
ಚಿತ್ರ: ಪ್ರಕಾಶ ಶೆಟ್ಟಿ
ರಕ್ಷಣೆಗೆ ₹7.85ಲಕ್ಷ ಕೋಟಿ – ಸಾರಿಗೆ ಕ್ಷೇತ್ರಕ್ಕೆ ₹5.98 ಲಕ್ಷ ಕೋಟಿ – ರೈಲ್ವೆಗೆ ₹2.77 ಲಕ್ಷ ಕೋಟಿ
ಬೆಂಗಳೂರು: ಮೂಲಸೌಕರ್ಯ ಮತ್ತು ತಯಾರಿಕೆಗೆ ಹೆಚ್ಚು ಒತ್ತು ಕೊಟ್ಟಿರುವ, ಮಧ್ಯಮ ವರ್ಗದ ನಿರೀಕ್ಷೆಗಳನ್ನು ಕಡೆಗಣಿಸಿರುವ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಭಾನುವಾರ ಮಂಡಿಸಿದ್ದಾರೆ. ಹತ್ತು ಹಲವು ಯೋಜನೆಗಳನ್ನು ಬಜೆಟ್‌ಗಳಲ್ಲಿ ಘೋಷಿಸಲಾಗಿದೆ. ಆದರೆ, ಹೆಚ್ಚಿನ ಯೋಜನೆಗಳಿಗೆ ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಲಾಗಿಲ್ಲ ಮತ್ತು ಈ ಯೋಜನೆಗಳನ್ನು ಎಲ್ಲಿ ಜಾರಿಗೊಳಿಸಲಾಗುವುದು ಎಂಬುದನ್ನು ಹೇಳಲಾಗಿಲ್ಲ.
ಷೇರುಮಾರುಕಟ್ಟೆಯು ದೊಡ್ಡ ಮಟ್ಟದಲ್ಲಿ ಕುಸಿದಿದೆ. ಸೆನ್ಸೆಕ್ಸ್ 1,546 ಅಂಶ ಮತ್ತು ನಿಫ್ಟಿ 495 ಅಂಶ ಕುಸಿದಿದೆ. ಹೂಡಿಕೆದಾರರು ₹11 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ. ಬಜೆಟ್‌ಗೆ ಮಾರುಕಟ್ಟೆಯ ಪ್ರತಿಕ್ರಿಯೆ ಏನು ಎಂಬುದನ್ನು ಇದರಿಂದ ಅರ್ಥ ಮಾಡಿಕೊಳ್ಳಬಹುದು.
ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಅನುಸರಿಸಿಕೊಂಡು ಬರುತ್ತಿರುವ ಬಂಡವಾಳ ವೆಚ್ಚ ಏರಿಕೆಯನ್ನು ಈ ಬಾರಿಯೂ ಮುಂದುವರಿಸಲಾಗಿದೆ. 2014–15ನೇ ಬಜೆಟ್‌ನಲ್ಲಿ ₹2 ಲಕ್ಷ ಕೋಟಿ ಇದ್ದ ಬಂಡವಾಳ ವೆಚ್ಚದ ಅಂದಾಜನ್ನು 2026–27ನೇ ಸಾಲಿನಲ್ಲಿ ₹12.2 ಲಕ್ಷ ಕೋಟಿಗೆ ಏರಿಸಲಾಗಿದೆ. ಕಳೆದ ವರ್ಷ ಈ ಮೊತ್ತ ₹11.2 ಲಕ್ಷ ಕೋಟಿ ಇತ್ತು. ಬಂಡವಾಳ ವೆಚ್ಚದ ನಿರಂತರ ಏರಿಕೆಯು ಮೂಲಸೌಕರ್ಯ ವಲಯಕ್ಕೆ ಒಳ್ಳೆಯ ಸುದ್ದಿಯಾದರೂ ಖಾಸಗಿ ವಲಯವು ನಿರೀಕ್ಷಿತ ಪ್ರಮಾಣದಲ್ಲಿ ವೆಚ್ಚ ಮಾಡುತ್ತಿಲ್ಲ ಎಂಬ ಕಳವಳಕ್ಕೂ ಕಾರಣವಾಗುತ್ತದೆ.
