ADVERTISEMENT

Union Budget 2025: ಹೊಸ ಆದಾಯ ತೆರಿಗೆ ಮಸೂದೆ ಮಂಡನೆ ಸಾಧ್ಯತೆ

ಪಿಟಿಐ
Published 24 ಜನವರಿ 2025, 9:46 IST
Last Updated 24 ಜನವರಿ 2025, 9:46 IST
   

ನವದೆಹಲಿ: ಸಂಸತ್ತಿನ ಮುಂದಿನ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ. ಪ್ರಸ್ತುತ ಇರುವ ಆದಾಯ ತೆರಿಗೆ ಕಾಯ್ದೆ ಬದಲಿಗೆ ಗ್ರಹಿಕೆಗೆ ಅನುಕೂಲಕರವಾಗುವಂತೆ ಸರಳೀಕರಣ ಮತ್ತು ಪುಟಗಳ ಸಂಖ್ಯೆಯನ್ನು ಶೇಕಡ 60ರಷ್ಟು ಕಡಿಮೆ ಮಾಡಿ ಹೊಸ ಕಾಯ್ದೆ ಮಂಡನೆಗೆ ಉದ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ.

6 ತಿಂಗಳಲ್ಲಿ 6 ದಶಕಗಳಷ್ಟು ಹಳೆಯದಾದ ಆದಾಯ ತೆರಿಗೆ ಕಾಯ್ದೆ 1961 ಅನ್ನು ಸಮಗ್ರ ಪರಿಶೀಲನೆಗೆ ಒಳಪಡಿಸುವುದಾಗಿ ಕಳೆದ ವರ್ಷದ ಜುಲೈನಲ್ಲಿ ಮಧ್ಯಂತರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.

‘ಹೊಸ ಆದಾಯ ತೆರಿಗೆ ಮಸೂದೆಯನ್ನು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಂಡಿಸಲಾಗುವುದು. ಇದೊಂದು ಹೊಸ ಕಾಯ್ದೆಯಾಗಿದ್ದು, ಹಳೆ ಕಾಯ್ದೆಯ ತಿದ್ದುಪಡಿಯಾಗಿರುವುದಿಲ್ಲ. ಪ್ರಸ್ತುತ, ಕರಡು ಮಸೂದೆಯನ್ನು ಕಾನೂನು ಸಚಿವಾಲಯ ಪರಿಶೀಲಿಸುತ್ತಿದೆ ಮತ್ತು ಅದನ್ನು ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ಮಂಡಿಸುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಬಜೆಟ್ ಅಧಿವೇಶನವು ಜನವರಿ 31ರಿಂದ ಏಪ್ರಿಲ್‌ 4ರವರೆಗೆ ನಿಗದಿಯಾಗಿದೆ. ಬಜೆಟ್ ಅಧಿವೇಶನದ ಮೊದಲಾರ್ಧದಲ್ಲಿ(ಜನವರಿ31ರಿಂದ ಫೆಬ್ರುವರಿ 13) ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದಿಂದ ಮೊದಲುಗೊಂಡು, 2024–25ರ ಹಣಕಾಸು ಸಮೀಕ್ಷೆ ಮಂಡಿಸಲಾಗುತ್ತದೆ. ಫೆಬ್ರುವರಿ 1 ರಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ.

ಮಾರ್ಚ್ 10ರಂದು ಸಂಸತ್ತಿನ ಅಧಿವೇಶನ ಮತ್ತೊಮ್ಮೆ ಆರಂಭವಾಗಲಿದ್ದು, ಏಪ್ರಿಲ್ 4ರವರೆಗೆ ನಡೆಯಲಿದೆ.

ಐ-ಟಿ ಕಾಯ್ದೆಯನ್ನು ಸಮಗ್ರ ಪರಿಶೀಲನೆಗೆ ಒಳಪಡಿಸುವುದಾಗಿ ನಿರ್ಮಲಾ ಸೀತಾರಾಮನ್ ಘೋಷಣೆಯ ಅನ್ವಯ, ಹಳೆಯ ಕಾಯ್ದೆಯ ಪರಿಶೀಲನೆ ಮತ್ತು ಸಂಕ್ಷಿಪ್ತ, ಸ್ಪಷ್ಟ ಮತ್ತು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತಹ, ವಿವಾದಗಳನ್ನು ಕಡಿಮೆ ಮಾಡುವಂತಹ ಹೊಸ ಕಾಯ್ದೆಯ ರಚನೆ ಕುರಿತಾದ ಮೇಲ್ವಿಚಾರಣೆಗಾಗಿ ಸಿಬಿಡಿಟಿ ಆಂತರಿಕ ಸಮಿತಿಯನ್ನು ಸ್ಥಾಪಿಸಿತ್ತು. ಜೊತೆಗೆ, ಕಾಯ್ದೆಯ ವಿವಿಧ ಆಯಾಮಗಳ ಪರಿಶೀಲನೆಗೆ 22 ವಿಸೇಷ ಉಪಸಮಿತಿಗಳನ್ನೂ ರಚಿಸಿತ್ತು.

ಈ ಸಂಬಂಧ ಸಾರ್ವಜನಿಕರ ಅಭಿಪ್ರಾಯ ಮತ್ತು ಸಲಹೆಗಳನ್ನು ನಾಲ್ಕು ವಿಭಾಗಗಳಲ್ಲಿ ಆಹ್ವಾನಿಸಲಾಗಿತ್ತು. ಭಾಷೆಯ ಸರಳೀಕರಣ, ದಾವೆ ಕಡಿತ, ಅನುಸರಣೆ ಕಡಿತ ಮತ್ತು ಅನಗತ್ಯ/ಬಳಕೆಯಲ್ಲಿಲ್ಲದ ನಿಬಂಧನೆಗಳ ಕುರಿತಾಗಿ ಅಭಿಪ್ರಾಯ ಮತ್ತು ಸಲಹೆ ಕೋರಲಾಗಿದೆ.

ಆದಾಯ ತೆರಿಗೆ ಇಲಾಖೆಯು ಕಾಯ್ದೆಯ ಪರಿಶೀಲನೆಯಲ್ಲಿ 6,500 ಸಲಹೆಗಳನ್ನು ಸ್ವೀಕರಿಸಲಾಗಿದೆ.

ಹೊಸ ಕಾಯ್ದೆಯಲ್ಲಿ ನಿಬಂಧನೆಗಳು ಮತ್ತು ಅಧ್ಯಾಯಗಳನ್ನು ಗಣನೀಯವಾಗಿ ಕಡಿಮೆಗೊಳಿಸಲಾಗುವುದು ಮತ್ತು ಬಳಕೆಯಲ್ಲಿಲ್ಲದ ನಿಬಂಧನೆಗಳನ್ನು ಅಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಸದ್ಯ, ಬಳಕೆಯಲ್ಲಿರುವ ಆದಾಯ ತೆರಿಗೆ ಕಾಯ್ದೆ 1961ರಲ್ಲಿ ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಭದ್ರತಾ ವಹಿವಾಟು ತೆರಿಗೆ, ಸಂಪತ್ತಿನ ತೆರಿಗೆ ಸೇರಿ ನೇರ ತೆರಿಗೆ ಸಂಬಂಧಿತ 298 ಸೆಕ್ಷನ್ ಮತ್ತು 23 ಅಧ್ಯಾಯಗಳಿವೆ.

ಈ ಕಾಯ್ದೆಯ ಶೇಕಡ 60 ಅನ್ನು ಕಡಿತಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.