ADVERTISEMENT

ಬಂಡವಾಳ ಮಾರುಕಟ್ಟೆ| ಹಣಕಾಸು ವಂಚನೆ, ಇರಲಿ ವಿವೇಚನೆ

ಅವಿನಾಶ್ ಕೆ.ಟಿ
Published 27 ಮಾರ್ಚ್ 2022, 19:30 IST
Last Updated 27 ಮಾರ್ಚ್ 2022, 19:30 IST
   

2020-21ನೇ ಹಣಕಾಸಿನ ವರ್ಷದಲ್ಲಿ ಎಷ್ಟು ಹಣಕಾಸಿನ ವಂಚನೆ ಪ್ರಕರಣಗಳು ವರದಿಯಾಗಿವೆ ಎಂದು ವ್ಯಕ್ತಿಯೊಬ್ಬರು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ಆರ್‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆರ್‌ಬಿಐ ಕೊಟ್ಟ ಉತ್ತರ ಆತಂಕಕಾರಿಯಾಗಿತ್ತು. 2020-21ರಲ್ಲಿ ಪ್ರತಿದಿನ ಸರಾಸರಿ 229 ಹಣಕಾಸಿನ ವಂಚನೆ ಪ್ರಕರಣಗಳು ನಡೆದಿವೆ. ಇಡೀ ವರ್ಷದಲ್ಲಿ, ಈ ರೀತಿಯ ವಂಚನೆಗಳಿಂದ ಜನರು ಸುಮಾರು ₹ 1.38 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ. ಹೌದು ನಮ್ಮ ದೇಶದಲ್ಲಿ ಪ್ರತಿ ನಿಮಿಷವೂ ಹಣಕಾಸಿನ ವಂಚನೆ ಪ್ರಕರಣಗಳು ನಡೆಯುತ್ತಲೇ ಇವೆ. ಹಣಕಾಸು ವಂಚನೆ ಅಂದರೆ ಏನು, ಅದನ್ನು ಪತ್ತೆ ಮಾಡುವುದು ಹೇಗೆ, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು ಎನ್ನುವ ಬಗ್ಗೆ ತಿಳಿದುಕೊಳ್ಳೋಣ.

ಅವಿನಾಶ್ ಕೆ.ಟಿ.

ನಕಲಿ ಕ್ರಿಪ್ಟೊ ಕರೆನ್ಸಿಯಿಂದ ₹ 1,200 ಕೋಟಿ ವಂಚನೆ: ಈ ವರ್ಷದ ಜನವರಿಯಲ್ಲಿ ಮೊರೆಸ್ ಕಾಯಿನ್ ಎಂಬ ಹೆಸರಿನಲ್ಲಿ ನಕಲಿ ಕ್ರಿಪ್ಟೊ ಕರೆನ್ಸಿ ಚಾಲ್ತಿಗೆ ತಂದು ಸುಮಾರು ₹ 1,200 ಕೋಟಿ ಮೊತ್ತದ ವಂಚನೆ ಮಾಡಲಾಗಿದೆ. ಮೊರೆಸ್ ಕಾಯಿನ್ ವ್ಯವಸ್ಥಿತವಾಗಿ ನಡೆದ ಪೂರ್ವಯೋಜಿತ ವಂಚನೆ. ಝಗಮಗಿಸುವ ನಕಲಿ ವೆಬ್‌ಸೈಟ್ ಸೃಷ್ಟಿ ಮಾಡಿ ಮೊರೆಸ್ ಕಾಯಿನ್ ಪ್ರಮೋಷನ್‌ಗಾಗಿ ಸೆಲೆಬ್ರೆಟಿಗಳನ್ನು ಬಳಸಿಕೊಳ್ಳಲಾಯಿತು. ಪ್ರತಿ ದಿನ ಶೇಕಡ 3ರಷ್ಟು ಲಾಭಾಂಶ ನೀಡುವುದಾಗಿ ತಿಳಿಸಿ ಆರಂಭಿಕವಾಗಿ ಹೂಡಿಕೆ ಮಾಡಿದವರಿಗೆ ಕೆಲವು ದಿನಗಳ ಕಾಲ ನಿಗದಿತ ಲಾಭಾಂಶ ಕೊಡಲಾಯಿತು. ಈ ರೀತಿಯಲ್ಲಿ ನಡೆದ ವ್ಯವಸ್ಥಿತ ವಂಚನೆ ಕಸರತ್ತಿನಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ₹ 1,200 ಕೋಟಿ ಹಣ ಕಳೆದುಕೊಂಡರು.

