
ಸರ್ವರನ್ನು ಒಳಗೊಳ್ಳವಂತೆ ಅನಿಸಿದರೂ ಕೂಡ, ಸಾರ್ವಜನಿಕ ಹೊಣೆಗಾರಿಕೆಯಿಂದ ಸರ್ಕಾರವು ದೂರ ಸರಿಯುತ್ತಿರುವುದನ್ನು ಪ್ರಸ್ತುತ ಬಜೆಟ್ ತೋರಿಸುತ್ತಿದೆ.
ಶಿಕ್ಷಣ ಕ್ಷೇತ್ರದಲ್ಲಿ ಈ ಬಜೆಟ್‌ನಲ್ಲಿ ಸುಮಾರು ₹1,39,285.95 ಕೋಟಿ ಘೋಷಿಸಲಾಗಿದೆ. ಇದು ಜಿಡಿಪಿಯಲ್ಲಿ ಶೇ 2.7ರಷ್ಟಿದೆ. ಆದರೆ, ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಶೇ 0.5 ಮಾತ್ರ. ರಾಜ್ಯ ಸರ್ಕಾರಗಳೇ ಉಳಿದ ಶೇ 2.2 ರಷ್ಟು ಮೊತ್ತ ಭರಿಸಬೇಕು. ಪ್ರಸ್ತುತ ಹಣದುಬ್ಬರಕ್ಕೆ ಅನುಗುಣವಾಗಿ ಕೇವಲ ಶೇ 10ರಷ್ಟು ಏರಿಸಲಾಗಿದೆ. ಇದು ಕೇವಲ ಅಸ್ತಿತ್ವದಲ್ಲಿರುವ ಶಿಕ್ಷಣ ಸಂಸ್ಥೆಗಳ ನಿರ್ವಹಣಾ ವೆಚ್ಚದ ಹೆಚ್ಚಳವಾಗಿದೆ. ಜಿಡಿಪಿಯಲ್ಲಿ ಶಿಕ್ಷಣ ವೆಚ್ಚದ ಪಾಲು ಇನ್ನೂ ಸುಮಾರು ಶೇ 2.7–ಶೇ 2.9ರಲ್ಲೇ ನಿಂತಿದ್ದು, ವರ್ಷಗಳಿಂದ ಹೇಳಲಾಗುತ್ತಿರುವ ಶೇ 6ರ ಗುರಿಯಿಂದ ಇದು ಬಹಳ ದೂರದಲ್ಲಿದೆ. ಹಾಗಾಗಿ ಶಿಕ್ಷಣಕ್ಕೆ ಹೊಸದಾಗಿ ಏನೂ ಸಿಕ್ಕಿಲ್ಲ. ಉದ್ಯೋಗ ಮಾರುಕಟ್ಟೆಗೆ ಅಗತ್ಯವಾದ ಮಾನವ ಸಂಪತ್ತನ್ನು ಉತ್ಪಾದಿಸುವ ಸಂಶೋಧನೆ ಮತ್ತು ಅಭಿವೃದ್ಧಿಯ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವೇ ಇಲ್ಲ.
ಆರೋಗ್ಯ ಕ್ಷೇತ್ರದಲ್ಲಿಯೂ ಇದೇ ಚಿತ್ರಣ ಕಾಣಿಸುತ್ತದೆ. ಆರೋಗ್ಯಕ್ಕೆ ನೀಡಲಾಗುವ ಮೊತ್ತದಲ್ಲಿ ಶೇ 10ರಷ್ಟು ಏರಿಸಿ ₹1,06,530 ಕೋಟಿ ಘೋಷಿಸಲಾಗಿದೆ. ಇದು ಜಿಡಿಪಿಯ ಶೇ 1.8ರಷ್ಟಿದೆ. ಇದರಲ್ಲಿ ಜಿಡಿಪಿಯ ಶೇ 0.3–ಶೇ 0.4ರಷ್ಟು ಹಣವನ್ನು ಮಾತ್ರ ಕೇಂದ್ರ ಸರ್ಕಾರ ಭರಿಸಲಿದೆ. ಉಳಿದ ವೆಚ್ಚವನ್ನು ರಾಜ್ಯ ಸರ್ಕಾರಗಳು ಭರಿಸಲಿವೆ. ಆರೋಗ್ಯ ಕ್ಷೇತ್ರಕ್ಕೆ ಒದಗಿಸಿರುವ ಬಜೆಟ್ ಪ್ರಮಾಣವು ಜಾಗತಿಕ ಸರಾಸರಿ ಮಟ್ಟಕ್ಕಿಂತ ಅತಿ ಕಡಿಮೆ ಇದೆ. 