ADVERTISEMENT

Budget 2025: ಮಧ್ಯಮ ವರ್ಗದವರ ನಿರೀಕ್ಷೆಯಲ್ಲಿರುವ ಪ್ರಮುಖ 10 ಬೇಡಿಕೆಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2025, 12:39 IST
Last Updated 27 ಜನವರಿ 2025, 12:39 IST
<div class="paragraphs"><p>ನಿರ್ಮಲಾ ಸೀತಾರಾಮನ್</p></div>

ನಿರ್ಮಲಾ ಸೀತಾರಾಮನ್

   

ಬೆಂಗಳೂರು: ಕೇಂದ್ರ ಬಜೆಟ್‌ ಮಂಡಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಜನರ ನಿರೀಕ್ಷೆಗಳು ಗರಿಗೆದರಿವೆ. ಆದಾಯ ತೆರಿಗೆ ಸೇರಿದಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯಾವೆಲ್ಲಾ ಬದಲಾವಣೆಗಳನ್ನು ತರಲಿದ್ದಾರೆ ಎಂದು ಮಧ್ಯಮ ವರ್ಗದವರು ಕುತೂಹಲದ ಕಣ್ಣುಗಳನ್ನು ನೆಟ್ಟಿದ್ದಾರೆ.

ಬೆಲೆ ಏರಿಕೆಯಿಂದ ತತ್ತರಿಸಿರುವ ಜನರು ಆದಾಯ ತೆರಿಗೆ ಮಿತಿ ಹೆಚ್ಚಳ, ಬ್ಯಾಟರಿ ಚಾಲಿತ ಹಾಗೂ ಕ್ರಿಪ್ಟೊ, ಗೃಹ ಸಾಲ, ಉಳಿತಾಯಕ್ಕೆ ಒಂದಷ್ಟು ಪ್ರೋತ್ಸಾಹಗಳ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

ಆದಾಯ ತೆರಿಗೆ ಸ್ಲಾಬ್‌ನಲ್ಲಿ ಬದಲಾವಣೆ ನಿರೀಕ್ಷೆ

ವೈಯಕ್ತಿಕ ಆದಾಯ ತೆರಿಗೆಯಲ್ಲಿ ಮಧ್ಯಮ ವರ್ಗಕ್ಕೆ ಒಂದಷ್ಟು ರಿಯಾಯಿತಿ ನೀಡುವ ಉದ್ದೇಶದಿಂದ ಹೊಸ ತೆರಿಗೆ ಸ್ಲಾಬ್‌ಗಳನ್ನು ಸರ್ಕಾರ ಪರಿಚಯಿಸಬೇಕು ಎಂಬ ಕೂಗು ಕೇಳಿಬಂದಿದೆ.

ಆದಾಯ ತೆರಿಗೆಯಲ್ಲಿ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಮೂಲಕ ಹಣದುಬ್ಬರಕ್ಕೆ ಪರಿಹಾರ ಕಂಡುಕೊಳ್ಳಬಹುದು. ಆದಾಯ ತೆರಿಗೆಗೆ ಕನಿಷ್ಠ ₹10ಲಕ್ಷ ಮಿತಿ ಅಳವಡಿಸಿಕೊಳ್ಳಬೇಕು. ₹15 ಲಕ್ಷ ವರೆಗಿನ ಆದಾಯಕ್ಕೆ ತೆರಿಗೆ ಮಿತಿಯನ್ನು ತಗ್ಗಿಸಬೇಕು. ಇದರಿಂದ ವೈಯಕ್ತಿಕ ಆದಾಯ ಹೆಚ್ಚಳವಾಗುವುದರಿಂದ ಮಾರುಕಟ್ಟೆಯಲ್ಲಿ ವಿನಿಯೋಗವೂ ಹೆಚ್ಚಲಿದೆ ಎಂದು ತೆರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹೊಸ ತೆರಿಗೆ ಪದ್ಧತಿಯಲ್ಲಿ ಗೃಹ ಸಾಲ ಲಾಭ

ಹೊಸ ತೆರಿಗೆ ಪದ್ಧತಿಯಲ್ಲಿ ಮನೆ ಹೊಂದುವವರನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಹಳೇ ತೆರಿಗೆ ಪದ್ಧತಿಯಲ್ಲಿ ಕಡಿಮೆ ತೆರಿಗೆ ಹೊಂದಿದವರಿಗೂ ಈ ಲಾಭ ಸಿಗುವಂತಿರಬೇಕು.

