ADVERTISEMENT

ದೇಶದ ಮೇಲೆ ₹205 ಲಕ್ಷ ಕೋಟಿ ಸಾಲ ಹೊರಿಸಿದ ಬಜೆಟ್: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2025, 14:36 IST
Last Updated 1 ಫೆಬ್ರುವರಿ 2025, 14:36 IST
<div class="paragraphs"><p>ಸಿಎಂ ಸಿದ್ದರಾಮಯ್ಯ</p></div>

ಸಿಎಂ ಸಿದ್ದರಾಮಯ್ಯ

   

ಮೈಸೂರು: ‘ಈ ವರ್ಷದ ಬಜೆಟ್ ಗಾತ್ರ ₹ 50.65 ಲಕ್ಷ ಕೋಟಿ ಆಗಿದ್ದು, ಸಾಲದ ಮೊತ್ತ ₹ 15.68 ಲಕ್ಷ ಕೋಟಿ ಹಾಗೂ ಬಡ್ಡಿ‌ ಪಾವತಿಗೆ ₹ 12.70 ಲಕ್ಷ ಕೋಟಿ ನೀಡುತ್ತಿದೆ. ಈ ದೇಶದ ಮೇಲೆ ಕೇಂದ್ರ ಸರ್ಕಾರ ₹202 ಲಕ್ಷದಿಂದ ₹ 205 ಲಕ್ಷ ಕೋಟಿ ಸಾಲ ಹೊರಿಸಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನರೇಗಾಕ್ಕೆ ಕಳೆದ ಬಜೆಟ್ ನಲ್ಲಿ ₹ 89.154 ಕೋಟಿ ನೀಡಿದ್ದರೆ, ಈಗ ₹ 86 ಸಾವಿರ ಕೋಟಿಗೆ ಇಳಿಸಿದ್ದಾರೆ‌. ಕೃಷಿ ಸಿಂಚಾಯ್ ಯೋಜನೆ ಅನುದಾನ ₹8,250 ರಿಂದ ₹8260 ಕೋಟಿಗಷ್ಟೇ ಏರಿಕೆಯಾಗಿದೆ. ಎಸ್ ಸಿ/ ಎಸ್ ಟಿ ವಿದ್ಯಾರ್ಥಿವೇತನ ಏರಿಸಿಲ್ಲ. ಬೆಳೆ ವಿಮೆಗೆ ಕಳೆದ ವರ್ಷ ₹ 15,864 ಕೋಟಿ ಇದ್ದು, ಈಗ ₹12,242 ಕೋಟಿಗೆ ಇಳಿಸಿದ್ದಾರೆ' ಎಂದು ದೂರಿದರು.

ADVERTISEMENT

‘ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಸಬ್ ಕಾ ಸಾಥ್ ಘೋಷಣೆ ಯಥೇಚ್ಛವಾಗಿ ಬಳಸಿದ್ದಾರೆ. ಆದರೆ ಮೇಕ್ ಇನ್ ಇಂಡಿಯಾಗೆ ಕೊಟ್ಟಿರುವುದು ಕೇವಲ ₹100 ಕೋಟಿ. ಕೃಷಿ ಕ್ಷೇತ್ರದ ಅನುದಾನ ಕಡಿಮೆಯಾಗಿದೆ. ಆಹಾರ ಖಾತ್ರಿಗೆ ಕಳೆದ ಬಜೆಟ್‌ನಲ್ಲಿ ₹2.06 ಲಕ್ಷ ಕೋಟಿ ಇದ್ದರೆ, ಈಗ ₹2.03 ಲಕ್ಷ ಕೋಟಿಗೆ ಇಳಿಸಲಾಗಿದೆ. ಯುವಜನರು, ಮಹಿಳೆಯರ ಬದಲಿಗೆ ಕಾರ್ಪೋರೇಟ್‌ ಕ್ಷೇತ್ರಕ್ಕೆ ಹೆಚ್ಚು ಅನುದಾನ ದೊರೆತಿದೆ. ಟೆಲಿಕಾಂ ಕ್ಷೇತ್ರದ ಮೂಲಸೌಕರ್ಯಕ್ಕೆ ₹ 28 ಸಾವಿರ ಕೋಟಿ ಕೊಡಲಾಗಿದೆ’ ಎಂದರು.

‘ಹಿಂದಿನ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಘೋಷಿಸಲಾಗಿತ್ತು. ಈವರೆಗೆ ಒಂದು ರೂಪಾಯಿ ಬಂದಿಲ್ಲ. ಬೊಮ್ಮಾಯಿ ರಾಜ್ಯ ಬಜೆಟ್ ಮಂಡಿಸುವಾಗ ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುತ್ತೇವೆ ಎಂದಿದ್ದರು. ಅದರ ಪ್ರಸ್ತಾವವಿಲ್ಲ. ಮೇಕೆದಾಟು, ಮಹದಾಯಿ, ಕೃಷ್ಣಾ, ಭದ್ರಾ ಯೋಜನೆಗೆ ಅನುದಾನ ನೀಡಿಲ್ಲ' ಎಂದರು.

