ADVERTISEMENT

ಗೃಹ ಸಾಲ ವರ್ಗಾವಣೆಯೂ ಸುಲಭ

ನರಸಿಂಹ ಬಿ
Published 25 ನವೆಂಬರ್ 2018, 20:00 IST
Last Updated 25 ನವೆಂಬರ್ 2018, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೊಬೈಲ್ ನೆಟ್‌ವರ್ಕ್‌ ಕಂಪನಿ ಸರಿಯಾಗಿ ಸೇವೆ ನೀಡುತ್ತಿಲ್ಲವೆಂದರೆ ಕೂಡಲೇ ಮೊಬೈಲ್ ನಂಬರ್ ಅನ್ನು ಮತ್ತೊಂದು ನೆಟ್‌ವರ್ಕ್‌ಗೆ ಪೋರ್ಟ್ (ವರ್ಗಾವಣೆ) ಮಾಡಿಕೊಳ್ಳುತ್ತೀರಿ. ಆದರೆ, ನೀವು ಗೃಹ ಸಾಲ ಪಡೆದಿರುವ ಬ್ಯಾಂಕ್, ವರ್ಷದಿಂದ ವರ್ಷಕ್ಕೆ ಅನಿಯಮಿತವಾಗಿ ಬಡ್ಡಿ ದರ ಹೆಚ್ಚಿಸಿದರೆ ಏನು ಮಾಡುತ್ತೀರಿ? ಇದಕ್ಕೂ ಉತ್ತರ ಅಷ್ಟೇ ಸರಳ. ಹೌದು, ನೀವು ಸಾಲ ಪಡೆದಿರುವ ಬ್ಯಾಂಕ್‌ನಲ್ಲಿ ಬಡ್ಡಿ ದರ ಹೆಚ್ಚಿದ್ದು, ಮತ್ತೊಂದು ಬ್ಯಾಂಕ್‌ನಲ್ಲಿ ಬಡ್ಡಿ ದರ ಕಡಿಮೆ ಇದ್ದರೆ ಆ ಬ್ಯಾಂಕ್‌ಗೆ ಒಂದಿಷ್ಟು ಶುಲ್ಕ ನೀಡುವ ಮೂಲಕ ನಿಮ್ಮ ಸಾಲ ವರ್ಗಾಯಿಸಿಬಹುದು. ಖಾಸಗಿ ಬ್ಯಾಂಕ್‌ನ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕಿಗೆ ಮತ್ತು ರಾಷ್ಟ್ರೀಕೃತ ಬ್ಯಾಂಕಿನ ಸಾಲವನ್ನು ಖಾಸಗಿ ಬ್ಯಾಂಕ್‌ಗೆ ವರ್ಗಾಯಿಸುವುದು ಇದರಲ್ಲಿ ಸಾಧ್ಯವಿದೆ.

ಉದಾಹರಣೆ: ಒಬ್ಬ ವ್ಯಕ್ತಿ ಬ್ಯಾಂಕ್‌ವೊಂದರಿಂದ ₹ 40 ಲಕ್ಷ ಗೃಹ ಸಾಲ ಪಡೆದುಕೊಂಡಿದ್ದಾನೆ ಎಂದಿಟ್ಟುಕೊಳ್ಳಿ. ಬ್ಯಾಂಕ್ ಆತನಿಗೆ ಶೇ 9.8 ರ ವಾರ್ಷಿಕ ಬಡ್ಡಿ ದರ ವಿಧಿಸಿದರೆ, 20 ವರ್ಷಗಳ ಕಾಲಾವಧಿಯ ಈ ಸಾಲದ ಮಾಸಿಕ ಕಂತು (ಇಎಂಐ) ₹ 38,072 ಆಗಿರುತ್ತದೆ. ಆದರೆ, ಮತ್ತೊಂದು ಬ್ಯಾಂಕ್ ಇಷ್ಟೇ ಮೊತ್ತದ ಸಾಲವನ್ನು ಶೇ 8.3 ರ ಬಡ್ಡಿದರದಲ್ಲಿ ನೀಡಿದರೆ, ಮಾಸಿಕ ಕಂತು ₹ 34,208 ಆಗುತ್ತದೆ. ಅಂದರೆ ಈ ಲೆಕ್ಕಾಚಾರದಂತೆ ತಿಂಗಳಿಗೆ ₹ 3,864 ಲಾಭವಾಗುತ್ತದೆ. ಒಂದು ವರ್ಷಕ್ಕೆ ಬರೋಬ್ಬರಿ ₹ 46,368 ಬಡ್ಡಿ ಹಣ ಉಳಿತಾಯವಾಗುತ್ತದೆ.

