
ಪಂಜಾಬ್‌ನ ಅಮೃತಸರದಲ್ಲಿ ಶನಿವಾರ ಸಾಸಿವೆ ಹೊಲದಲ್ಲಿ ಕಂಡ ರೈತ –ಎಎಫ್‌ಪಿ ಚಿತ್ರ
ನವದೆಹಲಿ: ಕೃಷಿಯನ್ನು ಅಭಿವೃದ್ಧಿಯ ಮೊದಲ ಎಂಜಿನ್ ಎಂದು ಬಣ್ಣಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೃಷಿ ಕ್ಷೇತ್ರಕ್ಕೆ ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ.
ಪ್ರಧಾನ ಮಂತ್ರಿ ಧನ–ಧಾನ್ಯ ಕೃಷಿ ಯೋಜನೆ: ಕಡಿಮೆ ಉತ್ಪಾದಕತೆ, ಕಡಿಮೆ ಬೆಳೆ ವೈವಿಧ್ಯ ಮತ್ತು ಕಡಿಮೆ ಸಾಲದ ಮಾನದಂಡಗಳಿರುವ ದೇಶದ 100 ಜಿಲ್ಲೆಗಳಲ್ಲಿ ಆಯಾ ರಾಜ್ಯಗಳ ಪಾಲುದಾರಿಕೆಯೊಂದಿಗೆ ಯೋಜನೆ ಜಾರಿಗೊಳಿಸಲಾಗುವುದು. ಉತ್ಪಾದಕತೆ, ಬೆಳೆ ವೈವಿಧ್ಯ ಹೆಚ್ಚಿಸುವುದು, ಪಂಚಾಯಿತಿ/ಬ್ಲಾಕ್ ಮಟ್ಟದಲ್ಲಿ ದಾಸ್ತಾನು ಕೇಂದ್ರಗಳ ಸ್ಥಾಪನೆ, ನೀರಾವರಿ ಸೌಲಭ್ಯ ಮತ್ತು ಸಾಲ ಸೌಲಭ್ಯ ಹೆಚ್ಚಿಸುವ ಮೂಲಕ 1.7 ಕೋಟಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.
ಧಾನ್ಯಗಳಲ್ಲಿ ಆತ್ಮನಿರ್ಭರತೆ: ಖಾದ್ಯ ತೈಲಗಳಲ್ಲಿ ಸ್ವಾವಲಂಬನೆಗಾಗಿ ಎಣ್ಣೆಬೀಜಗಳ ಉತ್ಪಾದನೆಗೆ ಬೆಂಬಲ ನೀಡಲಾಗುವುದು; ತೊಗರಿ, ಉದ್ದು, ಮಸೂರ ಹಾಗೂ ಬೇಳೆಕಾಳು ಉತ್ಪಾದನೆ ಹೆಚ್ಚಿಸಲು ಆರು ವರ್ಷಗಳ ಕಾರ್ಯಯೋಜನೆ ರೂಪಿಸಲಾಗುವುದು. ನಾಫೆಡ್ ಮತ್ತು ಎನ್‌ಸಿಸಿಎಫ್ ಮೂಲಕ ರೈತರಿಂದ 4 ವರ್ಷ ಬೇಳೆ–ಕಾಳುಗಳನ್ನು ಖರೀದಿಸಲಾಗುವುದು.
ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸಾಲದ ಮಿತಿ ಹೆಚ್ಚಳ: ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಪಡೆಯುವ ಸಬ್ಸಿಡಿ ಆಧಾರಿತವಾದ ಅಲ್ಪಾವಧಿ ಸಾಲದ ಮಿತಿ ₹3 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಳ ಮಾಡುವ ಈ ಮೂಲಕ 7.7 ಕೋಟಿ ರೈತರಿಗೆ ನೆರವು ನೀಡಲಾಗುವುದು.
ಹೆಚ್ಚು ಇಳುವರಿಯ ಬೀಜಗಳ ಸಂಶೋಧನೆ: ಕೀಟನಿರೋಧಕವಾದ, ಪ್ರತಿಕೂಲ ಹವಾಮಾನ ಎದುರಿಸಿಯೂ ತಾಳಿಕೆಯ ಗುಣವಿರುವ, ಹೆಚ್ಚು ಇಳುವರಿ ನೀಡುವ ಬೀಜಗಳ ಉತ್ಪಾದನೆಗೆ ಸಂಶೋಧನಾ ವ್ಯವಸ್ಥೆಯೊಂದನ್ನು ರೂಪಿಸಿ, 100 ಬೀಜತಳಿಗಳನ್ನು ಮಾರುಕಟ್ಟೆಗೆ ಬಿಡಲಾಗುವುದು.