ಹೀಗೆಲ್ಲಾ ನಡೆಯುತ್ತೆ ವಂಚನೆ: ವಂಚಕರು ಅಮಾಯಕರನ್ನು ಹಣಕಾಸಿನ ವಂಚನೆ ಜಾಲಕ್ಕೆ ಬೀಳಿಸಲು ಹಲವು ತಂತ್ರಗಳನ್ನು ಬಳಸುತ್ತಾರೆ. ‘ಅತಿ ವಿನಯಂ ಧೂರ್ತ ಲಕ್ಷಣಂ’ ಎಂಬ ಮಾತನ್ನು ನೀವು ಕೇಳಿದ್ದೀರಿ ಅಲ್ಲವೇ? ನಿಮಗೆ ಹಣಕಾಸಿನ ಸಲಹೆ ಕೊಡುವಾಗ ಅಥವಾ ಹಣಕಾಸಿನ ಉತ್ಪನ್ನಗಳನ್ನು ಮಾರಾಟ ಮಾಡುವಾಗ ಯಾರಾದರೂ ಅತಿ ವಿನಯದಿಂದ ನಡೆದುಕೊಂಡರೆ ಅವರನ್ನು ಅನುಮಾನಿಸಿಯೇ ನೋಡಬೇಕಾಗುತ್ತದೆ.

ADVERTISEMENT

ವಿಮೆ, ಬ್ಯಾಂಕಿಂಗ್, ಮ್ಯೂಚುವಲ್ ಫಂಡ್ ಸೇರಿ ಹಣಕಾಸಿನ ಹಲವು ವಲಯಗಳಲ್ಲಿನ ಕೆಲವು ಏಜೆಂಟ್‌ಗಳು ಉತ್ಪನ್ನಗಳನ್ನು ಮಾರುವಾಗ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ನಿರ್ದಿಷ್ಟ ಹಣಕಾಸು ಉತ್ಪನ್ನದಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸುತ್ತಾರೆ. ಆದರೆ ನಿಖರ ದಾಖಲೆಗಳನ್ನು ಪರಿಶೀಲಿಸದೆ ಅವರ ಗಾಳಿ ಗೋಪುರದ ಮಾತುಗಳನ್ನು ನಂಬಬೇಡಿ. ಯಾವುದೇ ಹೊಸ ಯೋಜನೆ ಬಗ್ಗೆ ವಿವರಿಸಿದರೆ ಕಂಪನಿಯ ಅಸಲಿ ಮುದ್ರಿತ ಬ್ರೋಷರ್ ಕೇಳಿ, ಏಜೆಂಟ್ ಹೇಳಿದ ಮಾಹಿತಿ ಸತ್ಯವೇ ಎನ್ನುವುದನ್ನು ಖಾತರಿಪಡಿಸಿಕೊಳ್ಳಿ. ಬಾಯಿ ಮಾತನ್ನು ಮಾತ್ರ ನಂಬಿ ದೊಡ್ಡ ಮೊತ್ತದ ಹಣದ ಹೂಡಿಕೆಯ ತೀರ್ಮಾನಕ್ಕೆ ಬರಬೇಡಿ. ವಂಚಕರು ಸಾಮಾನ್ಯವಾಗಿ ನಿಮ್ಮ ಹೂಡಿಕೆಯ ಮೇಲೆ ಅತಿ ಹೆಚ್ಚು ಗ್ಯಾರಂಟಿ ಲಾಭಾಂಶ ಕೊಡುವ ಭರವಸೆ ಕೊಡುತ್ತಾರೆ.

ಗ್ಯಾರಂಟಿ ಲಾಭಾಂಶ ಎಂದ ತಕ್ಷಣ ಹಲವರು ಬಲೆಗೆ ಬೀಳುತ್ತಾರೆ. ವಿಮೆ, ಹೂಡಿಕೆಗಳು, ಕ್ರಿಪ್ಟೊ ಕರೆನ್ಸಿ, ರಿಯಲ್ ಎಸ್ಟೇಟ್ ಹೀಗೆ ಅನೇಕ ಹೆಸರುಗಳಲ್ಲಿ ಸ್ಕೀಂಗಳನ್ನು ಮಾಡಿ ವಂಚನೆಗೆ ಬೀಳಿಸುವ ಯತ್ನಗಳು ನಡೆಯುತ್ತಲೇ ಇರುತ್ತವೆ. ಕೆಲವು ರಿಯಲ್ ಎಸ್ಟೇಟ್ ಬ್ರೋಕರ್‌ಗಳು ನಿರ್ದಿಷ್ಟ ಜಾಗದಲ್ಲಿ ಈಗ ಚದರ ಅಡಿಗೆ ಬರೀ ₹ 3 ಸಾವಿರ ಕೊಟ್ಟು ಸೈಟ್ ಖರೀದಿಸಿ, ಕೇವಲ ಆರು ತಿಂಗಳಲ್ಲಿ ಅದರ ಬೆಲೆ ಚದರ ಅಡಿಗೆ ₹ 6 ಸಾವಿರ ಆಗುತ್ತದೆ ಎಂದು ಪುಸಲಾಯಿಸಬಹುದು. ಇಂತಹ ಅತಿ ಲಾಭದ ಆಫರ್‌ಗಳ ಬಗ್ಗೆ ಎಚ್ಚರವಿರಲಿ.

