ADVERTISEMENT

Union Budget 2026 | ಉತ್ಪಾದನೆ: ಏಳು ವಲಯಗಳ ಪ್ರಗತಿಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 13:54 IST
Last Updated 1 ಫೆಬ್ರುವರಿ 2026, 13:54 IST
   

ನವದೆಹಲಿ: ಉತ್ಪಾದನೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ವೇಗ ನೀಡುವ ‘ಮೊದಲ ಕರ್ತವ್ಯ’ದ ಭಾಗವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರು ಕ್ಷೇತ್ರಗಳನ್ನು ಆದ್ಯತೆಯನ್ನಾಗಿ ಪರಿಗಣಿಸಿದ್ದಾರೆ. ಅವುಗಳಲ್ಲಿ, ಏಳು ಪ್ರಮುಖ ವಲಯಗಳಲ್ಲಿ ಉತ್ಪಾದನೆ ಹೆಚ್ಚಿಸುವುದು ಮೊದಲ ಆದ್ಯತೆಯಾದರೆ, ಪಾರಂಪರಿಕ ಕೈಗಾರಿಕಾ ಸಮೂಹಗಳನ್ನು ಪುನಶ್ಚೇತನಗೊಳಿಸುವುದು ಎರಡನೆಯ ಆದ್ಯತೆಯಾಗಿದೆ ಎಂದು ಘೋಷಿಸಿದ್ದಾರೆ.

ಪ್ರಮುಖ ಏಳು ವಲಯಗಳು

‘ಬಯೋಫಾರ್ಮಾ ಶಕ್ತಿ’: ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚುತ್ತಿರುವ ದಿಸೆಯಲ್ಲಿ, ಭಾರತವನ್ನು ಜೈವಿಕ ಔಷಧಗಳ (ಬಯೋಫಾರ್ಮಾ) ತಯಾರಿಕೆಯ ಕೇಂದ್ರವನ್ನಾಗಿ ರೂಪಿಸಲು ಮುಂದಿನ ಐದು ವರ್ಷಗಳಲ್ಲಿ ₹10,000 ಕೋಟಿ ನಿಗದಿ ಮಾಡಲಾಗಿದೆ. ದೇಶದಲ್ಲಿ ಔಷಧ ಉತ್ಪಾದನೆಗೆ ಅಗತ್ಯವಾದ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರಸ್ತುತ ಔಷಧ ವಿಜ್ಞಾನದ ಕಲಿಕೆ ಮತ್ತು ಸಂಶೋಧನೆಗಾಗಿ ಏಳು ಸಂಸ್ಥೆಗಳಿದ್ದು (ಎನ್‌ಐಪಿಇಆರ್), ಹೊಸದಾಗಿ ಮೂರು ಸಂಸ್ಥೆಗಳನ್ನು ಸ್ಥಾಪಿಸಿ, ಒಂದು ವ್ಯವಸ್ಥಿತ ಜಾಲವನ್ನು ರೂಪಿಸಲಾಗುವುದು.

ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ಐಎಸ್‌ಎಂ): ಐಎಸ್‌ಎಮ್ 1.0 ಯಶಸ್ಸಿನ ಆಧಾರದಲ್ಲಿ ಕೇಂದ್ರವು ಐಎಸ್ಎಂ 2.0 ಅನ್ನು ಘೋಷಿಸಿದೆ. ಸೆಮಿಕಂಡಕ್ಟರ್ ಸಾಧನಗಳು ಮತ್ತು ವಸ್ತುಗಳನ್ನು ಉತ್ಪಾದಿಸುವುದು, ಎಲ್ಲ ಹಂತಗಳಲ್ಲಿ ದೇಶೀಯ ತಂತ್ರಜ್ಞಾನವನ್ನೇ ಬಳಸುವುದು ಮತ್ತು ಪೂರೈಕೆ ಸರಪವಳಿಗಳನ್ನು ಬಲಪಡಿಸಲಾಗುವುದು.

ADVERTISEMENT

ಎಲೆಕ್ಟ್ರಾನಿಕ್ ಉಪಕರಣಗಳ ಬಿಡಿಭಾಗಗಳ ಉತ್ಪಾದನೆ: 2025ರಲ್ಲಿ ಈ ಯೋಜನೆಗೆ ₹22,919 ಕೋಟಿ ನೀಡಲಾಗಿತ್ತು. ಪ್ರಗತಿಯನ್ನು ಉತ್ತೇಜಿಸಲು ಮತ್ತು ಸ್ಥಳೀಯ ಪೂರೈಕೆ ಸರಪಳಿಯನ್ನು ಉತ್ತಮಪಡಿಸಲು ಅದರ ಮೊತ್ತವನ್ನು ದ್ವಿಗುಣಗೊಳಿಸಲಾಗಿದೆ (₹40,000 ಕೋಟಿ).

ಅಪರೂಪದ ಖನಿಜಗಳ ಕಾರಿಡಾರ್: ಅಪರೂಪದ ಖನಿಜವಾದ ಶಾಶ್ವತ ಅಯಸ್ಕಾಂತಕ್ಕಾಗಿ (Rare Earth Permanent Magnet) 2025ರ ನವೆಂಬರ್‌ನಲ್ಲಿ ಯೋಜನೆ ಜಾರಿಮಾಡಲಾಗಿತ್ತು. ಖನಿಜಗಳು ಸಮೃದ್ಧವಾಗಿರುವ ಒಡಿಶಾ, ಕೇರಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಗಣಿಗಾರಿಕೆ, ಸಂಸ್ಕರಣೆ, ಸಂಶೋಧನೆ ಮತ್ತು ಉತ್ಪಾದನೆಗಾಗಿಯೇ ಅಪರೂಪದ ಖನಿಜಗಳ ಕಾರಿಡಾರ್ ಸ್ಥಾಪಿಸಲಾಗುವುದು. ಜತೆಗೆ, ರಾಸಾಯನಿಕಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಿ, ವಿದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ರಾಜ್ಯಗಳಲ್ಲಿ ಮೂರು ರಾಸಾಯನಿಕ ಪಾರ್ಕ್‌ಗಳನ್ನು ಸ್ಥಾಪಿಸಲು ಬೆಂಬಲ ನೀಡಲಾಗುವುದು.

