ADVERTISEMENT

ಕೇಂದ್ರ ಬಜೆಟ್ ವಿಶ್ಲೇಷಣೆ: ಟ್ರಂಪ್‌ ಸುಂಕಕ್ಕೆ ಈಗಾಗಲೇ ಶರಣಾಗಿಯಾಗಿದೆ

ಕೃಷ್ಣ ಪ್ರಸಾದ್‌
Published 1 ಫೆಬ್ರುವರಿ 2026, 23:04 IST
Last Updated 1 ಫೆಬ್ರುವರಿ 2026, 23:04 IST
<div class="paragraphs"><p>ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್</p></div>

ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

   

ಪಿಟಿಐ ಚಿತ್ರ

ಕಳೆದ ವರ್ಷ ಜನವರಿ 31 ರಂದು—ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾದ ಕೇವಲ 11 ದಿನಗಳ ನಂತರ—ಭಾರತದ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಶೇ 6.3ರಿಂದ ಶೇ 6.8 ರಷ್ಟು ಬೆಳೆಯಲಿದೆ ಎಂದು ಆರ್ಥಿಕ ಸಮೀಕ್ಷೆಯು ಮುನ್ಸೂಚನೆ ನೀಡಿತ್ತು. ಆರು–ಏಳು ತಿಂಗಳಲ್ಲೇ ಟ್ರಂಪ್‌ ಅವರು ಭಾರತದ ಮೇಲೆ ಎರಡು ಬಾರಿ ಸುಂಕ ಹೇರಿದ ಪರಿಣಾಮ ಒಟ್ಟು ಸುಂಕ ಶೇ 50ಕ್ಕೆ ತಲುಪಿತು. ಇದು ವಿಶ್ವದ ಯಾವುದೇ ರಾಷ್ಟ್ರದ ಮೇಲೆ ವಿಧಿಸಲಾದ ಗರಿಷ್ಠ ದಂಡ. ಈ ಕಥೆಯ ಪಾಠ ಏನೆಂದರೆ: ‘ಟ್ರಂಪ್ ಸರ್ಕಾರ್’ ಪರವಾಗಿ 2019ರಲ್ಲಿ ಪ್ರಚಾರ ಮಾಡಿದ್ದ ನರೇಂದ್ರ ಮೋದಿಯವರಿಗೂ ಟ್ರಂಪ್ ಆಯ್ಕೆಯು 2025ರ ಬಜೆಟ್ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಅರಿವಿರಲಿಲ್ಲ. 2026ರ ಭಾರತದ ಬಜೆಟ್‌ಗೆ ಟ್ರಂಪ್ ಹೇಗೆ ಅಚ್ಚರಿ ನೀಡಬಹುದು ಎಂಬುದು ಯಾರಿಗೂ ತಿಳಿದಿಲ್ಲ.

ADVERTISEMENT

ಸುಂಕದ ಹೊರೆಯ ಹೊರತಾಗಿಯೂ ತನ್ನ ಬೆಳವಣಿಗೆ ಸರಿಯಾದ ಹಾದಿಯಲ್ಲಿದೆ ಎಂದು ಭಾರತವು ಪ್ರತಿಪಾದಿಸುತ್ತಿದೆ. ಈ ಸುಂಕಗಳ ಪರಿಣಾಮ ಕಡಿಮೆ ಇರಲು ಒಂದು ಕಾರಣವೆಂದರೆ, ಅಮೆರಿಕಕ್ಕೆ ಭಾರತದ ರಫ್ತು ತುಂಬಾ ಕಡಿಮೆ. ಇದು ಜಿಡಿಪಿಯ ಕೇವಲ ಶೇ 0.3ರಿಂದ ಶೇ 0.4 ರಷ್ಟಿದೆ. ಸುಂಕಗಳಿಂದಾಗಿ ಜವಳಿ, ರತ್ನಗಳು, ಆಭರಣ ಮತ್ತು ಚರ್ಮದಂತಹ ವಲಯಗಳಲ್ಲಿ ಭಾರತದ ರಫ್ತು ಆರಂಭದಲ್ಲಿ ಸುಮಾರು ಶೇ 30 ರಷ್ಟು ಕುಸಿದಿತ್ತು. ಆದರೆ ರಫ್ತುದಾರರು ತಮ್ಮ ಸರಕುಗಳನ್ನು ಐರೋಪ್ಯ ಒಕ್ಕೂಟ, ಯುಎಇ, ಜಪಾನ್ ಮತ್ತು ಆಫ್ರಿಕಾದಂತಹ ಇತರ ಮಾರುಕಟ್ಟೆಗಳಿಗೆ ತಿರುಗಿಸುವ ಮೂಲಕ ಭಾಗಶಃ ನಷ್ಟವನ್ನು ಸರಿದೂಗಿಸಿಕೊಂಡರು. ಆದರೆ, ಭಾರತದ ಆರ್ಥಿಕತೆಯು ದೇಶೀಯ ಬೇಡಿಕೆಯಿಂದ ನಡೆಸಲ್ಪಡುತ್ತಿರುವುದು ಈ ಚೇತರಿಕೆಗೆ ಪ್ರಮುಖ ಕಾರಣವಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಸುಂಕಗಳಲ್ಲಿನ ಇಳಿಕೆಯು ಸೀಮಿತ ಪರಿಣಾಮವನ್ನು ಮಾತ್ರ ಬೀರಲಿದೆ.

