ADVERTISEMENT

ಕೇಂದ್ರ ಬಜೆಟ್‌ 2020: ಇ–ವಾಹನಗಳ ಆಮದು ಸುಂಕ ಇಳಿಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 19:30 IST
Last Updated 1 ಫೆಬ್ರುವರಿ 2020, 19:30 IST
   

ನವದೆಹಲಿ: 2040ರ ಒಳಗೆ ನಾಲ್ಕನೇ ಅತಿ ದೊಡ್ಡ ಮಾರುಕಟ್ಟೆಯನ್ನಾಗಿ ಎಲೆಕ್ಟ್ರಿಕ್‌ ವಾಹನೋದ್ಯಮ ಬೆಳೆಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕನಸಿಗೆ 2020 ಬಜೆಟ್‌ ಮತ್ತಷ್ಟು ಜೀವ ತುಂಬಿದೆ.

ಎಲೆಕ್ಟ್ರಿಕ್ ವಾಹನ ಉತ್ಪಾದನೆ ಹಾಗೂ ಉತ್ತೇಜನಕ್ಕಾಗಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಲಿಥಿಯಂ–ಅಯಾನ್‌ ಬ್ಯಾಟರಿ ತಯಾರಿಕೆ ಕ್ಷೇತ್ರಕ್ಕೆ ನಿಗದಿ ಮಾಡಲಾಗಿದ್ದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಶೇ 18ರಿಂದ 5ರಷ್ಟಕ್ಕೆ ಇಳಿಸಿದೆ.

ತಮ್ಮ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಒಳಪಡಿಸುವ ಖಾಸಗಿ ಖರೀದಿದಾರರ ಹೊರತಾಗಿ, ಐಷಾರಾಮಿ ಕಾರುಗಳನ್ನು ಖರೀದಿಸುವ ಬಳಕೆದಾರರಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಎಲೆಕ್ಟ್ರಿಕ್‌ ಕಾರು ಉತ್ಪಾದನಾ ಉದ್ಯಮ ಬಯಿಸಿತ್ತು. ಆದರೆ, ಶನಿವಾರ ಬಜೆಟ್‌ನಲ್ಲಿ ಬ್ಯಾಟರಿ ತಯಾರಿಕೆಗೆ ಹಾಗೂ ಆಮದಿಗೆ ಮಾತ್ರ ಜಿಎಸ್‌ಟಿ ಕಡಿತಗೊಳಿಸುವ ನಿರ್ಧಾರವನ್ನು ನಿರ್ಮಲಾ ಸೀತಾರಾಮನ್ ಅವರು ಪ್ರಕಟಿಸಿದ್ದಾರೆ.

ADVERTISEMENT

ಲಿಥಿಯಂ–ಅಯಾನ್‌ ಬ್ಯಾಟರಿಗಳ ತಯಾರಿ ಸದ್ಯದಲ್ಲಿ ಚೀನಾದಲ್ಲಿ ಮಾತ್ರ ನಡೆಯುತ್ತಿದೆ. ಇದಲ್ಲದೇ, ಬ್ಯಾಟರಿಗಳಿಗೆ ಬಳಕೆಯಾಗುವ ನಿಕಲ್‌, ಕೊಬಾಲ್ಟ್‌ ಹಾಗೂ ಸೀಸವನ್ನು ಚೀನಾದಿಂದಲೇ ಆಮದು ಮಾಡಿಕೊಳ್ಳಬೇಕಾಗಿದ್ದು, ಇದಕ್ಕೆ ಜಿಎಸ್‌ಟಿ ಕಡಿತ ಮಾಡಲಾಗಿದೆ. ಇದರ ಲಾಭ ದೇಶಿ ಕಂಪನಿಗಳಿಗೆ ಸಿಗಲಿದೆ.

ಮೇಕ್‌ ಇನ್ ಇಂಡಿ ಯೋಜನೆಯ ಘೋಷಣೆ ಮಾಡಿದಾಗ ಸ್ಥಳೀಯ ಮಾರುಕಟ್ಟೆ ಉತ್ತೇಜನಕ್ಕಾಗಿ ಎಲೆಕ್ಟ್ರಿಕ್‌ ವಾಹನದ ಬಿಡಿಭಾಗಗಳ ಆಮದು ಸುಂಕವನ್ನು ಕಳೆದ ಬಜೆಟ್‌ನಲ್ಲಿ ಹೆಚ್ಚಿಸಲಾಗಿತ್ತು. ಆದರೆ, ಈಗ ಕಡಿಮೆ ಮಾಡಲಾಗಿದೆ.

2020ರ ಬಜೆಟ್‌ಗೆ ಪ್ರತಿಕ್ರಿಯಿಸಿರುವ ಆ್ಯಪ್‌ ಆಧಾರಿ ಟ್ಯಾಕ್ಸಿ ಸೇವಾ ಕಂಪನಿ ಓಲಾವು, ಎಲೆಕ್ಟ್ರಿಕ್ ವಾಹನ ಉದ್ಯಮದ ಸಂಶೋಧನೆ ಮತ್ತು ಅಭಿವೃದ್ಧಿಗೆ ಅನುದಾನ ನಿಗದಿಪಡಿಸುವುದರಿಂದ ದೀರ್ಘ ಕಾಲ ಉತ್ತೇಜನ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.