ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಶುಕ್ರವಾರ) ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಸಮೀಕ್ಷೆಯ ಪ್ರಕಾರ, ಮುಂಬರುವ ಹಣಕಾಸು ವರ್ಷದಲ್ಲಿ (2025-26) ಭಾರತದ ಜಿಡಿಪಿ ಬೆಳವಣಿಗೆ ಶೇಕಡ 6.3 ರಿಂದ ಶೇಕಡ 6.8 ಇರಲಿದೆ ಎಂದು ಅಂದಾಜಿಸಲಾಗಿದೆ.
ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ಮತ್ತು ಅವರ ತಂಡವು ರಚಿಸಿರುವ ಆರ್ಥಿಕ ಸಮೀಕ್ಷೆ 2024-25 ಅನ್ನು ಇಂದು ಮಧ್ಯಾಹ್ನ ಸಂಸತ್ತಿನಲ್ಲಿ ಮಂಡಿಸಲಾಯಿತು.
ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕತೆಯ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಬಜೆಟ್‌ಗೆ ಮುಂಚಿತವಾಗಿ ಸರ್ಕಾರವು ಪ್ರಸ್ತುತಪಡಿಸುವ ವಾರ್ಷಿಕ ದಾಖಲೆಯಾಗಿದೆ. ದೇಶದ ಆರ್ಥಿಕತೆಯ ಅಲ್ಪಾವಧಿ ಮತ್ತು ಮಧ್ಯಮ ಅವಧಿಯ ನಿರೀಕ್ಷೆಗಳ ಅವಲೋಕನವನ್ನು ಸಹ ಇದು ಒದಗಿಸುತ್ತದೆ. ಮುಖ್ಯ ಆರ್ಥಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗದಿಂದ ಈ ವರದಿಯನ್ನು ಸಿದ್ಧಪಡಿಸಲಾಗುತ್ತದೆ.
ಆಯವ್ಯಯದ ದಾಖಲೆಯೊಂದಿಗೆ 1950–51ರಲ್ಲಿ ಮೊದಲ ಬಾರಿಗೆ ಆರ್ಥಿಕ ಸಮೀಕ್ಷೆ ವರದಿ ಮಂಡನೆ ಜಾರಿಗೆ ಬಂದಿತು. 1960ರಲ್ಲಿ ಅದನ್ನು ಕೇಂದ್ರ ಬಜೆಟ್‌ನಿಂದ ಬೇರ್ಪಡಿಸಿ ಬಜೆಟ್ ಮಂಡನೆಯ ಹಿಂದಿನ ದಿನ ಮಂಡನೆಯಾಗುವಂತೆ ನೀತಿ ರೂಪಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.