ADVERTISEMENT

Union Budget 2022 | ಸೇನಾ ಸಲಕರಣೆ; ಸ್ವಾವಲಂಬನೆ ಮಂತ್ರ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 18:58 IST
Last Updated 1 ಫೆಬ್ರುವರಿ 2022, 18:58 IST
   

ನವದೆಹಲಿ: ಸೇನಾ ಉಪಕರಣಗಳ ತಯಾರಿಕೆಯಲ್ಲಿ ಸ್ವಾವಲಂಬನೆಯನ್ನು ಖಾತ್ರಿಪಡಿಸುವುದನ್ನು ಈ ಬಾರಿಯ ಬಜೆಟ್ ಒತ್ತಿ ಹೇಳಿದೆ. ರಕ್ಷಣಾ ಉಪಕರಣಗಳ ಆಮದು ಮೇಲಿನ ಅವಲಂಬನೆ ಕಡಿಮೆ ಮಾಡಲು ಮತ್ತು ಸಶಸ್ತ್ರ ಪಡೆಗಳಿಗೆ ಉಪಕರಣಗಳನ್ನು ಉತ್ಪಾದಿಸುವಲ್ಲಿ ಸ್ವಾವಲಂಬನೆ ಉತ್ತೇಜಿಸಲು ಸರ್ಕಾರ ಮುಂದಾಗಿದೆ.

ಭಾರತವನ್ನು ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸುವ ಉದ್ದೇಶವನ್ನು ಕೇಂದ್ರ ಇಟ್ಟುಕೊಂಡಿದೆ. ಈ ದಿಸೆಯಲ್ಲಿ ರಕ್ಷಣಾ ಖರೀದಿಯಲ್ಲಿ ಶೇ 68ರಷ್ಟನ್ನು ದೇಶೀಯ ಕೈಗಾರಿಕೆಗಳಿಗೆ ಮೀಸಲಿಡಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.ನವೋದ್ಯಮ ಮತ್ತು ಖಾಸಗಿ ಸಂಸ್ಥೆಗಳ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಶೇ 25ರಷ್ಟು ಮೀಸಲಿಡುವ ಪ್ರಸ್ತಾಪವವನ್ನೂ ಮಾಡಲಾಗಿದೆ.

ದೇಶದ ರಕ್ಷಣಾ ಬಜೆಟ್‌ನ ಗಾತ್ರವನ್ನು ಹೆಚ್ಚಿಸಲಾಗಿದೆ. 2022–23ನೇ ಸಾಲಿನಲ್ಲಿ ರಕ್ಷಣಾ ವಲಯಕ್ಕೆ ₹5.25 ಲಕ್ಷ ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷ ₹4.78 ಕೋಟಿ ನೀಡಲಾಗಿತ್ತು. ಹೊಸ ಶಸ್ತ್ರಾಸ್ತ್ರಗಳು, ವಿಮಾನಗಳು, ಯುದ್ಧನೌಕೆಗಳು ಮತ್ತು ಇತರ ಮಿಲಿಟರಿ ಯುದ್ಧೋಪಕರಣಗಳ ಖರೀದಿ ಒಳಗೊಂಡಂತೆ ಬಂಡವಾಳ ವೆಚ್ಚಕ್ಕಾಗಿ ಒಟ್ಟು ₹1,52,369 ಕೋಟಿ ಮೀಸಲಿಡಲಾಗಿದೆ. ಕಳೆದ ಬಾರಿ ಬಂಡವಾಳ ವೆಚ್ಚಕ್ಕಾಗಿ ₹1.34 ಲಕ್ಷ ಕೋಟಿ ನೀಡಲಾಗಿತ್ತು. ವೇತನ ಪಾವತಿ ಮತ್ತು ಸಂಸ್ಥೆಗಳ ನಿರ್ವಹಣೆ ವೆಚ್ಚಗಳನ್ನು ಒಳಗೊಂಡ ವೆಚ್ಚಕ್ಕಾಗಿ ₹2,33,000 ಕೋಟಿ ತೆಗೆದಿರಿಸಲು ನಿರ್ಧರಿಸಲಾಗಿದೆ.ರಕ್ಷಣಾ ಪಿಂಚಣಿಗಾಗಿ ₹1,19,696 ಕೋಟಿ, ರಕ್ಷಣಾ ಸಚಿವಾಲಯಕ್ಕೆ (ನಾಗರಿಕ) ₹20,100 ಕೋಟಿ ಮೀಸಲು ಇಡಲಾಗಿದೆ.

ADVERTISEMENT

ರಾಜನಾಥ್ ಸ್ವಾಗತ: ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಮಹತ್ವದ ಕ್ರಮ ತೆಗೆದುಕೊಳ್ಳಲಾಗಿದ್ದು, ಇದು ದೇಶೀಯ ರಕ್ಷಣಾ ಉದ್ಯಮಗಳಿಗೆ ಉತ್ತೇಜನ ನೀಡುತ್ತದೆ ಎಂದುಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಇವನ್ನೂ ಓದಿ
*

*
*
*
*
*
*
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.