ಬಿಹಾರದಲ್ಲಿ ಮಖಾನಾ ಮಂಡಳಿ: ಮಖಾನಾ (ಕಮಲದ ಬೀಜ) ಉತ್ಪಾದನೆ, ಸಂಸ್ಕರಣೆ ಮತ್ತು ಮಾರಾಟಕ್ಕಾಗಿ ಬಿಹಾರದಲ್ಲಿ ಮಖಾನಾ ಮಂಡಳಿ ಸ್ಥಾಪಿಸಲಾಗುವುದು.
ತರಕಾರಿ, ಹಣ್ಣುಗಳಿಗಾಗಿ ಸಮಗ್ರ ಕಾರ್ಯಕ್ರಮ: ತರಕಾರಿ, ಹಣ್ಣು ಮತ್ತು ‘ಶ್ರೀ ಅನ್ನ’ (ಸಿರಿಧಾನ್ಯ) ಉತ್ಪಾದನೆ, ಸಂಸ್ಕರಣೆ ಮತ್ತು ಪೂರೈಕೆಗಾಗಿ ಹಾಗೂ ರೈತರಿಗೆ ಉತ್ತಮ ಬೆಳೆ ದೊರೆಯುವಂತೆ ಮಾಡಲು ರಾಜ್ಯಗಳ ಪಾಲುದಾರಿಕೆಯೊಂದಿಗೆ ಸಮಗ್ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
5 ವರ್ಷದ ಹತ್ತಿ ಕಾರ್ಯಕ್ರಮ: ಭಾರತದ ಜವಳಿ ಉದ್ಯಮದ 5ಎಫ್ ಗುರಿಗೆ ತಕ್ಕಂತೆ ಹತ್ತಿಯ ವೈವಿಧ್ಯಮಯ ತಳಿಗಳ ಉತ್ಪಾದಕತೆ ಹೆಚ್ಚಿಸಲು ಐದು ವರ್ಷಗಳ ಕಾರ್ಯಕ್ರಮ ರೂಪಿಸಲಾಗುವುದು.
ಮೀನುಗಾರಿಕೆ: ಭಾರತದ ನಿರ್ದಿಷ್ಟ ಆರ್ಥಿಕ ವಲಯಗಳಲ್ಲಿ ಮತ್ತು ಅಂಡಮಾನ್, ನಿಕೋಬಾರ್, ಲಕ್ಷದ್ವೀಪ ಸೇರಿದಂತೆ ದೇಶದ ಗಡಿಗಳಾಚೆಗಿನ ಸಮುದ್ರದಲ್ಲಿ ಸುಸ್ಥಿರ ಮೀನುಗಾರಿಕೆಗೆ ಒಂದು ಚೌಕಟ್ಟು ರೂಪಿಸುವುದು.
ಎಂಎಸ್‌ಪಿ ಪ್ರಸ್ತಾಪ ಇಲ್ಲ
ಬಜೆಟ್ ಅನ್ನು ಹಣಕಾಸು ಸಚಿವರು ಪ್ರಾರಂಭಿಸಿದ್ದೇ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವಿವರಗಳನ್ನು ನೀಡುವ ಮೂಲಕ. ಆದರೆ, ರೈತರ ದೀರ್ಘಾವಧಿ ಬೇಡಿಕೆಗಳಾದ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ, ಸಾಲ ಮನ್ನಾ ಬಗ್ಗೆ ಏನೊಂದನ್ನೂ ಅವರು ಪ್ರಸ್ತಾಪಿಸಿಲ್ಲ.
‘ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವೆ ಬಜೆಟ್ ಶುರುಮಾಡಿದರಷ್ಟೆ. ಆದರೆ, ಎಂಎಸ್‌ಪಿಗೆ ಕಾನೂನು ಖಾತರಿ ನೀಡಬೇಕು ಎನ್ನುವುದೂ ಸೇರಿ ರೈತರ ಬೇಡಿಕೆಗಳಿಗೆ ಅವರು ಪೂರ್ಣಪ್ರಮಾಣದಲ್ಲಿ ಮೌನ ತಾಳಿದರು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.