ADVERTISEMENT

ಉದ್ಯಮಗಳಿಗೆ ದೃಢ ಅಡಿಪಾಯ ಹಾಕಲಿದೆ ಈ ಸಾರಿಯ ಕೇಂದ್ರ ಬಜೆಟ್: ಕಾಸಿಯಾ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 16:08 IST
Last Updated 1 ಫೆಬ್ರುವರಿ 2026, 16:08 IST
ಬಿ.ಆರ್. ಗಣೇಶ್ ರಾವ್
ಬಿ.ಆರ್. ಗಣೇಶ್ ರಾವ್   

ಬೆಂಗಳೂರು: ‘ಅತಿಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಕೇಂದ್ರ ಬಜೆಟ್‌ ದೃಢ ಅಡಿಪಾಯ ಹಾಕಿದೆ’ ಎಂದು ಕರ್ನಾಟಕ ಸಣ್ಣ ಕೈಗಾರಿಕಾ ಸಂಘ (ಕಾಸಿಯಾ) ಹೇಳಿದೆ.

‘ದೇಶದಲ್ಲಿ ತಯಾರಿಕಾ ವಲಯ ಬಲಪಡಿಸುವುದಕ್ಕೆ, ಎಂಎಸ್‌ಎಂಇಗಳ ವಿಸ್ತರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಬಜೆಟ್ ಒತ್ತು ನೀಡಿದ್ದು, ಸಮಗ್ರ ಅಭಿವೃದ್ಧಿ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ’ ಎಂದು ಕಾಸಿಯಾ ಅಧ್ಯಕ್ಷ ಬಿ.ಆರ್. ಗಣೇಶ್ ರಾವ್ ಹೇಳಿದ್ದಾರೆ.

ಬಜೆಟ್‌ನ ಕ್ರಮಗಳು ದೇಶದಾದ್ಯಂತ ಅತಿಸಣ್ಣ ಹಾಗೂ ಸಣ್ಣ ಉದ್ಯಮಗಳಿಗೆ ಪ್ರೇರಣೆ ನೀಡಲಿವೆ. ಈ ಕ್ರಮಗಳು ಉದ್ಯಮಗಳಿಗೆ ಹಣಕಾಸಿನ ನೆರವನ್ನು ಒದಗಿಸುವುದಲ್ಲದೆ, ರಫ್ತು ಮತ್ತು ತಂತ್ರಜ್ಞಾನ ಆಧಾರಿತ ಸಣ್ಣ ಉದ್ಯಮಗಳನ್ನು ಬೆಳೆಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದ್ದಾರೆ.

ADVERTISEMENT

ಕ್ಲಸ್ಟರ್ ಆಧುನೀಕರಣದ ಮೇಲೆ ಬಜೆಟ್ ನೀಡಿರುವ ಒತ್ತು ಸಣ್ಣ ಕೈಗಾರಿಕೆಗಳಿಗೆ ಹೊಸ ಅವಕಾಶಗಳನ್ನು ತೆರೆಯಬಹುದಾದರೂ ತಯಾರಿಕಾ ವೆಚ್ಚ ಕಡಿತ ಮತ್ತು ಸಾಲ ನೀಡುವ ಪ್ರಕ್ರಿಯೆಗಳ ಸುಧಾರಣೆಗೆ ಇನ್ನಷ್ಟು ಗಮನ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವರಿಗೆ ಕಾಸಿಯಾ ಸಲ್ಲಿಸಿದ್ದ ಕೆಲವು ಸಲಹೆಗಳನ್ನು ಬಜೆಟ್ ಒಳಗೊಂಡಿಲ್ಲ. ಸಲಹೆಗಳನ್ನು ಅಂಗೀಕರಿಸಿದ್ದಲ್ಲಿ ವಿಶೇಷವಾಗಿ ತಯಾರಿಕಾ ವಲಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕುತ್ತಿತ್ತು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.