ಎಚ್ಚರಿಕೆಯ ನಡೆ ಅಗತ್ಯ: ಒಂದು ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ಗೆ ಸಾಲ ವರ್ಗಾವಣೆ ಮಾಡುವಾಗ ಸಾಕಷ್ಟು ಮಾಹಿತಿ ಕಲೆ ಹಾಕಬೇಕು. ಸಾಲ ವರ್ಗಾವಣೆ ಮಾಡಿಸಿಕೊಳ್ಳುತ್ತಿರೋ ಬ್ಯಾಂಕ್ ಈ ಹಿಂದೆ ಯಾವ ರೀತಿ ಮತ್ತು ಯಾವ ಅವಧಿಯಲ್ಲಿ ಫ್ಲೋಟಿಂಗ್ ಬಡ್ಡಿ ದರ ಹೆಚ್ಚಳ ಮಾಡಿದೆ, ಸಂಸ್ಕರಣಾ ಶುಲ್ಕ ( ಪ್ರೊಸೆಸಿಂಗ್ ಫೀ) ಎಷ್ಟು ನಿಗದಿ ಮಾಡಿದೆ ಎಂಬುದನ್ನು ಅರಿಯಬೇಕು.

ADVERTISEMENT

ನಿಮ್ಮ ಸಾಲ ವರ್ಗಾವಣೆಯಾಗುವ ಸಮಯದಲ್ಲಿ ಕಡಿಮೆ ಬಡ್ಡಿ ದರ ನಿಗದಿ ಮಾಡಿ ವರ್ಗಾವಣೆಯಾದ ಕೆಲ ತಿಂಗಳಲ್ಲೇ ಸಾಲದ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿದರೆ ನಿಮ್ಮ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಎನ್ನುವಂತಾಗುತ್ತದೆ. ಹೀಗಾಗಿ ಅತ್ಯಂತ ಕಡಿಮೆ ಬಡ್ಡಿ ದರದ ಜತೆಗೆ ಕನಿಷ್ಠ ಸಂಸ್ಕರಣಾ ಶುಲ್ಕ ವಿಧಿಸುವ ಬ್ಯಾಂಕ್ ಅನ್ನು ಸಾಲ ವರ್ಗಾವಣೆಗೆ ಆಯ್ಕೆ ಮಾಡಿ.

ಬೇಕಾಗುವ ಸಮಯ: ಸಾಲ ವರ್ಗಾವಣೆಯಾಗುವ ಬ್ಯಾಂಕ್ ನಲ್ಲಿ ಎಲ್ಲ ವ್ಯವಸ್ಥೆಯೂ ನಿಮಗೆ ಪೂರಕವಾಗಿದೆ ಎನ್ನುವುದು ಸ್ಪಷ್ಟವಾದ ಬಳಿಕ ನೀವು ಈಗಾಗಲೇ ಸಾಲ ಪಡೆದುಕೊಂಡಿರುವ ಬ್ಯಾಂಕ್‌ಗೆ ಮಾಹಿತಿ ನೀಡಬೇಕು. ಆಗ ಕೆಲವೊಮ್ಮೆ ಬಡ್ಡಿದರ ಇಳಿಸುವ ಮೂಲಕ ಹೊಂದಾಣಿಕೆ ಮಾಡಿ ಗ್ರಾಹಕರನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಅವರು ಪ್ರಯತ್ನಿಸುತ್ತಾರೆ. ನಿಮಗೆ ಸಹಮತ ಇಲ್ಲ ಎಂದಾದಲ್ಲಿ ಸಾಲ ವರ್ಗಾವಣೆ ಪ್ರಕ್ರಿಯೆ 20 ರಿಂದ 25 ದಿನಗಳಲ್ಲಿ ಪೂರ್ಣಗೊಳುತ್ತದೆ.