ಇಲ್ಲಿಯವರೆಗೆ, ಭಾರತವು ಟ್ರಂಪ್ ಅವರ ಕೋಪ ಮತ್ತು ಹೆಚ್ಚಿನ ದಂಡಕ್ಕೆ ತುತ್ತಾಗದೇ ಇರುವ ರೀತಿಯಲ್ಲಿ ನಡೆದುಕೊಂಡಿದೆ. ಅವರ ಎಲ್ಲಾ ಬೇಡಿಕೆಗಳಿಗೆ ನಮ್ರತೆಯಿಂದ ಶರಣಾಗಿದೆ. ಶೇ 500ರಷ್ಟು ಸುಂಕದ ಹೊಸ ಭೀತಿಯಿಂದಾಗಿ ರಷ್ಯಾದ ತೈಲವನ್ನು ಖರೀದಿಸುವುದನ್ನು ಕಡಿಮೆ ಮಾಡಿದೆ. ಅಮೆರಿಕನ್ ಡಾಲರ್ ಎದುರಿಸಲು ಉದ್ದೇಶಿಸಲಾಗಿದ್ದ ‘ಬ್ರಿಕ್ಸ್’ (BRICS) ಕರೆನ್ಸಿಗೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿದೆ. ಆಯಕಟ್ಟಿನ ಚಾಬಹಾರ್ ಬಂದರು ಯೋಜನೆಯಿಂದ ಹೊರಬಂದಿದೆ. ವೆನೆಜುವೆಲಾ ದಲ್ಲಿ ಅಮೆರಿಕದ ಕ್ರಮಗಳು, ಗ್ರೀನ್‌ಲ್ಯಾಂಡ್‌ ಅನ್ನು ಆಕ್ರಮಿಸುವ ಬೆದರಿಕೆಗಳು ಅಥವಾ ಇರಾನ್ ಮೇಲಿನ ಸಂಭವನೀಯ ದಾಳಿಯನ್ನು ಭಾರತವು ಖಂಡಿಸಿಲ್ಲ. ‘ವಿಶ್ವಗುರು’ ತನ್ನ ಬೆನ್ನುಮೂಳೆ ಮುರಿಯುವ ಮುನ್ನ ಇನ್ನು ಎಷ್ಟು ಬಾಗಬಲ್ಲರು?

ಒಂದು ವೇಳೆ ಅಮೆರಿಕದ ಸುಂಕ ಗಳನ್ನು ಶೀಘ್ರದಲ್ಲೇ ಕಡಿತಗೊಳಿಸಿದರೂ, ಭಾರತವು ಇನ್ನೂ ಮೂರು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೊದಲನೆಯದಾಗಿ, ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯದ ನಿರಂತರ ಕುಸಿತ. 2014ರಿಂದ ಮೋದಿಯವರ ಆಡಳಿತದಲ್ಲಿ ರೂಪಾಯಿ ತನ್ನ ಮೌಲ್ಯದ ಶೇ 50ಕ್ಕಿಂತ ಹೆಚ್ಚು ಕಳೆದುಕೊಂಡಿದೆ. 2014ರಲ್ಲಿ ಒಂದು ಡಾಲರ್ ಖರೀದಿಸಲು 62 ರೂಪಾಯಿ ಬೇಕಾಗಿತ್ತು; 2026ರಲ್ಲಿ ಅದು 92 ರೂಪಾಯಿಗಳಿಗೆ ಏರಿಕೆಯಾಗಿದೆ. ಇದು ಭಾರತದ ರಫ್ತನ್ನು ಅಗ್ಗವಾಗಿಸಿದೆ ಮತ್ತು ಸುಂಕಗಳ ವಿರುದ್ಧ ರಕ್ಷಣೆಯಾಗಿ ಕೆಲಸ ಮಾಡಿದೆ. ಆದರೆ, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಭಾರಿ ಬೆಲೆ ತೆರುತ್ತಿದ್ದಾರೆ.

