
ಬೆಳವಣಿಗೆಯ ವಿಚಾರದಲ್ಲಿ ಸರ್ಕಾರದ ಆಲೋಚನೆ ಏನು ಎಂಬ ಬಗ್ಗೆ ಬಜೆಟ್ ಹೆಚ್ಚಿನ ಅನುಮಾನಗಳನ್ನು ಉಳಿಸಿಲ್ಲ. ದೇಶದ ಬೆಳವಣಿಗೆಗೆ ಸರ್ಕಾರ ಮಾಡುವ ಬಂಡವಾಳ ವೆಚ್ಚವು ಊರುಗೋಲಾಗಿ ನಿಲ್ಲುವುದು ಮುಂದುವರಿಯಲಿದೆ. ಇದೇ ವೇಳೆ ಹಣಕಾಸಿನ ಶಿಸ್ತನ್ನು ಕೂಡ ಕೈಬಿಡುವುದಿಲ್ಲ ಎಂದು ಬಜೆಟ್ ಹೇಳಿದೆ. ದೇಶದ ಜಿಡಿಪಿಯ ಗಾತ್ರದ ಶೇ 3.1ರಷ್ಟನ್ನು, ಅಂದರೆ ₹12.22 ಲಕ್ಷ ಕೋಟಿಯನ್ನು, ಬಂಡವಾಳ ವೆಚ್ಚಗಳಿಗಾಗಿ ಮೀಸಲು ಇಡಲಾಗಿದೆ. ಈ ಮೂಲಕ ಮೂಲಸೌಕರ್ಯ ವಲಯವು ಸರ್ಕಾರದ ಪ್ರಾಥಮಿಕ ಸನ್ನೆಗೋಲಾಗಿ ಇರಲಿದೆ.
ಕೇಂದ್ರ ಸರ್ಕಾರದ ವಿತ್ತೀಯ ಕೊರತೆ ಪ್ರಮಾಣವನ್ನು ಜಿಡಿಪಿಯ ಶೇ 4.3ಕ್ಕೆ ತಗ್ಗಿಸುವ ಗುರಿಯನ್ನು ನಿಗದಿ ಮಾಡಲಾಗಿದೆ. ಅಂದರೆ, ಬೆಳವಣಿಗೆಗೆ ಉತ್ತೇಜನ ಹಾಗೂ ಹಣಕಾಸಿನ ಶಿಸ್ತು ಪರಸ್ಪರ ಸ್ಪರ್ಧೆಗೆ ಬಿದ್ದ ಅಂಶಗಳಲ್ಲ. ಇದು ಮಹತ್ವದ ಸಂಗತಿ. ಬಾಹ್ಯ ಬೇಡಿಕೆ ಕಡಿಮೆ ಇರುವ ಹಾಗೂ ಬಂಡವಾಳದ ಹರಿವು ಅಸ್ಥಿರವಾಗಿರುವ ಜಾಗತಿಕ ಸಂದರ್ಭದಲ್ಲಿ, ಖಾಸಗಿ ವಲಯದ ಹೂಡಿಕೆಯು ಸ್ಥಿರವಾಗಿಲ್ಲದಿದ್ದಾಗ ಸರ್ಕಾರದ ಕಡೆಯಿಂದ ಆಗುವ ಬಂಡವಾಳ ವೆಚ್ಚವು ನೆರವಿಗೆ ಬರಬೇಕು ಎಂಬ ಆರ್ಥಿಕ ಮಾದರಿಯನ್ನು ಬಜೆಟ್ ನೆಚ್ಚಿಕೊಂಡಿದೆ. ಇಲ್ಲಿರುವ ಪ್ರಶ್ನೆ ಸರ್ಕಾರ ಮಾಡುತ್ತಿರುವ ವೆಚ್ಚಗಳು ಸಾಕಾಗುವ ಮಟ್ಟದಲ್ಲಿಯೇ ಎಂಬುದಲ್ಲ; ಬದಲಿಗೆ, ಉತ್ಪಾದಕತೆಯಲ್ಲಿ ಆಗಿರುವ ಬೆಳವಣಿಗೆಯನ್ನು ಸರ್ಕಾರದ ವೆಚ್ಚಗಳು ಉಳಿಸಿಕೊಳ್ಳಬಲ್ಲವೇ ಎಂಬುದು.