ಮನೆ ಹೊಂದಿದವರಿಗೆ ಪ್ರೋತ್ಸಾಹ

ಸೆಕ್ಷನ್‌ 24(ಬಿ) ಅಡಿಯಲ್ಲಿ ಗೃಹ ಸಾಲಕ್ಕೆ ಇದ್ದ ಹೆಚ್ಚುವರಿ ತೆರಿಗೆ ಕಡಿತ ಮಿತಿಯ ಲಾಭ ಮನೆ ಖರೀದಿಸುವವರಿಗೂ ಸಿಗಬೇಕು. ಕನಿಷ್ಠ ಒಂದು ಮನೆಗಾದರೂ, ಸಂಪೂರ್ಣ ಬಡ್ಡಿ ಪಾವತಿಸುವವರಿಗೆ ರಿಯಾಯಿತಿ ಮಿತಿಯನ್ನು ಹೆಚ್ಚಿಸಬೇಕು. ಸದ್ಯ ಇದು ಗೃಹ ಸಾಲದಿಂದ ಆದಾಯ ತೆರಿಗೆಗೆ ನೀಡುವ ವಿನಾಯಿತಿಯ ಮಿತಿ ₹2 ಲಕ್ಷಕ್ಕಿದ್ದು, ಇದನ್ನು ₹3 ಲಕ್ಷಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆಯೂ ಹೆಚ್ಚಾಗಿದೆ.

ಎನ್‌ಪಿಎಸ್‌ ಕಡಿತ ಮಿತಿ ಹೆಚ್ಚಿಸಬೇಕು

ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಗರಿಷ್ಠ ಕಡಿತ ಮಿತಿಯನ್ನು ಈಗಿರುವ ₹50 ಸಾವಿರದಿಂದ ₹1 ಲಕ್ಷಕ್ಕೆ ಹೆಚ್ಚಿಸಬೇಕು. ಅದಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಬೇಕು.

ದ್ವಿತೀಯ ದರ್ಜೆ ನಗರಗಳಿಗೂ ಮನೆ ಬಾಡಿಗೆ ಭತ್ಯೆ

ನಗರ ಪ್ರದೇಶಗಳಲ್ಲಿ ಹಣ ದುಬ್ಬರ ಪ್ರಮಾಣ ಹೆಚ್ಚಳವಾಗಿದ್ದು, ಬೆಂಗಳೂರು, ಹೈದರಾಬಾದ್ ಹಾಗೂ ಪುಣೆಯಂಥ ನಗರಗಳಲ್ಲಿ ವಾಸಿಸುವ ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆಯನ್ನು ಶೇ 50ಕ್ಕೆ ವಿಸ್ತರಿಸಬೇಕು ಎಂಬ ಬೇಡಿಕೆಯೂ ಮಧ್ಯಮ ವರ್ಗದಿಂದ ವ್ಯಕ್ತವಾಗಿದೆ.

80ಡಿ ಸೆಕ್ಷನ್‌ನಲ್ಲಿ ಬದಲಾವಣೆ ಅಗತ್ಯ

ಆರೋಗ್ಯ ಕಾಳಜಿ ಎಲ್ಲರಲ್ಲೂ ಹೆಚ್ಚಾಗಿರುವುದರಿಂದ ಹಿರಿಯ ನಾಗರಿಕರ ಆರೋಗ್ಯ ವಿಮೆಗೆ ಸೆಕ್ಷನ್ 80ಡಿ ಅಡಿಯಲ್ಲಿ ತೆರಿಗೆ ಮಿತಿಯನ್ನು ₹25 ಸಾವಿರದಿಂದ ₹50ಸಾವಿರಕ್ಕೆ ಹಾಗೂ ₹50 ಸಾವಿರದಿಂದ ₹1ಲಕ್ಷಕ್ಕೆ ಹೆಚ್ಚಿಸಬೇಕು. 

