ADVERTISEMENT

ಬಜೆಟ್‌ನಲ್ಲಿ ‘ಹಸಿರು ಗೋಡೆ’ ಯೋಜನೆಗಿರಲಿ ಸ್ಥಾನ: ಲೇಖಕ ನಾಗೇಶ ಹೆಗಡೆ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 10:39 IST
Last Updated 21 ಫೆಬ್ರುವರಿ 2026, 10:39 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಸಿದ್ಧತೆಯ ಸಭೆ ನಡೆಸಿದರು</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಸಿದ್ಧತೆಯ ಸಭೆ ನಡೆಸಿದರು

   

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಸಿದ್ಧತೆ ಸಂಬಂಧ ಸರಣಿ ಸಭೆಗಳನ್ನು ನಡೆಸುತ್ತಿದ್ದು, ಯೋಜನಾ ಆಯೋಗದ ಪರಿಸರ ಸಮಿತಿಯ ಸದಸ್ಯರೊಂದಿಗೆ ಶುಕ್ರವಾರ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ, ವಿಜ್ಞಾನಿ ನಾಗೇಶ ಹೆಗಡೆ ಈ ಸಭೆಯಲ್ಲಿ ಪಾಲ್ಗೊಂಡು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ರಾಜ್ಯದಲ್ಲಿ ಮಹತ್ವದ ‘ಹಸಿರು ಗೋಡೆ’ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಿದರಲ್ಲದೇ, ಹೆಚ್ಚುತ್ತಿರುವ ಮರುಭೂಮಿ ಪ್ರದೇಶದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಇದರ ಅಗತ್ಯವನ್ನು ಪ್ರತಿಪಾದಿಸಿದರು.

ಸಿಎಂ ಎದುರು ನಾಗೇಶ ಹೆಗಡೆ ಪ್ರಸ್ತಾಪಿಸಿದ ʻಹಸಿರು ಗೋಡೆ’ ಯೋಜನೆಯ ವಿವರ ಹೀಗಿದೆ.

ADVERTISEMENT

ಜಗತ್ತಿನ ಎಲ್ಲೆಡೆ ಮರುಭೂಮಿ ವಿಸ್ತರಿಸುತ್ತಿದೆ. ಶತಾಯಗತಾಯ ಅಂಥ ವಿಸ್ತರಣೆಯನ್ನು ತಡೆಯಲೆಂದು ಅನೇಕ ಖಂಡಗಳಲ್ಲಿ, ದೇಶಗಳಲ್ಲಿ ಯತ್ನಗಳು ನಡೆದಿವೆ. ನಮ್ಮಲ್ಲೂ ಅಂಥದ್ದೊಂದು ಯೋಜನೆ ಬರಬೇಕು. ಏಕೆಂದರೆ ಉತ್ತರ ಕರ್ನಾಟಕದ ಬಹಳಷ್ಟು ಜಿಲ್ಲೆಗಳಲ್ಲಿ ಮರುಭೂಮಿ ಸದೃಶ ವಾತಾವರಣ ನಿರ್ಮಾಣ ಆಗುತ್ತಿದೆ. ʻಕಛ್‌ನ ರಣವನ್ನು ಬಿಟ್ಟರೆ ಎರಡನೇ ಅತಿ ದೊಡ್ಡ ಮರುಭೂಮಿ ಕರ್ನಾಟಕದಲ್ಲಿ ರೂಪುಗೊಳ್ಳುತ್ತಿದೆ’ ಎಂದು 20 ವರ್ಷಗಳ ಹಿಂದೆಯೇ ವಿಜ್ಞಾನಿಗಳು ಹೇಳಿದ್ದರು. ಅದನ್ನು ತಡೆಯಲು ನಾವೊಂದು ʻಹಸಿರು ಗೋಡೆ’ಯ ನಿರ್ಮಾಣಕ್ಕೆ ಕೈ ಹಾಕಲೇ ಬೇಕು ಎಂಬ ಸಲಹೆ ನೀಡಿದ ನಾಗೇಶ ಹೆಗಡೆ, ಅದಕ್ಕಾಗಿ ಎರಡು ಸಿದ್ಧ ಮಾದರಿಗಳನ್ನೂ ಉದಾಹರಿಸಿದರು.