ಬಡವರು, ಹಿಂದುಳಿದವರ ಏಳಿಗೆಗಾಗಿ ಮೂರು ಕರ್ತವ್ಯಗಳನ್ನು ನಿಗದಿಪಡಿಸಿಕೊಳ್ಳಲಾಗಿದೆ ಎಂದು ನಿರ್ಮಲಾ ಅವರು ಬಜೆಟ್ ಭಾಷಣದ ಆರಂಭದಲ್ಲಿಯೇ ಹೇಳಿದ್ದಾರೆ. ಈ ಕರ್ತವ್ಯಗಳೆಂದರೆ, ಉತ್ಪಾದಕತೆ, ಸ್ಪರ್ಧಾತ್ಮಕತೆ, ಜಾಗತಿಕ ಸ್ಥಿತ್ಯಂತರಗಳನ್ನು ತಾಳಿಕೊಳ್ಳಬಲ್ಲ ಸುಸ್ಥಿರ ಆರ್ಥಿಕ ಪ್ರಗತಿ ಎಂದು ಅವರು ಹೇಳಿದ್ದಾರೆ. ಜನರ ಸಾಮರ್ಥ್ಯ ಹೆಚ್ಚಿಸಿ ಅವರ ಆಶೋತ್ತರಗಳು ಈಡೇರುವಂತೆ ಮಾಡುವುದು ಎರಡನೇ ಕರ್ತವ್ಯ ಎಂದಿದ್ದಾರೆ. ಪ್ರತಿ ಕುಟುಂಬ, ಸಮುದಾಯ, ಪ್ರದೇಶ ಮತ್ತು ವಲಯಕ್ಕೂ ಸಂಪನ್ಮೂಲ, ಸೌಲಭ್ಯ ಮತ್ತು ಅವಕಾಶಗಳು ಲಭ್ಯವಾಗಿ ಎಲ್ಲರ ಜೊತೆಗೆ ಎಲ್ಲರ ವಿಕಾಸ ಎಂಬುದು ಮೂರನೇ ಕರ್ತವ್ಯ ಎಂದಿದ್ದಾರೆ.
ಈ ಮೂರು ಕರ್ತವ್ಯಗಳ ಈಡೇರಿಕೆಗಾಗಿ ಆರು ವಲಯಗಳನ್ನು ಅವರು ಗುರುತಿಸಿದ್ದಾರೆ. ಈ ಎಲ್ಲವುಗಳ ಮುಖ್ಯ ಉದ್ದೇಶ ತಯಾರಿಕೆ ಹೆಚ್ಚಳಕ್ಕೆ ದೊಡ್ಡ ಮಟ್ಟದ ಮಹತ್ವ ನೀಡುವುದೇ ಆಗಿದೆ. ಏಳು ಪ್ರಮುಖ ಕ್ಷೇತ್ರಗಳ ತಯಾರಿಕೆ ಏರಿಕೆ, ಪರಂಪರಾಗತ ಕೈಗಾರಿಕಾ ಪಾರ್ಕ್‌ಗಳ ಪುನಶ್ಚೇತನ, ‘ಚಾಂಪಿಯನ್ ಎಂಎಸ್‌ಎಂಇ’ಗಳನ್ನು ರೂಪಿಸುವುದು, ಮೂಲಸೌಕರ್ಯಕ್ಕೆ ಬಲವಾದ ಒತ್ತು, ದೀರ್ಘಾವಧಿ ಇಂಧನ ಸುರಕ್ಷತೆ ಮತ್ತು ಸುಸ್ಥಿರತೆ ಮತ್ತು ನಗರ ಆರ್ಥಿಕ ವಲಯಗಳ ಅಭಿವೃದ್ಧಿಯನ್ನು ನಿರ್ಮಲಾ ಅವರು ಪ್ರಸ್ತಾಪಿಸಿದ್ದಾರೆ. ಕೃತಕ ಬುದ್ಧಿಮತ್ತೆ ಕ್ಷೇತ್ರಕ್ಕೂ ಉತ್ತೇಜನ ಕೊಡುವ ಭರವಸೆಯನ್ನು ನಿರ್ಮಲಾ ನೀಡಿದ್ದಾರೆ.
