8ನೇ ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಪಿಟಿಐ
ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 2025-26ನೇ ಸಾಲಿನ ಬಜೆಟ್ ಅನ್ನು ಶನಿವಾರ ಮಂಡಿಸಿದ್ದು, ಆದಾಯ ತೆರಿಗೆಯಲ್ಲಿ ಬದಲಾವಣೆ ತರಬಹುದೆಂಬ ಮಧ್ಯಮ ವರ್ಗದ ನಿರೀಕ್ಷೆಗೆ ಬಲ ತುಂಬಿದ್ದಾರೆ. ವಾರ್ಷಿಕ ₹12 ಲಕ್ಷದವರೆಗೆ ಆದಾಯಕ್ಕೆ ತೆರಿಗೆ ತುಂಬಬೇಕಾಗಿಲ್ಲ.
ಇದರೊಂದಿಗೆ, ವೇತನದಾರರಿಗೆ ₹75 ಸಾವಿರ ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಅನ್ವಯವಾಗಲಿರುವುದರಿಂದ, ಒಟ್ಟು ₹12,75,000 ವರೆಗಿನ ವೇತನ ಆದಾಯವುಳ್ಳವರಿಗೆ ತೆರಿಗೆ ರಿಯಾಯಿತಿ ಲಭ್ಯವಾಗಲಿದೆ.
ವಾರ್ಷಿಕ ಆದಾಯ | ಆದಾಯ ತೆರಿಗೆ |
0-4 ಲಕ್ಷ | ಶೇ.0 |
4ರಿಂದ 8 ಲಕ್ಷ | ಶೇ.5 |
8ರಿಂದ 12 ಲಕ್ಷ | ಶೇ.10 |
12ರಿಂದ 16 ಲಕ್ಷ | ಶೇ.15 |
16ರಿಂದ 20 ಲಕ್ಷ | ಶೇ.20 |
20ರಿಂದ 24 ಲಕ್ಷ | ಶೇ.25 |
25 ಲಕ್ಷಕ್ಕಿಂತ ಮೇಲ್ಪಟ್ಟು | ಶೇ.30 |
ದೇಶದ ಬೆಳವಣಿಗೆಗೆ ಮಧ್ಯಮವರ್ಗವು ಹೆಚ್ಚಿನ ಬಲ ತುಂಬುತ್ತಿದೆ. ಇದನ್ನು ಮನಗಂಡಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವು, ತೆರಿಗೆದಾರರ ಪರವಾಗಿ ಹಿಂದಿನಿಂದಲೂ ಸಾಕಷ್ಟು ರಿಯಾಯಿತಿಗಳನ್ನು ನೀಡಿದೆ. ಆರಂಭದಲ್ಲಿ 2.5 ಲಕ್ಷ ಇದ್ದ ತೆರಿಗೆ ರಹಿತ ಸ್ಲ್ಯಾಬ್ ಅನ್ನು 2019ರಲ್ಲಿ ₹5 ಲಕ್ಷಕ್ಕೆ ಏರಿಸಲಾಗಿತ್ತು. 2023ರಲ್ಲಿ ತೆರಿಗೆ ರಿಯಾಯಿತಿಯ ಸ್ಲ್ಯಾಬ್ ಅನ್ನು ₹7 ಲಕ್ಷಕ್ಕೆ ಏರಿಕೆ ಮಾಡಿತ್ತು. ಇದೀಗ ₹12 ಲಕ್ಷದವರೆಗೆ ವಾರ್ಷಿಕ ಆದಾಯವಿರುವವರು ತೆರಿಗೆ ಪಾವತಿಸಬೇಕಾಗಿಲ್ಲ. ಇದರೊಂದಿಗೆ ₹75,000 ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಅನ್ವಯವಾಗುವುದರಿಂದ, ಒಟ್ಟಾರೆಯಾಗಿ ವಾರ್ಷಿಕ ₹12,75,000 ಆದಾಯವಿರುವವರು ತೆರಿಗೆ ಹೊರೆಯ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಹೇಳಿದಾಗ, ಆಡಳಿತ ಪಕ್ಷದ ಕಡೆಯಿಂದ 'ಮೋದಿ... ಮೋದಿ...' ಎಂಬ ಘೋಷಣೆಯ ನಡುವೆ ಕರತಾಡನ ಕೇಳಿಬಂತು.