ಕೆಲವರು ಹಣಕಾಸಿನ ಹೂಡಿಕೆಗಳನ್ನು ಮಾಡಿಸುವ ಮೊದಲು ಉಚಿತ ಕೂಪನ್, ಉಚಿತ ಪ್ರವಾಸದ ಆಮಿಷಗಳನ್ನು ಒಡ್ಡುತ್ತಾರೆ. ಇಲ್ಲಿ ನಿಮಗಾಗುವ ಲಾಭಕ್ಕಿಂತ ಅವರಿಗಾಗುವ ಲಾಭವೇ ಜಾಸ್ತಿ ಎನ್ನುವುದು ಗೊತ್ತಿರಲಿ. ಇನ್ನು ನೇರವಾಗಿ ಭೇಟಿಯಾಗದೆ ಇ-ಮೇಲ್ ಮೂಲಕ, ಮೊಬೈಲ್ ಕರೆ ಮೂಲಕ ನಿಮ್ಮನ್ನು ತಲುಪಿ ಹೆಚ್ಚು ಲಾಭಾಂಶ ಕೊಡುತ್ತೇವೆ ಹೂಡಿಕೆ ಮಾಡಿ ಎಂದು ಯಾರಾದರೂ ಹೇಳಿದರೆ ಅದನ್ನು ಹಿಂದೆ–ಮುಂದೆ ನೋಡದೆ ನಂಬಬೇಡಿ. ಹಿರಿಯ ನಾಗರಿಕರಿಗೆ ನಿವೃತ್ತಿಯ ಸಮಯದಲ್ಲಿ ಬರುವ ದೊಡ್ಡ ಮೊತ್ತದ ಹಣದ ಮೇಲೆ ಕಣ್ಣಿಟ್ಟು ಅನೇಕರು ವಂಚಿಸುವ ಪ್ರಯತ್ನ ಮಾಡುತ್ತಾರೆ. ನಿಮ್ಮ ಮನೆಯಲ್ಲಿ ಹಿರಿಯ ನಾಗರಿಕರಿದ್ದು ಅವರಿಗೆ ಹಣಕಾಸು ನಿರ್ವಹಣೆ ಸರಿಯಾಗಿ ಗೊತ್ತಿಲ್ಲದಿದ್ದರೆ ಅವರ ಬಗ್ಗೆ ಕಾಳಜಿ ವಹಿಸಿ.

ತಜ್ಞರ ಅಭಿಪ್ರಾಯ ಪಡೆಯಿರಿ: ವಿಮೆ, ಬ್ಯಾಂಕಿಂಗ್, ಮ್ಯೂಚುವಲ್ ಫಂಡ್ ಸೇರಿ ಹಣಕಾಸಿನ ಉತ್ಪನ್ನಗಳನ್ನು ಕೊಳ್ಳುವಾಗ ಆತುರ ಬೇಡ. ಇವತ್ತು ಖರೀದಿಸಿ ನಾಳೆ ಬದಲಾಯಿಸುವುದಕ್ಕೆ ಅದು ಬಟ್ಟೆಯಲ್ಲ. ಒಮ್ಮೆ ಸಹಿ ಹಾಕಿ ಹಣಕಾಸು ಹೂಡಿಕೆ ಉತ್ಪನ್ನಗಳನ್ನು ಖರೀದಿಸಿದ ಮೇಲೆ ನೀವು ಷರತ್ತು ಮತ್ತು ನಿಬಂಧನೆಗಳ ವ್ಯಾಪ್ತಿಗೆ ಬರುತ್ತೀರಿ. ಹಾಗಾಗಿ ಯಾವುದೇ ಹೂಡಿಕೆ ಮಾಡುವಾಗ ಸಾಕಷ್ಟು ವಿಚಾರ ಮಾಡಿ, ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ತಜ್ಞರ ಅಭಿಪ್ರಾಯ ಪಡೆದು ಮುನ್ನಡೆಯಿರಿ. ಖರೀದಿಸುವ ತೀರ್ಮಾನಕ್ಕೆ ಬರುವ ಮುನ್ನ 10ರಿಂದ 12 ದಿನಗಳ ಕಾಲಾವಕಾಶ ಪಡೆದುಕೊಳ್ಳಿ. ಹಣಕಾಸು ಉತ್ಪನ್ನಗಳನ್ನು ಖರೀದಿಸುವಾಗ ಖಾಲಿ ಅರ್ಜಿಗೆ ಸಹಿ ಮಾಡಿಕೊಡುವ ಪ್ರವೃತ್ತಿ ಅನೇಕರಲ್ಲಿದೆ. ಆದರೆ ಹೀಗೆ ಮಾಡುವ ಮೊದಲು ಬಹಳ ಎಚ್ಚರಿಕೆ ವಹಿಸಿರಿ. ಯಾವುದೇ ಹಣಕಾಸಿನ ಉತ್ಪನ್ನ ಕೊಳ್ಳುವಾಗ ನಾವೇ ಅರ್ಜಿ ತುಂಬಿ ಸಹಿ ಹಾಕಬೇಕು.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.