2025ರ ವೇಳೆಗೆ ಜಿಡಿಪಿಯ ಶೇ 2.5ರಷ್ಟು ವೆಚ್ಚವನ್ನು ಆರೋಗ್ಯ ಕ್ಷೇತ್ರಕ್ಕೆ ವ್ಯಯಿಸುವುದಾಗಿ 2017ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ, ಸರ್ಕಾರವು ಆ ಗುರಿ ತಲುಪುವಲ್ಲಿ ವಿಫಲವಾಗಿದೆ ಮತ್ತು ಪ್ರಸ್ತುತ ಬಜೆಟ್‌ನ ಬಹುಪಾಲು ಹಣ ಆಯುಷ್ಮಾನ್ ಭಾರತ್‌ನಂತಹ ವಿಮಾ ಆಧಾರಿತ ಯೋಜನೆಗಳಿಗೆ ಮತ್ತು ಆಸ್ಪತ್ರೆಗಳ ನಿರ್ವಹಣೆಗೆ ವ್ಯಯಿಸಲಾಗುತ್ತಿದೆ. ಎರಡು ವರ್ಷದ ಹಿಂದಿನ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಹೊಸ ಏಮ್ಸ್‌ಗಳ ನಿರ್ಮಾಣ ಇನ್ನೂ ಕುಂಠಿತಗತಿಯಲ್ಲೆ ಸಾಗುತ್ತಿದೆ. ಪೂರ್ಣಕಾಲಿಕ ವೈದ್ಯರು ಮತ್ತು ನರ್ಸ್‌ಗಳ ನೇಮಕ ಹಾಗೂ ಗ್ರಾಮೀಣ ಆರೋಗ್ಯ ಮೂಲಸೌಕರ್ಯದ ವಿಸ್ತರಣೆ ಸಾಕಷ್ಟು ವೇಗದಲ್ಲಿ ನಡೆಯುತ್ತಿಲ್ಲ. ಔಷಧಿ, ವೈದ್ಯಕೀಯ ಉಪಕರಣಗಳು ಮತ್ತು ವೈದ್ಯಕೀಯ ಸಿಬ್ಬಂದಿಯ ವೆಚ್ಚಗಳು ಸಾಮಾನ್ಯ ದರ ಏರಿಕೆಗೆ ಹೋಲಿಸಿದರೆ ವೇಗವಾಗಿ ಹೆಚ್ಚುತ್ತಿವೆ. ಹೀಗಾಗಿ ಬಜೆಟ್‌ನಲ್ಲಿ ಆರೋಗ್ಯ ವೆಚ್ಚವನ್ನು ನಾಮಕಾವಸ್ಥೆ ಏರಿಸುವುದರಿಂದ ಜನರಿಗೆ ಯಾವುದೇ ಅನುಕೂಲವಾಗುವುದಿಲ್ಲ. ಆರೋಗ್ಯ ಕ್ಷೇತ್ರವನ್ನು ಸುಧಾರಿಸುವ ಬದಲು ಅವುಗಳನ್ನು ಆರೋಗ್ಯ ವಿಮಾ ವ್ಯವಸ್ಥೆಯ ಮೂಲಕ ನಿರ್ವಹಿಸುವಂತಹ ಕ್ರಮಗಳನ್ನು ಈ ಬಜೆಟ್ ಸೂಚಿಸುತ್ತಿದೆ.