ಬಂಡವಾಳ ಸರಕುಗಳ ಉತ್ಪಾದನೆ: ವಿವಿಧ ವಲಯಗಳಲ್ಲಿ ಉತ್ಪಾದನೆ ಮತ್ತು ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಬಂಡವಾಳ ಸರಕುಗಳು ‍ಪ್ರಮುಖ ಪಾತ್ರ ವಹಿಸುತ್ತಿವೆ. ಈ ದಿಸೆಯಲ್ಲಿ ಎರಡು ಸ್ಥಳಗಳಲ್ಲಿ ಟೂಲ್ ರೂಮ್ಸ್ ಸ್ಥಾಪನೆ ಮಾಡುವುದು, ನಿರ್ಮಾಣ ಮತ್ತು ಮೂಲಸೌಕರ್ಯ ಸಾಧನಗಳ (ಲಿಫ್ಟ್, ಅಗ್ನಿಶಾಮಕ ಸಾಧನ, ಸುರಂಗ ಕೊರೆಯುವ ಸಾಧನ ಇತ್ಯಾದಿ) ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲಾಗುವುದು ಮತ್ತು ಐದು ವರ್ಷಗಳಲ್ಲಿ ₹10,000 ಕೋಟಿ ವೆಚ್ಚದಲ್ಲಿ ಕಂಟೇನರ್ ಉತ್ಪಾದನಾ ವ್ಯವಸ್ಥೆ ರೂಪಿಸಲಾಗುವುದು.

ಜವಳಿ ಉದ್ಯಮಕ್ಕೆ ಸಂಯೋಜಿತ ರೂಪ: ಕಾರ್ಮಿಕ ಪ್ರಧಾನವಾದ ಜವಳಿ ಉದ್ಯಮಕ್ಕೆ ಐದು ಅಂಶಗಳ ಕಾರ್ಯಕ್ರಮವನ್ನು ಘೋಷಿಸಲಾಗಿದೆ; ಸ್ವಾವಲಂಬನೆಗಾಗಿ ರಾಷ್ಟ್ರೀಯ ನಾರು ಯೋಜನೆ, ಸಾಂಪ್ರದಾಯಿಕ ಗುಂಪುಗಳಿಗೆ ಆಧುನಿಕತೆಯ ಸ್ಪರ್ಶ ನೀಡುವ ಮೂಲಕ ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ, ನೇಕಾರರು ಮತ್ತು ಕುಶಲಕರ್ಮಿಗಳಿಗಾಗಿ ರಾಷ್ಟ್ರೀಯ ಕೈ ಮಗ್ಗ ಮತ್ತು ಕರಕುಶಲ ವಸ್ತು ಕಾರ್ಯಕ್ರಮ, ಜಾಗತಿಕವಾಗಿ ಸ್ಪರ್ಧಾತ್ಮಕವಾದ ಮತ್ತು ಸುಸ್ಥಿರವಾದ ಜವಳಿ ಉತ್ಪಾದನೆಗಾಗಿ ಸೂಕ್ತ ವ್ಯವಸ್ಥೆ ರೂಪಿಸುವುದು ಸಂಯೋಜಿತ ಯೋಜನೆಯ ಭಾಗಗಳಾಗಿವೆ. ಜವಳಿ ಕೌಶಲಗಳ ಉತ್ತೇಜನಕ್ಕಾಗಿ ಉದ್ಯಮ ಮತ್ತು ಶೈಕ್ಷಣಿಕ ರಂಗಗಳೊಂದಿಗೆ ಸಂಯೋಜಿತ ಪ್ರಯತ್ನವಾಗಿ ಸಮರ್ಥ್ 2.0 ಕಾರ್ಯಕ್ರಮ ರೂಪಿಸುವುದು, ಬೃಹತ್ ಜವಳಿ ಪಾರ್ಕ್‌ಗಳನ್ನು ಸ್ಥಾಪಿಸುವುದು.

ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯ ಯೋಜನೆ: ಖಾದಿ, ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಗುಣಮಟ್ಟ ವರ್ಧನೆಗಾಗಿ ಕುಶಲಕರ್ಮಿಗಳಿಗೆ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯ ಯೋಜನೆಯನ್ನು ಆರಂಭಿಸಿ ತರಬೇತಿ, ನೆರವು ನೀಡಲಾಗುವುದು. ಕ್ರೀಡಾ ಉತ್ಪಾದನೆ ಉತ್ತೇಜಿಸಲು ಕ್ರೀಡಾ ಸಾಮಗ್ರಿ ಯೋಜನೆ ಪ್ರಾರಂಭಿಸಲಾಗುವುದು. ಸಾಧನಗಳ ವಿನ್ಯಾಸ, ಸಂಶೋಧನೆ ಮತ್ತು ತಂತ್ರಜ್ಞಾನದ ಮೂಲಕ ಭಾರತದಲ್ಲಿ ಅತ್ಯುನ್ನತ ದರ್ಜೆಯ ಮತ್ತು ಕೈಗೆಟುಕುವ ಬೆಲೆಯ ಕ್ರೀಡಾ ಸಾಮಗ್ರಿಗಳು ದೊರೆಯುವಂತೆ ಮಾಡುವುದು ಯೋಜನೆ ಗುರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.