1. ಆಫ್ರಿಕಾದ ʻಮಹಾ ಹಸಿರು ಗೋಡೆ’ (’ದಿ ಗ್ರೇಟ್‌ ಗ್ರೀನ್‌ ವಾಲ್‌’): ಇದು 22 ದೇಶಗಳು ಒಟ್ಟಾಗಿ ನಿರ್ಮಿಸುತ್ತಿರುವ ಹಸಿರುಪಟ್ಟಿ. ಒಟ್ಟು 7,800 ಕಿಲೊಮೀಟರ್‌ ಉದ್ದ ಹಾಗೂ 15 ಕಿ.ಮೀ. ಅಗಲದ ಈ ಯೋಜನೆಯನ್ನು ವಿಶ್ವಸಂಸ್ಥೆ ಮತ್ತು ಆಫ್ರಿಕನ್‌ ಸಂಘ ಜಂಟಿಯಾಗಿ ಕೈಗೆತ್ತಿಕೊಂಡಿವೆ.

2. ಭಾರತದ ʻಮಹಾ ಹಸಿರು ಗೋಡೆ’: ಇದು ಐದು ರಾಜ್ಯಗಳ, 1,500 ಕಿ.ಮೀ. ಉದ್ದಕ್ಕೂ 5 ಕಿ.ಮೀ. ಅಗಲದ ಹಸಿರು ಪಟ್ಟಿಯನ್ನು ಬೆಳೆಸುವ ಯೋಜನೆ. ಗುಜರಾತಿನ ಪೋರಬಂದರದಿಂದ ಆರಂಭವಾಗಿ ಹರಿಯಾಣದ ಪಾಣಿಪತ್‌ವರೆಗೂ ಕಛ್‌ನ ಮರುಭೂಮಿಗೆ ಸಮಾನಾಂತರವಾಗಿ ಅದು ಅರಾವಳಿ ಪರ್ವತಮಾಲೆಯಗುಂಟ ಸಾಗುತ್ತದೆ.

ಇದಲ್ಲದೇ ಚೀನಾದಲ್ಲಿ ಗೋಬಿ ಮರುಭೂಮಿಯನ್ನು ತಡೆಯಲೆಂದು 4,800 ಕಿಮೀ ಉದ್ದದ ಹಸಿರು ಗೋಡೆಯ ನಿರ್ಮಾಣ ಕೆಲಸ ಸಾಗುತ್ತಿದೆ. ಇದಕ್ಕೆ ನಿರ್ದಿಷ್ಟ ಅಗಲಳತೆ ಇಲ್ಲ. ಕೆಲವೆಡೆ ಅಗಲ 1,400 ಕಿ.ಮಿಗೂ ವಿಸ್ತರಿಸಿದೆ. ಹಾಗಾಗಿ ಇದಕ್ಕೆ ನಾವು ಹಸಿರು ʻಚಾದರ’ ಎನ್ನಬಹುದು. ಆಫ್ರಿಕಾದ ಗೋಡೆಯ ಕೆಲಸ ಆಗೀಗ ತುಸು ಕುಂಟುತ್ತ ಸಾಗುತ್ತಿದೆಯಾದರೆ ಚೀನಾದ್ದು ಮಾತ್ರ ಜಂಗೀ. ಅಲ್ಲಿನ ತಕ್ಲಾಮಾಕನ್‌ ಮರುಭೂಮಿಯ 3,000 ಕಿ.ಮೀ ಪಟ್ಟಿ ಪೂರ್ತಿಗೊಂಡಿತು ಎಂದು ಕಳೆದ ವರ್ಷ ಚೀನಾ ಘೋಷಿಸಿತ್ತು.

