ADVERTISEMENT

ವಿಮೆ ಪರಿಹಾರಕ್ಕೆ ರೈಡರ್ಸ್ ಬೆನೆಫಿಟ್ಸ್

ನರಸಿಂಹ ಬಿ
Published 10 ಮಾರ್ಚ್ 2019, 19:40 IST
Last Updated 10 ಮಾರ್ಚ್ 2019, 19:40 IST
   

ವಿವಿಧ ಬಗೆಯ ವಿಮೆ ಪರಿಹಾರ ಪಡೆಯುವಾಗ ಹೆಚ್ಚುವರಿ ವಿಮೆ ಸೌಲಭ್ಯ ಕಲ್ಪಿಸುವ ಅಥವಾ ನಿಯಮಗಳಿಗೆ ತಿದ್ದುಪಡಿ ಮಾಡುವ ಕೆಲ ಪ್ರಸ್ತಾವಗಳೂ ಇರುತ್ತವೆ. ವಿಮೆ ಪಡೆಯುವವರ ಅಗತ್ಯಕ್ಕೆ ಅನುಗುಣವಾಗಿ ಇನ್ಶೂರೆನ್ಸ್ ಪಾಲಿಸಿಯ ಜತೆಗೆ ಹೆಚ್ಚುವರಿ ಅನುಕೂಲತೆಗಳನ್ನು ಪಡೆದುಕೊಳ್ಳುವ ಪರಿಕಲ್ಪನೆಯೇ ‘ರೈಡರ್ ಬೆನೆಫಿಟ್’ (rider benefit). ಮೂಲ ಇನ್ಶೂರೆನ್ಸ್ ಪಾಲಿಸಿಯ ಜತೆಗೆ ರೈಡರ್ ಬೆನೆಫಿಟ್ಸ್‌ಗಳನ್ನು ನೀಡಲಾಗುತ್ತದೆ. ಪಾಲಿಸಿದಾರರು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಮರೆಯಬಾರದು.

ವಿವಿಧ ಬಗೆಯ ‘ರೈಡರ್‌ ಬೆನೆಫಿಟ್ಸ್‌’ಗಳನ್ನು ಇಲ್ಲಿ ವಿವರಿಸಲಾಗಿದೆ.

1) ಪರ್ಮನೆಂಟ್ ಡಿಸೆಬಲಿಟಿ ರೈಡರ್: ಶಾಶ್ವತ ಅಂಗವೈಕಲ್ಯ ಉಂಟಾದಲ್ಲಿ ನೆರವಿಗೆ ಬರುವುದು. ರಸ್ತೆ ಅಪಘಾತವಾಗಿ ವ್ಯಕ್ತಿಯೊಬ್ಬನಿಗೆ ಶಾಶ್ವತ ಅಂಗವೈಕಲ್ಯ ಉಂಟಾಗುತ್ತದೆ ಎಂದಿಟ್ಟುಕೊಳ್ಳಿ. ಅಂತಹ ಸಂದರ್ಭದಲ್ಲಿ ಅಪಘಾತಕ್ಕೆ ಒಳಗಾದ ವ್ಯಕ್ತಿಯ ಬಳಿ ಪರ್ಮನೆಂಟ್ ಡಿಸೆಬಲಿಟಿ ರೈಡರ್ ಇದ್ದರೆ, ಸಂತ್ರಸ್ತ ವ್ಯಕ್ತಿಗೆ ಹಣಕಾಸಿನ ನೆರವು ಸಿಗಲಿದೆ.

ADVERTISEMENT

2) ಆ್ಯಕ್ಸಿಡೆಂಟಲ್ ಡೆತ್ ಬೆನೆಫಿಟ್ ರೈಡರ್: ಅಪಘಾತದಿಂದ ಸಾವು ಸಂಭವಿಸಿದಲ್ಲಿ ನೆರವಿಗೆ ಬರುವ ರೈಡರ್. ವ್ಯಕ್ತಿಯು ಯಾವುದೇ ರೀತಿಯ ಅಪಘಾತದಿಂದ ಸಾವನ್ನಪ್ಪಿದ ಪಕ್ಷದಲ್ಲಿ ಆ್ಯಕ್ಸಿಡೆಂಟಲ್ ಡೆತ್ ಬೆನೆಫಿಟ್ ರೈಡರ್ ಇದ್ದರೆ ಆ ವ್ಯಕ್ತಿಯ ಕುಟುಂಬಕ್ಕೆ ಹಣಕಾಸಿನ ನೆರವು ಲಭ್ಯವಾಗಲಿದೆ.