ಭವಿಷ್ಯ ನಿಧಿ ಬಡ್ಡಿ ಮೇಲಿನ ಟಿಡಿಎಸ್‌ಗೆ ವಿನಾಯಿತಿ ನೀಡಬೇಕು

ಭವಿಷ್ಯ ನಿಧಿ ಮೇಲಿನ ಬಡ್ಡಿಯು ₹2.5 ಲಕ್ಷ ಮೀರಿದಲ್ಲಿ ವಿಧಿಸಲಾಗುವ ಟಿಡಿಎಸ್‌ ಅನ್ನು ಹಣ ಹಿಂಪಡೆಯವವರೆಗಾದರೂ ಕಡಿತ ಮಾಡಬಾರದು.

ಹೂಡಿಕೆ ಮೇಲಿನ ತೆರಿಗೆ

ಭಾರತೀಯ ಷೇರು ಪೇಟೆ ಹಾಗೂ ವಿದೇಶಿ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ, ಚಿನ್ನದ ಮೇಲಿನ ನಿರಂತರ ಹೂಡಿಕೆಯಿಂದ ಸಿಗುವ ಲಾಭಕ್ಕೆ ತೆರಿಗೆ ಪ್ರಮಾಣ ತಗ್ಗಿಸಬೇಕು. ಷೇರು ಮಾರಾಟದಿಂದ ಆಗುವ ಲಾಭದ ಮೇಲಿನ ತೆರಿಗೆಯನ್ನು ಅಲ್ಪಾವಧಿಯಲ್ಲಿ ಶೇ 15ರಿಂದ ಶೇ 20ಕ್ಕೆ ಹೆಚ್ಚಿಸಲಾಗಿದೆ. ದೀರ್ಘಕಾಲದ ಷೇರುಗಳ ಮಾರಾಟದಿಂದ ಸಿಗುವ ಲಾಭಕ್ಕೆ ವಿಧಿಸುವ ತೆರಿಗೆಯನ್ನು ಶೇ 10ರಿಂದ ಶೇ 12.5ಕ್ಕೆ ಹೆಚ್ಚಿಸಲಾಗಿದೆ. ಷೇರುಗಳ ಖರೀದಿ ಮತ್ತು ಮಾರಾಟ ಮೇಲಿನ ತೆರಿಗೆಯನ್ನು ಸಂಪೂರ್ಣವಾಗಿ ತೆಗೆಯಲಾಗಿದೆ.

ಹಿರಿಯ ನಾಗರಿಕರ ಮೇಲಿನ ಆರ್ಥಿಕ ಹೊರೆ ತಗ್ಗಿಸಬೇಕು

ಹಿರಿಯ ನಾಗರಿಕರ ಮೇಲಿನ ಹಣಕಾಸಿನ ಒತ್ತಡ ತಗ್ಗಿಸಲು ಅವರಿಗೆ ಹೆಚ್ಚಿನ ವಿನಾಯಿತಿ ನೀಡಬೇಕು ಎಂಬ ಬೇಡಿಕೆಯೂ ಇದೆ ಎಂದು ತಜ್ಞರು ಹೇಳಿದ್ದಾರೆ.

80ಸಿ ಅಡಿಯಲ್ಲಿ ಮಿತಿ ಹೆಚ್ಚಳದ ನಿರೀಕ್ಷೆ

80ಸಿ ಸೆಕ್ಷನ್‌ನಲ್ಲಿ ಬದಲಾವಣೆ ಅಗತ್ಯ ಎಂದು ಮಧ್ಯಮ ವರ್ಗ ಬಯಸಿದೆ. ಸದ್ಯ ಇರುವ ₹1.5 ಲಕ್ಷ ಮಿತಿಯು 2014ರಿಂದ ಬದಲಾಗಿಲ್ಲ. ನಿಶ್ಚಿತ ಠೇವಣಿ, ಪಿಪಿಎಫ್‌ ಇತ್ಯಾದಿ ಹೂಡಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಇದು ಅವಶ್ಯಕ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.