ಕೈಗಾರಿಕಾ ನೀತಿಯಲ್ಲಿ ಸರ್ಕಾರವು ದೇಶೀಯ ಕೈಗಾರಿಕೆಗಳನ್ನು ನಿರ್ಮಿಸುವುದಕ್ಕಿಂತ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವುದರ ಮೇಲೆ ಹೆಚ್ಚು ಅವಲಂಬಿತವಾಗಿದೆ. ದತ್ತಾಂಶ ಕೇಂದ್ರಗಳು ಮತ್ತು ಡಿಜಿಟಲ್ ಆಧಾರಿತ ಸಂಸ್ಥೆಗಳಿಗೆ ತೆರಿಗೆ ರಿಯಾಯಿತಿ ಮತ್ತು ನಿಯಂತ್ರಣ ಸಡಿಲಿಕೆಗಳನ್ನು ಈ ಬಜೆಟ್‌ನಲ್ಲಿ ನೀಡಲಾಗಿದೆ. ಆದರೆ ಇವು ಕೇವಲ ಅಲ್ಪಪ್ರಮಾಣದ ಉದ್ಯೋಗವನ್ನು ಮಾತ್ರ ಸೃಷ್ಟಿಸುತ್ತವೆ. ಮೂಲ ಕೈಗಾರಿಕೆಗಳ ಪುನಶ್ಚೇತನ ಮತ್ತು ಅಭಿವೃದ್ಧಿ ಕುರಿತಂತೆ ಏಳು ಪ್ರಮುಖ ವಲಯಗಳನ್ನು ಈ ಬಾರಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದು ಒಂದು ಒಳ್ಳೆಯ ಬೆಳವಣಿಗೆ. ಆದರೆ ಇದು ಎಷ್ಟು ಸಾಧ್ಯವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು. ಇನ್ನೊಂದು ಮುಖ್ಯ ಅಂಶವೆಂದರೆ, ಕಾರ್ಮಿಕರ ಸಾಮಾಜಿಕ ಭದ್ರತೆಯ ಯೋಜನೆಗಳಿಗೆ ಹಿಂದಿನ ಬಜೆಟ್‌ಗಿಂತ ₹128 ಕೋಟಿ ಹಣವನ್ನು ಕಡಿಮೆಗೊಳಿಸಿದೆ. ಹೊಸ ಉದ್ಯೋಗ ಯೋಜನೆಗಳು ಉದ್ಯೋಗದಾತರಿಗೆ ಸಾಲದ ಪ್ರೋತ್ಸಾಹ ನೀಡುವಿಕೆಗೆ ಮಾತ್ರ ಸೀಮಿತವಾಗಿದ್ದು, ಹೆಚ್ಚುತ್ತಿರುವ ಅಸಂಘಟಿತ ವಲಯ, ಕಾರ್ಮಿಕರ ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ಭದ್ರತೆಗಳ ಬಗ್ಗೆ ಈ ಬಜೆಟ್ ಹೆಚ್ಚೇನೂ ಪ್ರಸ್ತಾಪಿಸಿಲ್ಲ. ಅದೇ ಸಮಯದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ನೀಡಲಾಗುವ ಅನುದಾನದ ಪ್ರಮಾಣವನ್ನು ಸರ್ಕಾರ ಹೆಚ್ಚಳ ಮಾಡಿದ್ದರೂ ಕೂಡ ಅದರ ಹೊರೆ ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರಗಳ ಮೇಲೆಯೇ ಇರಲಿದೆ.
ಕಳೆದ 5 ವರ್ಷಗಳಲ್ಲಿ ಕಾರ್ಪೊರೇಟ್ ಲಾಭವು ಶೇ 180ಕ್ಕೂ ಹೆಚ್ಚು ಏರಿಕೆಯಾಗಿದ್ದರೆ, ಕಾರ್ಪೊರೇಟ್ ತೆರಿಗೆ ಸಂಗ್ರಹವು ಸುಮಾರು ಶೇ 110ರಷ್ಟು ಮಾತ್ರ ಏರಿಕೆಯಾಗಿದೆ. ಇದೇ ಸಮಯದಲ್ಲಿ ತೆರಿಗೆ ಭಾರವನ್ನು ಕ್ರಮೇಣ ವೈಯಕ್ತಿಕ ಆದಾಯ ತೆರಿಗೆ ಮತ್ತು ಜಿಎಸ್‌ಟಿ ಮುಂತಾದ ಪರೋಕ್ಷ ತೆರಿಗೆಗಳ ಮೂಲಕ ಸಾಮಾನ್ಯ ಜನರೇ ಹೊರುವಂತಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ಬಜೆಟ್‌ನಲ್ಲಿ ಜನಕಲ್ಯಾಣದಂತಹ ಯೋಜನೆಗಳನ್ನು ನಿರ್ವಹಣೆ ಮತ್ತು ಪಿಂಚಣಿಗಳ ಮಟ್ಟಕ್ಕೆ ಮಾತ್ರಕ್ಕೆ ಸೀಮಿತಗೊಳಿಸಲಾಗಿದೆ. ಜಿಡಿಪಿ ಮಟ್ಟ ಹೆಚ್ಚಾದರೂ ಕೂಡ ಉದ್ಯೋಗಗಳು ಸೃಷ್ಟಿಯಾಗುವುದರಲ್ಲಿನ ವೈಫಲ್ಯವನ್ನು ಬಜೆಟ್ ಅಂಕಿಅಂಶಗಳು ಸೂಚಿಸುತ್ತಿವೆ.
ಲೇಖಕ: ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.