ಜಾಗತಿಕ ಅಸ್ಥಿರ ಸ್ಥಿತಿ ಮುಂದುವರಿದಿರುವ ಈ ಸಂದರ್ಭದಲ್ಲಿ ಅದನ್ನು ಎದುರಿಸಲು ಬೇಕಾದ ಕೆಲವು ಕ್ರಮಗಳು ಇವೆ. ವಿರಳ ಲೋಹಗಳ ಮೇಲೆ ಚೀನಾ ಮತ್ತು ಅಮೆರಿಕದ ಏಕಸ್ವಾಮ್ಯವನ್ನು ಮುರಿಯುವುದಕ್ಕಾಗಿ ವಿರಳ ಲೋಹ ಕಾರಿಡಾರ್ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಎಷ್ಟು ಹಣ ವೆಚ್ಚ ಮಾಡಲಾಗುವುದು ಎಂದು ವಿವರಿಸಿಲ್ಲ.
ಬಡವರು, ಸೌಕರ್ಯವಂಚಿತರಿಗೆ ಆದ್ಯತೆ ನೀಡುವುದು ನಮ್ಮ ಸರ್ಕಾರದ ಸಂಕಲ್ಪ. ಈ ನಿಟ್ಟಿನಲ್ಲಿ ಕರ್ತವ್ಯ ಭವನದಲ್ಲಿ ಸಿದ್ಧಪಡಿಸಲಾದ ಮೊದಲ ಬಜೆಟ್‌ನಲ್ಲಿ ಅಭಿವೃದ್ಧಿಗೆ ವೇಗ, ಮಹತ್ವಾಕಾಂಕ್ಷೆಗಳ ಈಡೇರಿಕೆ ಹಾಗೂ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಮೂರು ಕರ್ತವ್ಯಗಳಿಂದ ನಾವು ಸ್ಫೂರ್ತಿ ಪಡೆದಿದ್ದೇವೆ. ಉತ್ಪಾದನಾ ವಲಯದಲ್ಲಿ ಗಮನಾರ್ಹ ಬದಲಾವಣೆ ತರುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಳ್ಳಲು ಒತ್ತು ನೀಡಿದ್ದೇವೆ.– ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವೆ
ಏಳು ಹೈಸ್ಪೀಡ್ ರೈಲು ಕಾರಿಡಾರ್‌ಗಳು ಮತ್ತು ದೇಶದ ಪೂರ್ವ, ಪಶ್ಚಿಮ ಭಾಗವನ್ನು ಸಂಪರ್ಕಿಸುವ ಸರಕು ಸಾಗಣೆ ಕಾರಿಡಾರ್ ಮತ್ತು 20 ಜಲ ಮಾರ್ಗಗಳ ಅಭಿವೃದ್ಧಿ ಯೋಜನೆಗಳಲ್ಲಿ ಮೂಲಸೌಕರ್ಯಕ್ಕೆ ನೀಡಿದ ಒತ್ತು ಪ್ರತಿಫಲಿತವಾಗಿದೆ.