ಹೊಸ ಆದಾಯ ತೆರಿಗೆ ನೀತಿಯ ಪರಿಣಾಮವಾಗಿ, ಹೊಸ ರೆಜಿಮ್ ಆಯ್ಕೆ ಮಾಡುವ ತೆರಿಗೆದಾರರಿಗೆ, ಯಾವ ರೀತಿ ಪ್ರಯೋಜನವಾಗಲಿದೆ ಎಂದು ಈ ಕೆಳಗಿನಂತೆ ನಿರ್ಮಲಾ ಸೀತಾರಾಮನ್ ವಿವರಿಸಿದರು.
₹12 ಲಕ್ಷವರೆಗಿನ ಆದಾಯವಿದ್ದವರಿಗೆ ವಾರ್ಷಿಕ ₹80 ಸಾವಿರ ತೆರಿಗೆ ಉಳಿತಾಯ ಆಗಲಿದೆ.
₹18 ಲಕ್ಷದವರೆಗೆ ವಾರ್ಷಿಕ ಆದಾಯ ಇದ್ದವರಿಗೆ ₹70 ಸಾವಿರ ತೆರಿಗೆ ಉಳಿತಾಯವಾಗಲಿದೆ.
₹25 ಲಕ್ಷ ವಾರ್ಷಿಕ ಆದಾಯ ಇದ್ದವರಿಗೆ ₹1,10,000ರಷ್ಟು ತೆರಿಗೆ ಉಳಿತಾಯ ಆಗಲಿದೆ.
ಕಳೆದ ವರ್ಷದ (2024) ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿಯ ಅನುಸಾರ, ₹75 ಸಾವಿರ ಸ್ಟ್ಯಾಂಡರ್ಡ್ ಡಿಡಕ್ಷನ್ ಹಾಗೂ ತೆರಿಗೆ ಸ್ಲ್ಯಾಬ್ ಬದಲಾವಣೆ ಈ ಕೆಳಗಿನಂತಿದೆ.
ಆದಾಯ ಮಿತಿ (2023– 24) | ಆದಾಯ ಮಿತಿ (2024–25) | ತೆರಿಗೆ ಪ್ರಮಾಣ |
---|---|---|
₹3ಲಕ್ಷವರೆಗೆ | ₹3 ಲಕ್ಷವರೆಗೆ | ಇಲ್ಲ |
₹3ಲಕ್ಷದಿಂದ ₹6ಲಕ್ಷವರೆಗೆ | ₹3ಲಕ್ಷದಿಂದ ₹7ಲಕ್ಷವರೆಗೆ | ಶೇ 5ರಷ್ಟು |
₹6ಲಕ್ಷದಿಂದ ₹9ಲಕ್ಷವರೆಗೆ | ₹7ಲಕ್ಷದಿಂದ ₹10ಲಕ್ಷವರೆಗೆ | ಶೇ 10ರಷ್ಟು |
₹9ಲಕ್ಷದಿಂದ ₹12ಲಕ್ಷವರೆಗೆ | ₹10ಲಕ್ಷದಿಂದ ₹12ಲಕ್ಷವರೆಗೆ | ಶೇ 15ರಷ್ಟು |
₹12 ಲಕ್ಷದಿಂದ ₹15 ಲಕ್ಷ | ₹12ಲಕ್ಷದಿಂದ ₹15ಲಕ್ಷವರೆಗೆ | ಶೇ 20ರಷ್ಟು |
₹15 ಲಕ್ಷ ಮೇಲ್ಪಟ್ಟು | ₹15ಲಕ್ಷ ಮೇಲ್ಪಟ್ಟು | ಶೇ 30 |
2024ರ ತೆರಿಗೆ ಪದ್ಧತಿಯಲ್ಲಿ ಹಿಂದಿನಂತೆಯೇ ಆದಾಯ ತೆರಿಗೆ ಮಿತಿ ₹3ಲಕ್ಷದಿಂದ ಆರಂಭವಾಗಲಿದೆ. ₹3ಲಕ್ಷದಿಂದ ₹7ಲಕ್ಷವರೆಗೆ ಶೇ 5ರಷ್ಟು ತೆರಿಗೆ, ₹7ಲಕ್ಷದಿಂದ ₹10ಲಕ್ಷವರೆಗೆ ಶೇ 10ರಷ್ಟು, ₹10ಲಕ್ಷದಿಂದ ₹12ಲಕ್ಷವರೆಗೆ ಶೇ 15ರಷ್ಟು, ₹12ಲಕ್ಷದಿಂದ ₹15ಲಕ್ಷವರೆಗೆ ಶೇ 20ರಷ್ಟು ಹಾಗೂ ₹15ಲಕ್ಷಕ್ಕೂ ಹೆಚ್ಚಿನ ಆದಾಯಕ್ಕೆ ಶೇ 30ರಷ್ಟು ತೆರಿಗೆ ವಿಧಿಸಲಾಗಿದೆ.