ಸಾರಿಗೆ ಮತ್ತು ಸಂಪರ್ಕ ವಲಯಕ್ಕೆ ಹೆಚ್ಚಿನ ವೆಚ್ಚ ನಿಗದಿ ಮಾಡಲಾಗಿದೆ. ಹೆಚ್ಚುವರಿ ಬಂಡವಾಳ ವೆಚ್ಚದಲ್ಲಿ ರಸ್ತೆ, ಹೆದ್ದಾರಿಗಳು, ರೈಲ್ವೆ, ದೂರಸಂಪರ್ಕ ವಲಯಕ್ಕೆ ಜಾಸ್ತಿ ಆದ್ಯತೆ ದೊರೆತಿದೆ. ರೈಲ್ವೆ ವಲಯಕ್ಕೆ ಹೆಚ್ಚಿನ ಬಂಡವಾಳ ನಿಗದಿ ಮಾಡಿ, ಅದು ದೇಶದ ಪಾಲಿಗೆ ದೀರ್ಘಾವಧಿ ಆಸ್ತಿ ಎಂಬುದನ್ನು ಮತ್ತೆ ಸ್ಪಷ್ಟಪಡಿಸಲಾಗಿದೆ. ದೂರಸಂಪರ್ಕ ವಲಯದಲ್ಲಿ ಹೆಚ್ಚಿನ ಹೂಡಿಕೆಯ ಘೋಷಣೆ ಮೂಲಕ, ಡಿಜಿಟಲ್ ಸಂಪರ್ಕ ಸೌಲಭ್ಯವು ಇಡೀ ಅರ್ಥವ್ಯವಸ್ಥೆಯ ಪಾಲಿನ ಸಂಪನ್ಮೂಲ ಎಂಬುದನ್ನು ಹೇಳಲಾಗಿದೆ.
ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ₹26.21 ಲಕ್ಷ ಕೋಟಿ ವರ್ಗಾವಣೆ ಮಾಡಲಾಗುತ್ತದೆ. ವರ್ಗಾವಣೆ ಮೊತ್ತವು ಹೆಚ್ಚಳವಾಗಿದೆ. ರಾಜ್ಯಗಳ ಬಂಡವಾಳ ವೆಚ್ಚಗಳಿಗೆ ನೀಡುವ ವಿಶೇಷ ನೆರವಿನ ಮೊತ್ತವು ₹2 ಲಕ್ಷ ಕೋಟಿಗೆ ಏರಿದೆ. ಕಾರ್ಯಕ್ರಮ ಅನುಷ್ಠಾನ ಸಾಮರ್ಥ್ಯವು ಈಗ ಹೆಚ್ಚು ಮುಖ್ಯ ಎಂಬ ಸಂದೇಶವನ್ನು ಇದು ನೀಡುತ್ತಿದೆ. ಬಂಡವಾಳ ವೆಚ್ಚವನ್ನು ರಾಜ್ಯಗಳ ಮೂಲಕ ಮಾಡಿಸುವುದರಿಂದ ಅನುಷ್ಠಾನದಲ್ಲಿನ ಸವಾಲುಗಳನ್ನು ನಿವಾರಿಸಲು ಹೆಚ್ಚು ಸಂಪನ್ಮೂಲ ಲಭ್ಯವಾದಂತೆ, ಕೊನೆಯ ಹಂತದ ಅನುಷ್ಠಾನಕ್ಕೆ ಸುಧಾರಣೆ ತಂದಂತೆ ಆಗುತ್ತದೆ.
ಅರ್ಥ ವ್ಯವಸ್ಥೆಯ ದೃಷ್ಟಿಯಿಂದ ಈ ನಡೆಯು ಹಲವು ಉದ್ದೇಶಗಳನ್ನು ಈಡೇರಿಸುತ್ತದೆ. ಮೂಲಸೌಕರ್ಯದ ಮೇಲಿನ ಸರ್ಕಾರದ ಹೂಡಿಕೆಯು ಖಾಸಗಿ ಹೂಡಿಕೆ ಬರುವುದಕ್ಕೆ ಉತ್ತೇಜನದಂತೆ ಆಗುತ್ತದೆ, ಪೂರೈಕೆ ವ್ಯವಸ್ಥೆಯಲ್ಲಿನ ಅಡ್ಡಿಗಳನ್ನು ನಿವಾರಿಸುತ್ತದೆ, ಹಣದುಬ್ಬರವನ್ನು ಹೆಚ್ಚು ಮಾಡದೆಯೇ ಬೆಳವಣಿಗೆಗೆ ನೆರವಾಗುತ್ತದೆ.