ರಕ್ಷಣಾ ವಲಯಕ್ಕೆ ಹೆಚ್ಚಿನ ಆದ್ಯತೆ ಎಂದಿನಂತೆ ಸಿಕ್ಕಿದೆ. ಆದರೆ, ಈ ಬಾರಿ, ಪ್ರತಿಕೂಲವಾಗಿರುವ ನೆರೆಹೊರೆ ಮತ್ತು ‘ಆಪರೇಷನ್ ಸಿಂಧೂರ’ ನಂತರದ ಪರಿಣಾಮಗಳ ಕಾರಣಕ್ಕೆ ರಕ್ಷಣಾ ವಲಯಕ್ಕೆ ₹7.85 ಲಕ್ಷ ಕೋಟಿ ನೀಡಲಾಗಿದೆ. ಹಿಂದಿನ ಬಜೆಟ್‌ಗೆ ಹೋಲಿಸಿದರೆ ಇದು ಶೇ 22ರಷ್ಟು ಹೆಚ್ಚು.
ಕೃಷಿ ಕ್ಷೇತ್ರಕ್ಕೆ ₹1.63 ಲಕ್ಷ ಕೋಟಿ ಮೀಸಲು ಇರಿಸಲಾಗಿದೆ. ತೆಂಗಿನಕಾಯಿ, ಕೋಕೊ, ಗೋಡಂಬಿ ಮತ್ತು ಶ್ರೀಗಂಧದಂತಹ ಬೆಳೆಗಳನ್ನು ಹೆಚ್ಚಿಸಲು ರೈತರಿಗೆ ಉತ್ತೇಜನ ನೀಡಲಾಗುವುದು ಎಂದು ಹೇಳಲಾಗಿದೆ. ಈ ಯಾವ ಬೆಳೆಗಳೂ ಈಗ ರೈತರಿಗೆ ಆಕರ್ಷಕವಾಗಿ ಉಳಿದಿಲ್ಲ ಎಂಬುದು ನಿರ್ಮಲಾ ಅವರ ಗಮನಕ್ಕೆ ಬಂದಂತಿಲ್ಲ.
ಗಾಂಧಿ ಹೆಸರು: ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಆಜೀವಿಕಾ ಯೋಜನೆಗೆ (ಗ್ರಾಮೀಣ) (ವಿಬಿ–ಜಿ ರಾಮ್ ಜಿ) ₹1.26 ಲಕ್ಷ ಕೋಟಿ ಮೀಸಲಿಡಲಾಗಿದೆ. ಆದರೆ, ಬಜೆಟ್ ಭಾಷಣದಲ್ಲಿ ವಿಬಿ–ಜಿ ರಾಮ್ ಜಿ ಕುರಿತು ಉಲ್ಲೇಖವೇ ಇರಲಿಲ್ಲ. ಇದರಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ (ಮನರೇಗಾ) ಬಾಕಿ ತೀರಿಸಲು ₹30 ಸಾವಿರ ಕೋಟಿ ವ್ಯಯ ಆಗಲಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ ನರೇಗಾ ಯೋಜನೆಯನ್ನು ಬದಲಾಯಿಸಿ ವಿಬಿ–ಜಿ–ರಾಮ್ ಜಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಇದಕ್ಕೆ ಕಾಂಗ್ರೆಸ್ ಪಕ್ಷವು ವ್ಯಾಪಕ ಆಕ್ಷೇಪ ವ್ಯಕ್ತಪಡಿಸಿತ್ತು. ಅದಕ್ಕೆ ಉತ್ತರ ಎಂಬಂತೆ, ಖಾದಿ, ಕೈಮಗ್ಗ ಮತ್ತು ಕರಕುಶಲ ವಸ್ತು ತಯಾರಿಕೆಗೆ ಉತ್ತೇಜನ ನೀಡುವುದಕ್ಕಾಗಿ ‘ಮಹಾತ್ಮ ಗ್ರಾಮ ಸ್ವರಾಜ್ ಯೋಜನೆಯನ್ನು ಜಾರಿಗೆ ತರುವುದಾಗಿ ಹೇಳಲಾಗಿದೆ.