ಅಗತ್ಯ ದಾಖಲೆ: ಆಸ್ತಿದಾಖಲೆಗಳ ಪಟ್ಟಿ, ಉಳಿದಿರುವ ಸಾಲದ ಮೊತ್ತ ಸೇರಿದಂತೆ ಬಹುತೇಕ ದಾಖಲೆಗಳನ್ನು ಈಗಾಗಲೇ ನೀವು ಸಾಲ ಪಡೆದುಕೊಂಡಿರುವ ಬ್ಯಾಂಕ್ ನೀಡುತ್ತದೆ. ಇತ್ತೀಚಿನ ಐಟಿ ರಿಟರ್ನ್ಸ್, ಕೆವೈಸಿ ದಾಖಲೆಗಳು, ಸ್ಯಾಲರಿ ಸ್ಲಿಪ್, ಸೇರಿದಂತೆ ಕೆಲ ದಾಖಲೆಗಳನ್ನಷ್ಟೇ ಸಾಲ ವರ್ಗಾವಣೆ ಮಾಡಿಸಿಕೊಳ್ಳುವ ಬ್ಯಾಂಕ್‌ಗೆ ನೀಡಬೇಕಾಗುತ್ತದೆ.

ಸಾಲ ವರ್ಗಾವಣೆಗೆ ಮುನ್ನ ಗಮನಿಸಿ: ಬಡ್ಡಿ ದರದಲ್ಲಿ ಹೆಚ್ಚು ವ್ಯತ್ಯಾಸ (ಈಗಿನ ಬಡ್ಡಿದರ ಶೇ 8.30 ರಿಂದ ಶೇ 9.30 ರಷ್ಟಿದೆ) ಇಲ್ಲದಿದ್ದರೆ ಗೃಹ ಸಾಲ ವರ್ಗಾವಣೆ ಲಾಭದಾಯಕವಲ್ಲ.

ಬಡ್ಡಿ ದರದಲ್ಲಿ ಹೆಚ್ಚು ವ್ಯತ್ಯಾಸ ಇಲ್ಲದಿದ್ದಾಗ ಸಾಲ ವರ್ಗಾವಣೆ ಮಾಡಿದರೆ ಸಾಲದ ಪ್ರಮಾಣದ ಮೇಲೆ ನೀವು ಹೆಚ್ಚುವರಿಯಾಗಿ ಸಂಸ್ಕರಣಾ ಶುಲ್ಕ (ಪ್ರೊಸೆಸಿಂಗ್ ಫೀ) ಕಟ್ಟಿ ಸಷ್ಟಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಸಮಯಕ್ಕೆ ಸರಿಯಾಗಿ ಸಾಲದ ಕಂತುಗಳನ್ನು ಮರುಪಾವತಿ ಮಾಡಿರದಿದ್ದರೆ ಸಾಲ ವರ್ಗಾವಣೆ ಕಷ್ಟಸಾಧ್ಯ.

ಷೇರುಪೇಟೆ: ಅಂದಾಜಿಗೆ ನಿಲುಕದ ಏರಿಳಿತ
ಮೂರು ವಾರಗಳಿಂದ ಕೊಂಚ ಸಕಾರಾತ್ಮಕವಾಗಿ ಕಾಣಿಸಿಕೊಂಡಿದ್ದ ಷೇರುಪೇಟೆಯ ಓಟಕ್ಕೆ ತಡೆಬಿದ್ದಿದೆ. ಹಿಂದಿನ ವಾರದ 4 ದಿನಗಳ ವಹಿವಾಟಿನಲ್ಲಿ 3 ದಿನಗಳು ನಕಾರಾತ್ಮಕ ವಹಿವಾಟು ನಡೆದಿರುವುದು ಹೂಡಿಕೆದಾರರನ್ನು ಚಿಂತೆಗೆ ದೂಡಿದೆ. ಏಳು ವಹಿವಾಟಿನ ದಿನಗಳ ಅವಧಿಯಲ್ಲಿ ಸೆನ್ಸೆಕ್ 476 ಅಂಶಗಳ ಕುಸಿತ ದಾಖಲಿಸಿದ್ದು, ನಿಫ್ಟಿ 155 ಅಂಶಗಳ ಕುಸಿತ ಕಂಡಿದೆ.