ಇದೇ ಮಾದರಿಯಲ್ಲಿ ಉತ್ತರ ಕರ್ನಾಟಕದಲ್ಲಿ ವಿಸ್ತರಿಸುತ್ತಿರುವ ಮರುಭೂಮಿಯ ತಡೆಗೆ ನಾವೂ ಒಂದು ಹಸಿರು ಗೋಡೆಯನ್ನು ನಿರ್ಮಿಸಬಹುದು. ಅದು ಬೆಳಗಾವಿಯಿಂದ ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿವರೆಗೆ ಐದು ಜಿಲ್ಲೆಗಳ, ಮೂರು ಕಿ.ಮೀ. ಅಗಲದ್ದಾಗಿರಬಹುದು ಎಂದು ಹೆಗಡೆ ಹೇಳಿದ್ದಾರೆ. ಜತೆಗೆ ಅಂದಾಜು ನಕ್ಷೆಯನ್ನೂ ಸಲ್ಲಿಸಿದ್ದಾರೆ.

ತಾರ್ಕಿಕ ಹಿನ್ನೆಲೆ ಇದೆ:

ಹಸಿರುಗೋಡೆ ನಿರ್ಮಾಣದ ಅಗತ್ಯವನ್ನು ಹೆಗಡೆಯವರು ಸಾದ್ಯಂತ ವಿವರಿಸಿರುವುದು ಹೀಗೆ: ಅಭಿವೃದ್ಧಿ ಮತ್ತು ಪರಿಸರ ರಕ್ಷಣೆ ಎರಡೂ ಒಟ್ಟೊಟ್ಟಾಗಿ ನಡೆಯಬೇಕೆಂದು ಎಲ್ಲರೂ ಹೇಳುತ್ತಾರೆ. ಆದರೆ ಅಭಿವೃದ್ಧಿಯ ಮಹಾ ಯೋಜನೆಗಳು ಮಾತ್ರ ಒಂದರ ಮೇಲೊಂದರಂತೇ ಬರುತ್ತಿವೆ. ವಿನಾ ಪರಿಸರರಂಗದಲ್ಲಿ ಎದ್ದು ಕಾಣುವಂಥ, ಹೆಮ್ಮೆಯಿಂದ ಹೇಳಿಕೊಳ್ಳುವಂಥ ಒಂದೇ ಒಂದು ಯೋಜನೆಯೂ ನಮ್ಮಲ್ಲಿಲ್ಲ. ಅಲ್ಲೆಲ್ಲೋ 10 ಸಾವಿರ ಮರ ಬೆಳೆಸಿದೆವು, ಇನ್ನೆಲ್ಲೊ ಐದು ಲಕ್ಷ ಗಿಡ ನೆಟ್ಟೆವು ಎಂಬ ಘೋಷಣೆ ಆಗೀಗ ಬರುತ್ತಿವೆಯಾದರೂ ಎಲ್ಲೋ ಎಂತೋ?

ಕರ್ನಾಟಕ ಸರ್ಕಾರ ಇಂಥ ಮಹಾಗೋಡೆಯ ಘೋಷಣೆ ಮಾಡಿದರೆ ಅದು ಭಾರತದ ಮೊದಲನೆಯ ʻರಾಜ್ಯಮಟ್ಟದ’ ಯೋಜನೆ ಆಗಿರುತ್ತದೆ. ನಮ್ಮ ನಾಡಿನ ಹೊಸ ಹೆಗ್ಗುರುತು ಆಗಲು ಸಾಧ್ಯವಿದೆ. ಪರಿಸರವನ್ನು ಏನೆಲ್ಲ ವಿಧದಲ್ಲಿ ಧ್ವಂಸ ಮಾಡುತ್ತಿರುವ ಪೀಳಿಗೆಯೇ ತುಸುಮಟ್ಟಿನ ಪರಿಹಾರವನ್ನೂ ರೂಪಿಸಿದಂತಾಗುತ್ತದೆ.