ಎರಡನೇ ದೊಡ್ಡ ಸಮಸ್ಯೆ ಎಂದರೆ ವಿದೇಶಿ ನೇರ ಹೂಡಿಕೆಯಲ್ಲಿನ (ಎಫ್‌ಡಿಐ) ಭಾರಿ ಕುಸಿತ. ಉತ್ಪಾದನಾ ವಲಯದಲ್ಲಿ ಎಫ್‌ಡಿಐ 2022 ಮತ್ತು 2024ರ ನಡುವೆ ಶೇ 43ರಷ್ಟು ಕುಸಿದಿದೆ. ಜಾಗತಿಕ ಹೂಡಿಕೆದಾರರು ಚೀನಾದಿಂದ ಹೊರಬಂದು ಭಾರತಕ್ಕೆ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದ ಸಮಯದಲ್ಲಿ ಇದು ಸಂಭವಿಸಿದೆ. 2025ರಲ್ಲಿ, ವಿದೇಶಿ ಹೂಡಿಕೆದಾರರು ದೇಶದಿಂದ ನಿರ್ಗಮಿಸಿದ ಕಾರಣ ಎಫ್‌ಡಿಐ ಶೇ 96ಕ್ಕಿಂತ ಹೆಚ್ಚು ಕುಸಿಯಿತು. ಕಳೆದ ವರ್ಷ ಭಾರತದ ಷೇರು ಮಾರುಕಟ್ಟೆ ಆದಾಯವು ಪ್ರಮುಖ ದೇಶಗಳಿಗಿಂತ ಕಡಿಮೆಯಿರಲು ಇದು ಒಂದು ಕಾರಣ.

ಮೂರನೇ ಸಮಸ್ಯೆಯ ಪ್ರದೇಶವೆಂದರೆ ಬೆಳೆಯುತ್ತಿರುವ ತಾಂತ್ರಿಕ ಅಸಮಾನತೆ. ಅಮೆರಿಕವು ಕೃತಕ ಬುದ್ಧಿಮತ್ತೆ (ಎ.ಐ) ಮತ್ತು ಸೆಮಿಕಂಡಕ್ಟರ್ ವ್ಯವಸ್ಥೆಗಳನ್ನು ನಿಯಂತ್ರಿಸುತ್ತದೆ. ಸುಧಾರಿತ ಪ್ರೊಸೆಸರ್‌ಗಳ ರಫ್ತಿನ ಮೇಲೆ ಅಮೆರಿಕ ನಿಯಂತ್ರಣ ಹೇರುತ್ತಿರುವುದರಿಂದ ಭಾರತವು ‘ತಂತ್ರಜ್ಞಾನ ನಿರಾಕರಣೆ’ಯ ಅಪಾಯವನ್ನು ಎದುರಿಸುತ್ತಿದೆ. ಈ ರಕ್ಷಣಾತ್ಮಕ ಧೋರಣೆಯು ಭಾರತದ ದೇಶೀಯ ಎ.ಐ ಮಹತ್ವಾಕಾಂಕ್ಷೆಗಳನ್ನು ಕುಂಠಿತಗೊಳಿಸಬಹುದು. ತಮ್ಮ ಸರ್ಕಾರದ ಸಹಾಯಧನದೊಂದಿಗೆ ರಚಿಸಲಾದ ತಮ್ಮ ಎ.ಐ ಆಸ್ತಿಗಳನ್ನು ಭಾರತ ಮತ್ತು ಚೀನಾದ ಬಳಕೆದಾರರಿಗೆ ನೀಡುತ್ತಿರುವುದಕ್ಕಾಗಿ ಈಗಾಗಲೇ ಅಮೆರಿಕನ್ ಟೆಕ್ ಕಂಪನಿಗಳನ್ನು ಟ್ರಂಪ್‌ ಸಲಹೆಗಾರರು ಟೀಕಿಸಿದ್ದಾರೆ. ಈ ಸಂಬಂಧ ಸೆಮಿಕಂಡಕ್ಟರ್‌, ಬಯೋಫಾರ್ಮಾ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಕ್ಷೇತ್ರಕ್ಕೆ ಕೇಂದ್ರ ಸರ್ಕಾರವು ಈ ಬಜೆಟ್‌ನಲ್ಲಿ ಒತ್ತು ನೀಡಿದೆ. ಆದರೆ ಈ ರೀತಿಯ ಘೋಷಣೆಗಳು ಈಗಾಗಲೇ ಬಹಳಷ್ಟು ಬಾರಿ ಕೇಳಿರುವುದರಿಂದ, ನಾಟಕೀಯ ಬೆಳವಣಿಗೆಯನ್ನೇನೂ ನಿರೀಕ್ಷಿಸಲಾಗದು.

