕೊಬ್ಬಿನಾಂಶ ಹೆಚ್ಚಿರುವ, ಜೀರ್ಣಕ್ರಿಯೆಗೆ ಕಠಿಣವಾದ ಆಹಾರಗಳನ್ನು ಕೂಡ ಈ ಸಮಯದಲ್ಲಿ ತಿನ್ನಬಹುದು. ಉತ್ತಮ ಮಾಂಸಾಹಾರವನ್ನು ಕೂಡ ಸೇವಿಸಬಹುದು. ಗೋಧಿ ಹಾಗೂ ಉದ್ದಿನಿಂದ ತಯಾರಿಸಿದ ಆಹಾರ ಪದಾರ್ಥಗಳು, ಉಪ್ಪು, ಸಿಹಿ, ಹುಳಿ ರುಚಿಯುಳ್ಳ ಪದಾರ್ಥ, ಕೊಬ್ಬಿನಾಂಶ ಹೆಚ್ಚಾಗಿರುವ ಆಹಾರ ಪದಾರ್ಥ, ಹಾಲು ಹಾಗೂ ಅದರ ಉತ್ಪನ್ನಗಳನ್ನು ಕೂಡ ಈ ಸಮಯದಲ್ಲಿ ಸೇವಿಸಬಹುದು.
ಹಸಿವನ್ನು ತಣಿಸುವಷ್ಟು ಆಹಾರ ಪದಾರ್ಥಗಳನ್ನು ಸೇವಿಸಿದಾಗ, ತೀಕ್ಷ್ಣವಾದ ಅಗ್ನಿಯು ಸರಿಯಾದ ರೀತಿಯಲ್ಲಿ ಉಪಯೋಗಿಸಲ್ಪಟ್ಟು, ದೇಹದಲ್ಲಿ ಪಚನ ಕ್ರಿಯೆ ಚೆನ್ನಾಗಿ ನಡೆದು, ತ್ವಚೆಗೆ ಉತ್ತಮ ಕಾಂತಿ ಹಾಗೂ ಹೊಳಪನ್ನು ನೀಡುವಲ್ಲಿ ಸಹಕರಿಸುತ್ತದೆ.
ಮುಖದ ಕಾಂತಿಗಾಗಿ ಅನುಸರಿಸಬಹುದಾದ ಕ್ರಮಗಳು
ಪ್ರತಿ ದಿನ ಸಂಜೆ ಎಣ್ಣೆಯಿಂದ ಮಸಾಜಾ ಮಾಡಿಕೊಳ್ಳಿ
ಕಡಲೆ ಹಿಟ್ಟು, ಮೃದು ಗುಣವುಳ್ಳ ಸೋಪು ಅಥವಾ ಫೇಸ್ ವಾಶ್‌ನಿಂದ ಮುಖವನ್ನು ತೊಳೆದುಕೊಳ್ಳಿ
ಹಾಲಿನ ಕೆನೆಯಿಂದ ಅಥವಾ ಬೆಣ್ಣೆಯಿಂದ ಮುಖಕ್ಕೆ ಮಾಲೀಶು ಮಾಡಿ
ಉತ್ತಮ ಗುಣಮಟ್ಟದ, ವೈದ್ಯರಿಂದ ಸೂಚಿಸಲ್ಪಟ್ಟ ಮಾಯಿಶ್ಚರೈಸರ್‌ಗಳ ಬಳಕೆ ಮಾಡಿ
ಚಿಟಿಕೆ ಅರಿಶಿನ, ಶ್ರೀಗಂಧ, ಕಡಲೆಹಿಟ್ಟಿನ ಜೊತೆ ಹಾಲನ್ನು ಬೆರೆಸಿ ಮುಖಕ್ಕೆ ಲೇಪವನ್ನು ಕೂಡ ಹಚ್ಚಬಹುದು.
ತುಟಿಗಳಿಗೆ ಬೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಆಗಾಗ ಹಚ್ಚಬಹುದು ಅಥವಾ ಲಿಪ್ ಬಾಮ್‌ಗಳ ಬಳಕೆಯೂ ಒಳ್ಳೆಯದು.
ಲೇಖಕರು: ಡಾ. ರಶ್ಮಿ ಪ್ರಸಾದ್, ವೈದ್ಯಾಧಿಕಾರಿಗಳು, ಶೃಂಗಾರ ಸೌಂದರ್ಯ ಚಿಕಿತ್ಸಾ ವಿಭಾಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.