ADVERTISEMENT

Budget: 2021–22ರ ಆರ್ಥಿಕ ಸಮೀಕ್ಷೆ- ಕೃಷಿ ಆದಾಯ ಬಾಧಿಸದ ಕೋವಿಡ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 5:00 IST
Last Updated 1 ಫೆಬ್ರುವರಿ 2022, 5:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೋವಿಡ್‌ ಸಾಂಕ್ರಾಮಿಕದ ತೀವ್ರ ಹೊಡೆತಕ್ಕೆ ಅಷ್ಟಾಗಿ ಸಿಲುಕದ ಕ್ಷೇತ್ರ ಎನಿಸಿಕೊಂಡಿರುವ ಕೃಷಿ ವಲಯವು ಈ ಆರ್ಥಿಕ ವರ್ಷದಲ್ಲಿ ಶೇ 3.9ರಷ್ಟು ಬೆಳವಣಿಗೆ ದಾಖಲಿಸಬಹುದು ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.ಬೆಳೆ ವೈವಿಧ್ಯ ಹಾಗೂ ಕೃಷಿ ಸಂಬಂಧಿತ ವಲಯಗಳಿಗೆ ಆದ್ಯತೆ ನೀಡಬೇಕು. ಜೊತೆಗೆ ನ್ಯಾನೊ ಯೂರಿಯಾದಂತಹ ಪರ್ಯಾಯ ರಸಗೊಬ್ಬರಗಳನ್ನು ಉತ್ತೇಜಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದೆ.

ಕಳೆದ ಎರಡು ವರ್ಷಗಳಲ್ಲಿ ಕೃಷಿ ವಲಯವು ಗಮನಾರ್ಹ ಬೆಳವಣಿಗೆ ದಾಖಲಿಸಿದ್ದು, ಕಳೆದ ವರ್ಷದಲ್ಲಿ ಶೇ 3.6ರಷ್ಟು ಪ್ರಗತಿ ಕಂಡುಬಂದಿತ್ತು. ಈ ಪ್ರಗತಿ ದರ ಮುಂದುವರಿಯಬೇಕಾದರೆ, ಡ್ರೋನ್‌ಗಳಂತಹ ಹೊಸ ತಂತ್ರಜ್ಞಾನಗಳ ಬಳಕೆಯ ಜೊತೆಗೆ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಸಾವಯವ ಕೃಷಿಯನ್ನು ಹೆಚ್ಚಿಸುವಂತೆ ಸೂಚಿಸಿದೆ.

ಬಜೆಟ್ ಕುರಿತ ಸಮಗ್ರ ಅಪ್‌ಡೇಟ್‌ಗೆ ಕ್ಲಿಕ್ ಮಾಡಿ:ಬಜೆಟ್ 2022

ADVERTISEMENT

ಕೃಷಿ ಸಂಬಂಧಿತ ಕ್ಷೇತ್ರಗಳತ್ತಲೂ ಸಮಾನ ಆದ್ಯತೆ ನೀಡಬೇಕಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.ರೈತರ ಬೆಳವಣಿಗೆ ಮತ್ತು ಆದಾಯದಲ್ಲಿ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸೇರಿದಂತೆ ಸಂಬಂಧಿತ ವಲಯಗಳಿಗೆ ಪ್ರಾಮುಖ್ಯ ನೀಡಬೇಕಿದೆ. ಈ ಕ್ಷೇತ್ರಗಳನ್ನು ಸದುಪಯೋಗಪಡಿಸಿಕೊಳ್ಳುವತ್ತ ಹೆಚ್ಚಿನ ಗಮನ ಕೇಂದ್ರೀಕರಿಸುವ ಅಗತ್ಯವಿದೆ ಎಂದು ತಿಳಿಸಿದೆ.

ವಸ್ತುಸ್ಥಿತಿ ಮೌಲ್ಯಮಾಪನ ಸಮೀಕ್ಷೆಯ (ಎಸ್‌ಎಎಸ್) ಇತ್ತೀಚಿನ ವರದಿ ಪ್ರಕಾರ, ಕೃಷಿಯನ್ನು ನಂಬಿಕೊಂಡಿರುವ ಕುಟುಂಬಗಳಿಗೆ ಸಂಬಂಧಿತ ವಲಯಗಳು ಸ್ಥಿರ ಆದಾಯ ತಂದುಕೊಡುತ್ತಿವೆ. ರೈತರ ಸರಾಸರಿ ಮಾಸಿಕ ಆದಾಯದಲ್ಲಿ ಈ ವಲಯಗಳ ಪಾಲು ಶೇ 15ರಷ್ಟಿದೆ.ಸಣ್ಣ ಹಿಡುವಳಿಗಳಿಗೆ ನೆರವಾಗುವ ಕೃಷಿ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಬೇಕು ಎಂದು ವರದಿ ತಿಳಿಸಿದೆ. ಈ ಮೂಲಕ ಸಣ್ಣ ಮತ್ತು ಅತಿ ಸಣ್ಣ ರೈತರ ಉತ್ಪಾದಕತೆಯನ್ನು ಸುಧಾರಿಸಬೇಕಾದ ಅಗತ್ಯವೂ ಇದೆ ಎಂದು ಸಮೀಕ್ಷೆ ಹೇಳಿದೆ.

ಕಬ್ಬು, ಭತ್ತ ಮತ್ತು ಗೋಧಿ ಕೃಷಿಗೆ ಅಂತರ್ಜಲದ ಬಳಕೆ ಹೆಚ್ಚಿರುವ ಕಾರಣ, ದೇಶದ ಅನೇಕ ಭಾಗಗಳಲ್ಲಿ ಸ್ವಚ್ಛ ಅಂತರ್ಜಲದ ಮಟ್ಟವು ಆತಂಕಪಡುವಷ್ಟು ಕುಸಿದಿದೆ. ಹೀಗಾಗಿಬೆಳೆ ವೈವಿಧ್ಯಕ್ಕೆ ಒತ್ತು ನೀಡುವಂತೆ ಸೂಚಿಸಲಾಗಿದೆ. ಬೆಳೆ ವೈವಿಧ್ಯವು ಸುಸ್ಥಿರ ಕೃಷಿಯನ್ನು ‌ಪ್ರೋತ್ಸಾಹಿಸಿ, ಆಮದಿನ ಮೇಲಿನ ಅವಲಂಬನೆಯನ್ನು ತಗ್ಗಿಸುತ್ತದೆ. ಜೊತೆಗೆ ರೈತರ ಆದಾಯವನ್ನೂ ಹೆಚ್ಚಿಸುತ್ತದೆ ಎಂದು ತಿಳಿಸಿದೆ. ಎಣ್ಣೆಬೀಜಗಳು, ದ್ವಿದಳ ಧಾನ್ಯಗಳು ಹಾಗೂ ತೋಟಗಾರಿಕಾ ಬೆಳೆಗಳಿಗೆ ಆದ್ಯತೆ ನೀಡುವುದರಿಂದ ಬೆಳೆ ವೈವಿಧ್ಯ ಉಂಟಾಗಿ, ಕೃಷಿಯ ಮೂಲಭೂತ ಸಮಸ್ಯೆಗಳಾದ ನೀರಾವರಿ, ಹೂಡಿಕೆ, ಬೆಳೆಗಳಿಗೆ ಮಾರುಕಟ್ಟೆ, ಸಾಲ ಮೊದಲಾದವುಗಳಿಗೆ ಪರಿಹಾರ ದೊರಕಿದಂತಾಗುತ್ತದೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.