ಮುಂದೆ ಟ್ರಂಪ್ ಏನು ಮಾಡುತ್ತಾರೆ ಅಥವಾ ಮಾಡುವುದಿಲ್ಲ ಎಂಬುದು ಮುಖ್ಯವಲ್ಲ. ಅವರು ಭಾರತವನ್ನು ಹಲವು ಬಾರಿ ಅವಮಾನಿಸಿದ್ದಾರೆ, ಇದರಿಂದಾಗಿ ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಆಳವಾದ ಅನುಮಾನ ಮೂಡಿದೆ.

ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಅಥವಾ ಬಜೆಟ್‌ನಲ್ಲಿನ ದೊಡ್ಡ ಭರವಸೆಗಳು ಸಾಮಾನ್ಯ ಮನುಷ್ಯನಿಗೆ ಅಲ್ಪ ಬದಲಾವಣೆಯನ್ನಷ್ಟೇ ತರಬಲ್ಲವು. ಕಾಗದದ ಮೇಲಷ್ಟೇ ಭಾರತದ್ದು ವಿಶ್ವದ ನಾಲ್ಕನೇ ದೊಡ್ಡ ಆರ್ಥಿಕತೆ. ವಾಸ್ತವದಲ್ಲಿ, ತಲಾ ಜಿಡಿಪಿ ವಿಷಯದಲ್ಲಿ 194 ದೇಶಗಳಲ್ಲಿ ಭಾರತ 166ನೇ ಸ್ಥಾನದಲ್ಲಿದೆ. ಮುಂದಿನ ವರ್ಷ ಭಾರತದ ಜಿಡಿಪಿ ಶೇ 7.4 ರಷ್ಟು ಬೆಳೆಯಲಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು. ಈ ಅಂಕಿಅಂಶ ಸಾಧಿಸಿದರೂ ಅದನ್ನು ಯಾರು ನಂಬುತ್ತಾರೆ? ಐಎಂಎಫ್ ಇತ್ತೀಚೆಗೆ ಭಾರತದ ರಾಷ್ಟ್ರೀಯ ಖಾತೆಗಳ ಅಂಕಿಅಂಶಗಳ ಗುಣಮಟ್ಟಕ್ಕೆ ‘ಸಿ ಗ್ರೇಡ್’ ನೀಡಿದೆ. ಭಾರತದ ಜಿಡಿಪಿಯನ್ನು ಶೇ 2.5ರಷ್ಟು ಅತಿಯಾಗಿ ಅಂದಾಜಿಸಲಾಗಿದೆ ಎಂದು ಕೆಲವು ಅರ್ಥಶಾಸ್ತ್ರಜ್ಞರು ನಂಬುತ್ತಾರೆ. ಜಾಗತಿಕ ಅನಿಶ್ಚಿತತೆಯಿಂದ ಕೂಡಿದ ಇಂತಹ ಅಪನಂಬಿಕೆಯ ವಾತಾವರಣದಲ್ಲಿ, ಟ್ರಂಪ್ ಒಪ್ಪಂದವಿರಲಿ ಅಥವಾ ಇಲ್ಲದಿರಲಿ, ಪ್ರತಿಯೊಂದನ್ನೂ ಅತೀವ ಎಚ್ಚರಿಕೆಯಿಂದ ಮತ್ತು ಸಂಶಯದಿಂದಲೇ ನೋಡಬೇಕಾಗಿದೆ. 

ಲೇಖಕ: ಹಿರಿಯ ಪತ್ರಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.