ಈ ವರ್ಷ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಿಗೆ ಜನಪ್ರಿಯ ಮತ್ತು ಭಾರಿ ಯೋಜನೆಗಳನ್ನು ಘೋಷಿಸಿಲ್ಲದಿರುವುದು ಆಶ್ಚರ್ಯ ಮತ್ತು ಆಕ್ಷೇಪಕ್ಕೆ ಕಾರಣವಾಗಿದೆ. ಆದರೆ, ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಕೆಲ ದಿನಗಳ ಮುನ್ನ ಪ್ರಧಾನಿ ಮೋದಿ ಅವರೇ ಯೋಜನೆಗಳನ್ನು ಘೋಷಿಸಿರುವ ಪರಿಪಾಟವನ್ನು ಬಿಜೆಪಿ ಅನುಸರಿಸಿಕೊಂಡು ಬಂದಿದೆ.
ಈಶಾನ್ಯ ರಾಜ್ಯಗಳಲ್ಲಿ ಬೌದ್ಧ ಪ್ರವಾಸ ಪಥವೊಂದನ್ನು ಅಭಿವೃದ್ಧಿಪಡಿಸುವುದಾಗಿಯೂ ಬಜೆಟ್‌ನಲ್ಲಿ ಹೇಳಲಾಗಿದೆ.
ತೆರಿಗೆ ಸುಧಾರಣೆ ಇಲ್ಲ: ತೆರಿಗೆ ಕ್ಷೇತ್ರದಲ್ಲಿ ವಿಶೇಷವಾದ ಸುಧಾರಣೆಗಳನ್ನೇನೂ ಪ್ರಕಟಿಸಲಾಗಿಲ್ಲ. ಆದಾಯ ತೆರಿಗೆ ವಿನಾಯಿತಿ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೊಸ ಆದಾಯ ತೆರಿಗೆ ಕಾಯ್ದೆ 2025 ಈ ವರ್ಷದ ಏಪ್ರಿಲ್‌ನಿಂದ ಜಾರಿಗೆ ಬರಲಿದೆ ಎಂದು ಘೋಷಿಸಲಾಗಿದೆ.
ವಿಬಿ ಜಿ ರಾಮ್ ಜಿ ಯೋಜನೆಗೆ ₹95,692 ಕೋಟಿ
ಆದಾಯ ತೆರಿಗೆ ವಿನಾಯಿತಿ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ
ಗೃಹ ಇಲಾಖೆಗೆ ₹2.55 ಲಕ್ಷ ಕೋಟಿ
ಕೃಷಿಗೆ ₹ 1.63 ಲಕ್ಷ ಕೋಟಿ
ಶಿಕ್ಷಣಕ್ಕೆ ₹1.39 ಲಕ್ಷ ಕೋಟಿ
140 ಕೋಟಿ ಜನರ ಪ್ರತಿಧ್ವನಿ
ಇದೊಂದು ಐತಿಹಾಸಿಕ ಬಜೆಟ್. 140 ಕೋಟಿ ಭಾರತೀಯರ ಆಕಾಂಕ್ಷೆಯನ್ನು ಪ್ರತಿಧ್ವನಿಸಿದೆ. ವಿನೂತನ ಅವಕಾಶಗಳ ಬಾಗಿಲು ತೆರೆದಿದೆ. ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ಉಪಕ್ರಮಗಳಿಗೆ ವೇಗ ನೀಡುವ ಮಹತ್ವದ ಉದ್ದೇಶ ಹೊಂದಿದೆ. ವಿಕಸಿತ ಭಾರತ–2047ರ ಕಡೆಗಿನ ಪ್ರಯಾಣಕ್ಕೆ ಸ್ಪಷ್ಟ ನೀಲನಕ್ಷೆ ರೂಪಿಸಿದೆ. ನಿರ್ಮಲಾ ಸೀತಾರಾಮನ್ ಅವರು ಸತತ ಒಂಬತ್ತು ಬಾರಿ ಬಜೆಟ್ ಮಂಡನೆ ಮಾಡುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.– ನರೇಂದ್ರ ಮೋದಿ, ಪ್ರಧಾನಿ
