ADVERTISEMENT

ಮೇಕ್ ಇನ್ ಇಂಡಿಯಾಗೆ ಬಜೆಟ್ ಪೂರಕವಾಗಿದೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಐಎಎನ್ಎಸ್
Published 1 ಫೆಬ್ರುವರಿ 2022, 10:00 IST
Last Updated 1 ಫೆಬ್ರುವರಿ 2022, 10:00 IST
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್   

ನವದೆಹಲಿ: ಕೇಂದ್ರದ ಬಜೆಟ್ 'ಮೇಕ್ ಇನ್ ಇಂಡಿಯಾ'ಗೆ ಪೂರಕವಾಗಿದೆ. ಬೇಡಿಕೆಯನ್ನು ಹೆಚ್ಚಿಸುತ್ತದೆ, ಬಲಿಷ್ಠ, ಸಮೃದ್ಧ ಮತ್ತು ಆತ್ಮವಿಶ್ವಾಸದ ಭಾರತಕ್ಕಾಗಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ತಿಳಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸಿದ್ದಾರೆ. '2022-23ಕ್ಕೆ ಅತ್ಯುತ್ತಮವಾದ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಕ್ಕಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು. ಇದು 'ಮೇಕ್ ಇನ್ ಇಂಡಿಯಾ' ಗೆ ಪೂರಕವಾಗುವಂತಹ ಬಜೆಟ್ ಆಗಿದೆ' ಎಂದಿದ್ದಾರೆ.

'ಆತ್ಮನಿರ್ಭರ ಭಾರತದ ಮೇಲೆ ಸರ್ಕಾರದ ಗಮನ ಮತ್ತು ಅಭಿವೃದ್ಧಿ ಹಾಗೂ ಜನ ಪರ ಸುಧಾರಣೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಯನ್ನು ಬಜೆಟ್ ವಿವರಿಸುತ್ತದೆ. ಇದು ನವ ಭಾರತದ ಶಕ್ತಿಯನ್ನು ಬಳಸಿಕೊಳ್ಳುವ ಬೆಳವಣಿಗೆ ಆಧಾರಿತ ಬಜೆಟ್ ಆಗಿದೆ' ಎಂದು ಅವರು ಹೇಳಿದ್ದಾರೆ.

ರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹಣವನ್ನು ಮೀಸಲಿಟ್ಟಿರುವುದನ್ನು ರಕ್ಷಣಾ ಸಚಿವರು ಸ್ವಾಗತಿಸಿದರು. 'ರಕ್ಷಣೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಗಣನೀಯ ಪ್ರಮಾಣದ ಹಣವನ್ನು ವಿನಿಯೋಗಿಸಲಾಗಿದೆ. ಆರಂಭಿಕ ಮತ್ತು ಖಾಸಗಿ ಘಟಕಗಳಿಗೆ ಆರ್ & ಡಿ ಬಜೆಟ್‌ನಲ್ಲಿ ಶೇ 25ರಷ್ಟನ್ನು ಕಾಯ್ದಿರಿಸುವ ಪ್ರಸ್ತಾಪವು ಅತ್ಯುತ್ತಮ ಕ್ರಮವಾಗಿದೆ' ಎಂದು ಅವರು ಹೇಳಿದರು.

'ಈ ವರ್ಷದ ಬಜೆಟ್ ಗಾತ್ರವನ್ನು ಶೇ 35.4 ಅಂದರೆ 10.6 ಲಕ್ಷ ಕೋಟಿಯನ್ನು ಹೆಚ್ಚಿಸಲಾಗಿದೆ. ದೇಶದ ಸಾಮಾಜಿಕ ಮತ್ತು ಭೌತಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಹಣ ಹೋಗುತ್ತದೆ'. ರಕ್ಷಣಾ ಬಂಡವಾಳ ಸಂಗ್ರಹಣೆಗೆ ಬಜೆಟ್‌ನ ಶೇ 68 ರಷ್ಟನ್ನು ಸ್ಥಳೀಯ ಸಂಗ್ರಹಣೆಗೆ ಮೀಸಲಿಡಲಾಗಿದೆ ಮತ್ತು ಇದು 'ಲೋಕಲ್ ಫಾರ್ ವೋಕಲ್'ಗೆ ಉತ್ತೇಜನ ನೀಡಲು ಅನುಗುಣವಾಗಿದೆ ಮತ್ತು ಇದು ಖಂಡಿತವಾಗಿಯೂ ದೇಶೀಯ ರಕ್ಷಣಾ ಉದ್ಯಮಗಳಿಗೆ ಉತ್ತೇಜನ ನೀಡುತ್ತದೆ ಎಂದು ಸಿಂಗ್ ಹೇಳಿದರು.

'ಭೂಸುಧಾರಣೆಗಳ ಡಿಜಿಟಲೀಕರಣವು ಭಾರತದ ಗ್ರಾಮೀಣ ಆರ್ಥಿಕತೆಯನ್ನು ಪರಿವರ್ತಿಸುತ್ತದೆ ಮತ್ತು ರೈತರಿಗೆ ಹಾಗೂ ಕೃಷಿ ಕ್ಷೇತ್ರಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುವಲ್ಲಿ ಇದು ಬಹಳ ಪರಿಣಾಮಕಾರಿಯಾಗಿರುತ್ತದೆ. ಈ ವರ್ಷದ ಬಜೆಟ್ ಘೋಷಣೆಗಳನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ' ಎಂದು ಹೇಳಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.