ತಯಾರಿಕೆಗೆ ನೆರವು ಮಿತಿಯಲ್ಲಿದೆ. ಕೈಗಾರಿಕೆಗಳನ್ನು ನಿರ್ವಹಿಸುವ ಇಲಾಖೆಗಳಿಗೆ ಹಂಚಿಕೆ ಜಾಸ್ತಿ ಆಗಿದ್ದರೂ, ತಯಾರಿಕಾ ವಲಯದ ಆಸ್ತಿಗಳ ಮೇಲಿನ ಹೂಡಿಕೆಯಲ್ಲಿ ಏರಿಕೆ ಆಗಿಲ್ಲ. ಅದರ ಬದಲಿಗೆ, ರಫ್ತು ಉತ್ತೇಜನಕ್ಕೆ ಆದ್ಯತೆ ನೀಡಲಾಗಿದೆ. ಇದು ಆರ್ಥಿಕ ಸಮೀಕ್ಷೆಯಲ್ಲಿ ಹೇಳಿರುವ ‘ತಯಾರಿಕಾ ವಲಯದ ಸ್ಪರ್ಧಾತ್ಮಕತೆಯು ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುವುದರ ಮೇಲೆ, ಅದನ್ನು ಜಾಗತಿಕ ಜಾಲದ ಜೊತೆ ಬೆಸೆಯುವುದರ ಮೇಲೆ ಹೆಚ್ಚು ಅವಲಂಬಿತವಾಗಿದೆ’ ಎಂಬ ಮಾತಿಗೆ ಪೂರಕವಾಗುವಂತಿದೆ.
ಬಜೆಟ್‌ನಲ್ಲಿನ ಸಂದೇಶ ಏನು?
ಒಟ್ಟಾಗಿ ನೋಡಿದರೆ ಈ ಬಜೆಟ್ ಹಳೆಯದರ ಮುಂದುವರಿಕೆಯನ್ನು ಹಾಗೂ ಒಂದಿಷ್ಟು ಎಚ್ಚರಿಕೆಯನ್ನು ಸೂಚಿಸುತ್ತಿದೆ. ಬಂಡವಾಳ ವೆಚ್ಚವು ಬಜೆಟ್‌ನ ಪ್ರಮುಖ ಅಂಶವಾಗಿ ಮುಂದುವರಿದಿದೆ. ಹಣಕಾಸಿನ ಶಿಸ್ತು ಇದಕ್ಕೆ ನೆರವಿನ ರೂಪದಲ್ಲಿ ನಿಂತಿದೆ. ತಯಾರಿಕಾ ವಲಯಕ್ಕೆ ಉತ್ತೇಜನ ನೀಡುವ ಕ್ರಮಗಳು ಇವೆ. ಆದರೆ ಅವುಗಳನ್ನು ಬಾಹ್ಯ ಬದಲಾವಣೆಗಳಿಗೆ, ಬಾಹ್ಯ ಅಂಶಗಳಿಗೆ ಅನುಗುಣವಾಗಿ, ಅವುಗಳಿಗೆ ಹೊಂದಿಕೆಯಾಗುವಂತೆ ಜಾರಿಗೆ ತರಲಾಗುತ್ತದೆ.
ಎಂಎಸ್‌ಎಂಇ ಸಂಬಂಧಿತ ನೀತಿಯು ನಿಯಂತ್ರಣ ಮುಕ್ತವಾಗಿಸುವುದಕ್ಕಿಂತ ಹೆಚ್ಚಿನ ಮಟ್ಟದ ಆದ್ಯತೆಯನ್ನು ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ನೀಡುತ್ತಿದೆ. ಈ ಕಾರ್ಯತಂತ್ರವು ಬಹುಕಾಲ ಉಳಿಯುವಂತಹ ಬೆಳವಣಿಗೆಯನ್ನು ನೀಡುತ್ತದೆಯೇ ಎಂಬುದು ಅರ್ಥ ವ್ಯವಸ್ಥೆ ಅಂಕಿ–ಅಂಶಗಳಿಗಿಂತಲೂ ಹೆಚ್ಚಾಗಿ ಅನುಷ್ಠಾನ, ಕಾನೂನಿನಲ್ಲಿ ತರುವ ಸುಧಾರಣೆ ಮತ್ತು ಆಡಳಿತದಲ್ಲಿನ ಗುಣಮಟ್ಟವನ್ನು ಅವಲಂಬಿಸಿದೆ.
ಲೇಖಕ: ಸಾರ್ವಜನಿಕ ಹಣಕಾಸು ಮತ್ತು ಆಡಳಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ, ಸಿಇಜಿಐಎಸ್ ಪ್ರತಿಷ್ಠಾನದ ಹಿರಿಯ ಯೋಜನಾ ಸಹಾಯಕ. ಅಭಿಪ್ರಾಯ ಲೇಖಕರದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.