'ರಾಯಚೂರಿನಲ್ಲಿ ಏಮ್ಸ್ ಘೋಷಣೆ ಮಾಡಬಹುದೆಂಬ ನಿರೀಕ್ಷೆ ಇತ್ತು. ಸಚಿವ ಜೆ.ಪಿ. ನಡ್ಡಾ ಭರವಸೆ ನೀಡಿದ್ದರು. ಅದರ ಪ್ರಸ್ತಾವವೂ ಇಲ್ಲ. ಕುಡಿಯುವ ನೀರು, ಹೆದ್ದಾರಿಗೆ, ಬೆಂಗಳೂರಿನಲ್ಲಿ ಮೂಲ ಸೌಕರ್ಯ, ರಾಜಕಾಲುವೆ ನಿರ್ವಹಣೆ, ಬಿಜಿನೆಸ್ ಕಾರಿಡಾರ್‌ಗೆ ಹಣ ಒದಗಿಸಬೇಕೆಂಬ ಮನವಿಯನ್ನು ತಿರಸ್ಕರಿಸಿದ್ದಾರೆ. ವಸತಿ ಯೋಜನೆಯ ಸಹಾಯಧನವನ್ನೂ ಹೆಚ್ಚಿಸಿಲ್ಲ. ಅಂಗನವಾಡಿ, ಆಶಾ ಕಾರ್ಯಕರ್ತರ ಗೌರವ ಧನ ಹೆಚ್ಚಿಸಿಲ್ಲ. ಐಸಿಡಿಎಸ್ ಯೋಜನೆ ಕೇಂದ್ರ ಸರ್ಕಾರದ್ದಲ್ಲವೇ' ಎಂದು ಪ್ರಶ್ನಿಸಿದರು.

‘ಬಿಹಾರದಲ್ಲಿ ಚುನಾವಣೆ ಇರುವುದರಿಂದ ಬಜೆಟ್‌ನಲ್ಲಿ 3-4 ಬಾರಿ ಪ್ರಸ್ತಾಪವಾಗಿದೆ‌. ಮುಂದಿನ ದಿನಗಳಲ್ಲಿ ಅದಕ್ಕೂ ಚೆಂಬು ನಿಶ್ಚಿತ' ಎಂದು ಟೀಕಿಸಿದರು.‌

ಬಿಜೆಪಿ ನಾಯಕರಿಗೆ ಧೈರ್ಯವಿಲ್ಲ:

‘ತೆರಿಗೆ ಹಂಚಿಕೆಯಲ್ಲಿ ಆಗಿರುವ ಅನ್ಯಾಯವನ್ನು ರಾಜ್ಯದ ಬಿಜೆಪಿ ನಾಯಕರು ಪ್ರಶ್ನಿಸಿಲ್ಲ. ಅವರಿಂದಲೇ ಅನ್ಯಾಯವಾಗಿದೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಎಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಸೋಮಣ್ಣ ಅವರಿಗೆ ಮೋದಿ ಮುಂದೆ ಮಾತನಾಡುವ ಧೈರ್ಯವಿಲ್ಲ’ ಎಂದು ವಿಷಾದಿಸಿದರು.

‘ರೈತರು ದೀರ್ಘಕಾಲ ಹೋರಾಡಿದ್ದರೂ ಎಂಎಸ್‌ಪಿಗೆ ಕಾನೂನು‌ ತಂದಿಲ್ಲ. ಆದಾಯ ತೆರಿಗೆ ಮಿತಿ ಇಳಿಕೆಯಿಂದ ಬಡವರು, ಕಾರ್ಮಿಕರಿಗೆ ಉಪಯೋಗವಿವಿಲ್ಲ. ನನಗೆ ಕೇಂದ್ರ ಸರ್ಕಾರದ ಮೇಲೆ ನಿರೀಕ್ಷೆ, ವಿಶ್ವಾಸವಿಲ್ಲ. ಆದರೂ ಅನ್ಯಾಯವನ್ನು ಮೋದಿ, ನಿರ್ಮಲಾ ಹಾಗೂ 16ನೇ ಹಣಕಾಸು ಆಯೋಗದ ಮುಂದೆಯೂ ಪ್ರಶ್ನಿಸುತ್ತೇವೆ' ಎಂದರು.

'ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದಕ್ಕೆ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ. ಮನುಸ್ಮೃತಿ ವಿರುದ್ಧ ಮಾತನಾಡುವ ಎಲ್ಲ ರಾಜ್ಯಗಳಿಗೂ ಅನ್ಯಾಯವಾಗಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.