ಕುರುಡು ಬಜೆಟ್
ಯುವಜನತೆಗೆ ಉದ್ಯೋಗವಿಲ್ಲದಂತಾಗಿದೆ, ಉತ್ಪಾದನೆ ಕುಸಿದಿದೆ, ಹೂಡಿಕೆದಾರರು ಹಿಂದೇಟು ಹಾಕುತ್ತಿದ್ದಾರೆ. ಕುಟುಂಬದ ಉಳಿತಾಯ ಇಳಿಮುಖವಾಗುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಭಾರತದ ಇಂಥ ನೈಜ ಬಿಕ್ಕಟ್ಟುಗಳ ಬಗ್ಗೆ ಬಜೆಟ್ ಕುರುಡಾಗಿದೆ– ರಾಹುಲ್ ಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ
ರಾಜಕೀಯ ಇಚ್ಛಾಶಕ್ತಿ ಇಲ್ಲ
ಭಾರತದ ಆರ್ಥಿಕ, ಸಾಮಾಜಿಕ, ರಾಜಕೀಯ ಸವಾಲುಗಳಿಗೆ ಬಜೆಟ್‌ನಲ್ಲಿ ಪರಿಹಾರ ನೀಡಿಲ್ಲ. ದೂರದೃಷ್ಟಿ, ರಾಜಕೀಯ ಇಚ್ಛಾಶಕ್ತಿಯೂ ಇಲ್ಲ. ನೀತಿಗಳ ಕೊರತೆಯನ್ನು ತುಂಬುವ ಘೋಷಣೆಗಳೂ ಬಜೆಟ್‌ನಲ್ಲಿ ಇಲ್ಲ. ಅಸಮಾನತೆಯು ಬ್ರಿಟಿಷ್ ಆಡಳಿತಕ್ಕಿಂತ ಹೆಚ್ಚಿದೆ. ಆದರೆ ಬಜೆಟ್‌ನಲ್ಲಿ ಈ ಕುರಿತ ಉಲ್ಲೇಖವೇ ಇಲ್ಲ. ಎಸ್‌ಸಿ, ಎಸ್‌ಟಿ, ಒಬಿಸಿ, ಇಡಬ್ಲ್ಯುಎಸ್ ಮತ್ತು ಅಲ್ಪಸಂಖ್ಯಾತರಿಗೆ ಯಾವುದೇ ಬೆಂಬಲ ನೀಡಿಲ್ಲ– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಜನವಿರೋಧಿ ಬಜೆಟ್
ದೂರದೃಷ್ಟಿಯಿಲ್ಲದ, ಕ್ರಿಯಾಶೀಲವಲ್ಲದ, ಜನವಿರೋಧಿ ಬಜೆಟ್ ಇದು. ಮಹಿಳೆಯರು ಮತ್ತು ರೈತರ ವಿರೋಧಿ. ಶಿಕ್ಷಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ವಿರೋಧಿಯೂ ಆಗಿದೆ. ಇದು ಅದಕ್ಷ ಆಡಳಿತದ ಸುಳ್ಳಿನ ಮೂಟೆ. ಪಶ್ಚಿಮ ಬಂಗಾಳಕ್ಕೆ ಬಜೆಟ್‌ನಲ್ಲಿ ಯಾವುದೇ ಕೊಡುಗೆ ನೀಡಿಲ್ಲ. ಶಿಕ್ಷಣಕ್ಕೆ ನೀಡುವ ಅನುದಾನ ಮತ್ತು ಸಾಮಾಜಿಕ ಭದ್ರತೆ, ರಸಗೊಬ್ಬರಕ್ಕೆ ನೀಡುವ ಸಹಾಯಧನವನ್ನು ಕಡಿತ ಮಾಡಲಾಗಿದೆ. ಅರ್ಥವ್ಯವಸ್ಥೆಯು ಸಂಪೂರ್ಣವಾಗಿ ಹಳಿ ತಪ್ಪಲಿದೆ– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.