ಇದಕ್ಕೆ ಆರಂಭಿಕ ಚಾಲನೆ ಕೊಟ್ಟರೆ, ಸೂಕ್ತ ತಾಂತ್ರಿಕ ನೆರವು ಅದಕ್ಕೆ ಸಿಗುತ್ತಿದ್ದರೆ, ಜನರ ಸಹಭಾಗಿತ್ವ ಕೂಡ ಸಿಗಲು ಸಾಧ್ಯವಿದೆ. ವರ್ಷ ಕಳೆದಂತೆ ಇದರ ವಿಶ್ವಾಸಾರ್ಹತೆ ಹೆಚ್ಚಿದರೆ ದಾನಿಗಳೂ, ದಾನಿಸಂಸ್ಥೆಗಳೂ ಕೈಜೋಡಿಸಲು ಸಾಧ್ಯವಿದೆ. ತೆರಿಗೆದಾರರ ಮೇಲೂ ಹೆಚ್ಚಿನ ಹೊರೆ ಬೀಳಲಾರದು. ಈ ಗೋಡೆಯ ಆಸುಪಾಸಿನ ತಾಲ್ಲೂಕುಗಳ ಅಭಿವೃದ್ಧಿ ಯೋಜನೆಗಳಿಗೆ ಪರಿಹಾರ ರೂಪದ ಅರಣ್ಯವನ್ನು ಇಲ್ಲೇ ನಿರ್ಮಿಸುತ್ತೇವೆಂದು ಗುತ್ತಿಗೆದಾರರು ಘೋಷಿಸುವಂತೆ ಮಾಡಬಹುದು. ಹಾಗಾಗಿ ಪ್ರತಿವರ್ಷ ಇದಕ್ಕೆಂದು ಸರ್ಕಾರ ಕೋಟಿಗಟ್ಟಲೆ ಸುರಿಯಬೇಕಿಲ್ಲ.

ಆಫ್ರಿಕಾದ ಮಹಾಗೋಡೆಯ ಭಾಗವಾಗಿ ಅಲ್ಲಿ ಹಸಿರು ಬೆಳೆಸಿದವರಿಗೆ ಅದೇ ಭೂಮಿಯನ್ನು ನೀಡುವ ಯೋಜನೆ ಇದೆ. ಇಲ್ಲಿ ಅಂಥ ಸಾಧ್ಯತೆ ಇರಲಿಕ್ಕಿಲ್ಲ. ಬೇರೆಯದೇ ಬಗೆಯ ಯೋಜನೆಯನ್ನು ಇಲ್ಲಿ ಜಾರಿ ಮಾಡಬಹುದು. ತುಂಬಾ ಮಂದಿ ಅನುಕೂಲಸ್ಥ ಟೆಕಿಗಳು ಬಂಜರು ಭೂಮಿಯನ್ನು ಖರೀದಿಸಿ ಹಸಿರು ಬೆಳೆಸಲು ಉತ್ಸಾಹಿತರಾಗಿದ್ದಾರೆ.

ಆದು ಒತ್ತಟ್ಟಿಗಿರಲಿ. ಇಂಥ ಯೋಜನೆಯಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಿರ್ಮಾಣದ ಸಾಧ್ಯತೆಯಂತೂ ಇದ್ದೇ ಇದೆ. ಎಷ್ಟೊಂದು ಜ್ಞಾನಶಾಖೆಗಳನ್ನು ಒಗ್ಗೂಡಿಸಿ ಕೆಲಸ ಮಾಡಲು ಇಲ್ಲಿ ಅವಕಾಶವಿದೆ. ಎಷ್ಟೊಂದು ಪ್ರತಿಭೆಗಳನ್ನು ಇಲ್ಲಿ ತೊಡಗಿಸಿಕೊಳ್ಳಬಹುದು.

ಎಲ್ಲಕ್ಕಿಂತ ಮುಖ್ಯವೆಂದರೆ ಬರುತ್ತಿರುವ ಎ.ಐ ಕ್ರಾಂತಿಯಿಂದಾಗಿ ಉದ್ಯೋಗದ ಭಾರೀ ಬರಗಾಲ ಬರಲಿದೆ ಎಂದು ಹೇಳಲಾಗುತ್ತಿದೆ (‘ಯೂಸ್‌ಲೆಸ್‌ ಪೀಪಲ್‌’ಗಳ ದೊಡ್ಡ ಸೈನ್ಯವೇ ಸೃಷ್ಟಿಯಾಗಲಿದೆ ಎಂದು ಚಿಂತಕ ಯುವಾಲ್‌ ನೋವಾ ಹರಾರಿ ಹೇಳುತ್ತಾರೆ). ಅಂಥ ಖಾಲಿ ಕೈಗಳಿಗೆ ಕೆಲಸ ನೀಡುವ ಯೋಜನೆಯಾಗಿ ಇದು ರೂಪುಗೊಂಡರೆ ಎರಡೂ ಬಗೆಯ ಬರಗಾಲಗಳ ನಿವಾರಣೆ ಕೆಲ ಮಟ್ಟಿಗೆ ಸಾಧ್ಯವಾದೀತು.