ಅದಾಗಲೇ ಜಾರಿಯಲ್ಲಿದ್ದ ಹೊಸ ತೆರಿಗೆ ಪದ್ಧತಿಯಲ್ಲೂ ತೆರಿಗೆ ಮಿತಿ ₹3ಲಕ್ಷದಷ್ಟೇ ಇತ್ತು. ಆದರೆ ಶೇ 5ರಷ್ಟು ತೆರಿಗೆಯ ಮಿತಿಯು ₹3ಲಕ್ಷದಿಂದ ₹6ಲಕ್ಷವರೆಗೆ ಇದೆ. ಅದರಂತೆಯೇ ಶೇ 10ರಷ್ಟು ತೆರಿಗೆ ಮಿತಿಯು ₹6ಲಕ್ಷದಿಂದ ₹9ಲಕ್ಷವರೆಗೆ ಇತ್ತು. ₹9ಲಕ್ಷದಿಂದ ₹12ಲಕ್ಷವರೆಗೆ ಶೇ 15ರಷ್ಟು, ₹12ರಿಂದ ₹15ಲಕ್ಷವರೆಗಿನ ಆದಾಯಕ್ಕೆ ಶೇ 20ರಷ್ಟು ಹಾಗು ₹15ಲಕ್ಷ ಮೇಲಿನ ಆದಾಯಕ್ಕೆ ಶೇ 30ರಷ್ಟು ಆದಾಯ ತೆರಿಗೆ ನಿಗದಿಪಡಿಸಲಾಗಿತ್ತು.
ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅಲ್ಲಿ ಈಗಲೂ ಆದಾಯ ತೆರಿಗೆ ಮಿತಿ ₹2.5 ಲಕ್ಷದಷ್ಟೇ ಇದೆ. ಶೇ. 5ರ ತೆರಿಗೆ ಮಿತಿಯು ₹2.5 ಲಕ್ಷದಿಂದ ₹5 ಲಕ್ಷವರೆಗೆ ಇದೆ. ₹5ಲಕ್ಷದಿಂದ ₹10ಲಕ್ಷವರೆಗಿನ ಆದಾಯಕ್ಕೆ ಶೇ 20ರಷ್ಟಿದೆ. ₹10 ಲಕ್ಷ ಮೇಲಿನ ಆದಾಯಕ್ಕೆ ಶೇ 30ರಷ್ಟು ತೆರಿಗೆ ವಿಧಿಸಲಾಗಿದೆ. ಹಳೇ ಆದಾಯ ತೆರಿಗೆ ಪದ್ಧತಿಯಲ್ಲಿ ಹಿರಿಯ ನಾಗರಿಕೆರಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು.
ಆದಾಯ ಮಿತಿ | ವೈಯಕ್ತಿಕ ಆದಾಯ (60 ವರ್ಷದ ಒಳಗಿನವರು) | ಹಿರಿಯ ನಾಗರಿಕರು (60ರಿಂದ 80 ವರ್ಷ ಒಳಗಿನವರು) | 80 ವರ್ಷ ಮೇಲಿನವರು |
---|---|---|---|
₹2.5ಲಕ್ಷವರೆಗೆ | ಇಲ್ಲ | ಇಲ್ಲ | ಇಲ್ಲ |
₹2.5ಲಕ್ಷದಿಂದ ₹3ಲಕ್ಷವರೆಗೆ | ಶೇ 5 | ಶೇ 5 | ಇಲ್ಲ |
₹3ಲಕ್ಷದಿಂದ ₹5ಲಕ್ಷವರೆಗೆ | ಶೇ 5 | ಶೇ 5 | ಇಲ್ಲ |
₹5ಲಕ್ಷದಿಂದ ₹10ಲಕ್ಷವರೆಗೆ | ಶೇ 20 | ಶೇ 20 | ಶೇ 20 |
₹10 ಲಕ್ಷ ಮೇಲಿನ ಆದಾಯ | ಶೇ 30 | ಶೇ 30 | ಶೇ 30 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.