ಒಂದು ವಾರದ ಅವಧಿಯಲ್ಲಿ ರೂಪಾಯಿ ಮೌಲ್ಯ ₹ 1.74 ಪೈಸೆ (ವಿನಿಮಯ ದರ ಈಗ 70.69ಕ್ಕೆಏರಿದೆ) ಹೆಚ್ಚಳದ ಜತೆಗೆ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 63 ಡಾಲರ್‌ಗೆ ಇಳಿಕೆಯಾಗಿದ್ದರೂ ಪೇಟೆ ಚೇತರಿಕೆ ಕಾಣಲಿಲ್ಲ. ಮಾರುಕಟ್ಟೆ ತೀವ್ರ ಮಾರಾಟದ ಒತ್ತಡಕ್ಕೆ ಒಳಗಾಯಿತು. ಇದಲ್ಲದೆ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶವನ್ನು ಹೂಡಿಕೆದಾರರು ಎದುರು ನೋಡುತ್ತಿರುವುದರಿಂದ ಪೇಟೆ ಸುಧಾರಿಸಿಕೊಳ್ಳಲಿಲ್ಲ. ಅಮೆರಿಕದಲ್ಲಿ ಆರ್ಥಿಕ ಬೆಳವಣಿಗೆ ನಿಧಾನಗತಿಯಲ್ಲಿ ಇರುವುದು ಕೂಡ ಹಿಂಜರಿಕೆಗೆ ಪ್ರಮುಖ ಕಾರಣವಾಗಿದೆ.

ಮುನ್ನೋಟ: ಈ ವಾರದ ವಹಿವಾಟು ಏರಿಳಿತದಿಂದ ಕೂಡಿರುವ ಸಾಧ್ಯತೆ ಇದೆ. ಜಾಗತಿಕ ಪೇಟೆಯಲ್ಲಿನ ವಹಿವಾಟು, ರೂಪಾಯಿ ವಿನಿಮಯ ದರ ಮತ್ತು ಕಚ್ಚಾ ತೈಲದ ಬೆಲೆ ಮಟ್ಟವು ವಹಿವಾಟಿನ ಗತಿ ನಿರ್ಧರಿಸಲಿವೆ. ಮಾರುಕಟ್ಟೆಯಲ್ಲಿನ ಹಿಂಜರಿಕೆಯನ್ನು ಉತ್ತಮ ಕಂಪನಿಗಳ ಷೇರುಗಳ ಖರೀದಿಗೆ ಒಳ್ಳೆಯ ಅವಕಾಶ ಎಂದು ಹೂಡಿಕೆದಾರರು ಭಾವಿಸಬಹುದು.

ಶುಕ್ರವಾರ ಪ್ರಕಟಗೊಳ್ಳಲಿರುವ ಜಿಡಿಪಿ ಅಂಕಿ ಅಂಶಗಳನ್ನು ವಹಿವಾಟುದಾರರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ‘ಜಿಡಿಪಿ’ ವಿವರವು ಮಧ್ಯಂತರ ಅವಧಿಗೆ ಮಾರುಕಟ್ಟೆಯ ಗತಿ ನಿರ್ಧರಿಸಲಿದೆ.

ತೈಲ ದರ ಇಳಿಕೆಯಾಗುವುದರ ಜತೆಗೆ ರೂಪಾಯಿ ಮೌಲ್ಯ ಮತ್ತಷ್ಟು ಚೇತರಿಕೆಯಾದರೆ ಪೇಟೆ ಸಕಾರಾತ್ಮಕ ನೋಟದತ್ತ ಹೊರಳಬಹುದು. ಈ ವಾರ ಹುಡ್ಕೊ, ರಿಲಯನ್ಸ್ ಕ್ಯಾಪಿಟಲ್, ಸಿಂಪ್ಲೆಕ್ಸ್, ಅಟ್ಲಾಸ್ ಸೈಕಲ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ವರದಿ ಪ್ರಕಟಿಸಲಿವೆ.

(ಲೇಖಕ: ಇಂಡಿಯನ್‌ ಮನಿ ಡಾಟ್‌ಕಾಂ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.