ಇಷ್ಟಕ್ಕೂ ಕನ್ನಡ ನಾಡಿನ ನಾಳೆಗಳಿಗೆ ಒಂದು ಹೊಸ ಲಾಂಛನವಾಗಿ ಈ ಹಸಿರುಗೋಡೆ ನಿಲ್ಲುವ ಆಶಯವನ್ನೂ ವ್ಯಕ್ತಪಡಿಸಿರುವ ಅವರು, ʻಪ್ರಾರಂಭದ ಹೂಡಿಕೆಯಾಗಿ ₹15 ಕೋಟಿ ಇಡುವಂತೆ ಸಲಹೆ ನೀಡಿದ್ದಾರೆ. ಪರಿಸರ ಸಂರಕ್ಷಣೆ ಹಾಗೂ ಅದರಿಂದಾಗುವ ಲಾಭದ ದೃಷ್ಟಿಯಿಂದ ಇದು ತೀರಾ ನಗಣ್ಯ ಮೊತ್ತವಾಗಿದ್ದು, ಒಂದೊಮ್ಮೆ ಇದು ದೊಡ್ಡ ಮೊತ್ತವಾಗಿ ಕಂಡರೆ ಅದರಲ್ಲಿ ಕಡಿತ ಮಾಡಬಹುದು ಎಂದೂ ಹೇಳಿದ್ದಾರೆ.

ಹಿಂದೆ ‘ಮಂಗಟ್ಟೆ ಪಕ್ಷಿಗಳ ಸಂರಕ್ಷಣೆಗೆ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ‘ಮಂಗಟ್ಟೆ ಆಶ್ರಯಧಾಮ’ವನ್ನೇ ಘೋಷಿಸಿದರು. 2009ರಲ್ಲಿ ಅದು ನೋಟಿಫೈ ಕೂಡ ಆಗಿ, ಜಗತ್ತಿನ ಮೊದಲ ʻಮಂಗಟ್ಟೆ ಸಂರಕ್ಷಣಾ ತಾಣ’ ಎನ್ನಿಸಿತು. ಅದೇ ರೀತಿ ಅವರೇ ಹೊನ್ನಾವರ ಅಪ್ಸರಕೊಂಡದ ಸಮುದ್ರದ ತಡಿಯ ಜೀವಿವೈವಿಧ್ಯ ರಕ್ಷಣೆಗೆ ತಮ್ಮ ಬಜೆಟ್‌ನಲ್ಲಿ ₹10 ಕೋಟಿ ತೆಗೆದಿಟ್ಟಿದ್ದರು (ಅದು ಬಳಕೆಯಾಗಲಿಲ್ಲ, ಆ ಮಾತು ಬೇರೆ). ಎಚ್‌.ಡಿ. ಕುಮಾರಸ್ವಾಮಿ ಅವರೂ ರಾಜ್ಯದಾದ್ಯಂತ ಅಂಟುವಾಳ ಮರಗಳನ್ನು ಬೆಳೆಸಲು ಬಜೆಟ್‌ನಲ್ಲಿ ₹10 ಲಕ್ಷ ಘೋಷಿಸಿದ್ದರು. ಇದೇ ರೀತಿ ಹಸಿರುಗೋಡೆ ಪ್ರಸ್ತಾವನೆ ಸಹ ಸಲ್ಲಿಕೆಯಾಗಿದ್ದು, ಅದೇ ರೀತಿ ಇದೀಗ ಸಿದ್ದರಾಮಯ್ಯನವರು ಹಸಿರುಗೋಡೆಯ ಮಹತ್ವ ಅರಿತು ಯೋಜನೆಯನ್ನು ಘೋಷಿಸುತ್ತಾರೋ ಬದಿಗೆ ತಳ್ಳುತ್ತಾರೋ ಎಂಬ ಕುತೂಹಲ ತಣಿಯಲು ಬಜೆಟ್‌ವರೆಗೂ ಕಾಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.