3) ಕ್ರಿಟಿಕಲ್ ಇಲ್‌ನೆಸ್ ರೈಡರ್: ತೀವ್ರ ಅನಾರೋಗ್ಯಕ್ಕೆ ಅನುಕೂಲವಾಗುವ ರೈಡರ್. ಕ್ರಿಟಿಕಲ್ ಇಲ್‌ನೆಸ್ ರೈಡರ್ ಪಡೆದಿದ್ದರೆ ವ್ಯಕ್ತಿಯು ತೀವ್ರ ಅನಾರೋಗ್ಯಕ್ಕೆ ತುತ್ತಾದ ಪಕ್ಷದಲ್ಲಿ ಇನ್ಶೂರೆನ್ಸ್ ಕಂಪನಿಯು ಪಾಲಿಸಿದಾರನಿಗೆ ದೊಡ್ಡ ಮೊತ್ತದ ಹಣಕಾಸಿನ ನೆರವು ನೀಡುತ್ತದೆ. ಇನ್ಶೂರೆನ್ಸ್ ಪಡೆಯುವಾಗ ಎಲ್ಲ ರೀತಿಯ ಗಂಭೀರ ಕಾಯಿಲೆಗಳಿಗೆ ಹಣಕಾಸು ನೆರವು ಒದಗಿಸುವಂತಹ ಕ್ರಿಟಿಕಲ್ ಇಲ್‌ನೆಸ್ ರೈಡರ್ ಅನ್ನು ನೀವು ಖರೀದಿಸಬಹುದು.

4) ವೇವರ್ ಆಫ್ ಪ್ರೀಮಿಯಂ ರೈಡರ್: ಪಾಲಿಸಿದಾರ ಸಾವನ್ನಪ್ಪಿದರೆ ಪ್ರೀಮಿಯಂ ರದ್ದಾಗುವ ರೈಡರ್. ಮನೆಯ ಯಜಮಾನ ತನ್ನ ಮತ್ತು ಕುಟುಂಬದ ಸುರಕ್ಷತೆಗಾಗಿ ಇನ್ಶೂರೆನ್ಸ್ ಪಡೆದಿರುತ್ತಾನೆ. ಆದರೆ, ಆತ ಅಕಸ್ಮಿಕವಾಗಿ ಸಾವನ್ನಪ್ಪಿದರೆ ಕುಟುಂಬದ ಸುರಕ್ಷ
ತೆಗೆ ಇನ್ಶೂರೆನ್ಸ್ ಪ್ರೀಮಿಯಂ ಕಟ್ಟುವವರು ಯಾರು.

ಈ ಪ್ರಶ್ನೆಗೆ ಉತ್ತರ ನೀಡುವ ಸಲುವಾಗಿಯೇ ವೇವರ್ ಆಫ್ ಪ್ರೀಮಿಯಂ ರೈಡರ್ ಎಂಬ ಆಯ್ಕೆ ಇದೆ. ಇದರಂತೆ ಪಾಲಿಸಿ ಜತೆಗೆ ರೈಡರ್ ಹೊಂದಿರುವ ವ್ಯಕ್ತಿ ಸಾವನ್ನಪ್ಪಿದ ಪಕ್ಷದಲ್ಲಿ ಇನ್ಶೂರೆನ್ಸ್‌ನ ಇನ್ನುಳಿದ ಪ್ರೀಮಿಯಂಗಳು ರದ್ದಾಗುತ್ತವೆ.

5) ರೂಂ ರೆಂಟ್ ರೈಡರ್: ಇನ್ಶೂರೆನ್ಸ್ ಪಾಲಿಸಿಯಲ್ಲಿ ನಮೂದಿಸಿರುವ ನಿಯಮವನ್ನು ಮೀರಿ ಉನ್ನತ ದರ್ಜೆಯ ರೂಂನಲ್ಲಿ ( ಆಸ್ಪತ್ರೆ ವಾರ್ಡ್) ಚಿಕಿತ್ಸೆ ಪಡೆಯಲು ಈ ರೈಡರ್‌ನಲ್ಲಿ ಅವಕಾಶವಿರುತ್ತದೆ.

6) ಮೆಟರ್ನಿಟಿ ಕವರ್: ಹೆರಿಗೆ ಸಮಯದ ವೆಚ್ಚ ಭರಿಸುವ ರೈಡರ್ ಅನ್ನು ಮೆಟರ್ನಿಟ್ ಕವರ್ ಎಂದು ಕರೆಯುತ್ತಾರೆ. ಮೆಟರ್ನಿಟಿ ಕವರ್ ತೆಗೆದುಕೊಂಡ ಮೇಲೆ ವೇಯ್ಟಿಂಗ್ ಪೀರಿಯಡ್ (ಚಿಕಿತ್ಸೆ ಸಕ್ರಿಯವಾಗಲು ಕಾಯಬೇಕಿರುವ ಅವಧಿ) ಇರುತ್ತದೆ. ವೇಯ್ಟಿಂಗ್ ಪೀರಿಯಡ್ ಮುಗಿದ ಮೇಲೆ ಮೆಟರ್ನಿಟಿ ಕವರ್ ಸಕ್ರಿಯವಾಗುತ್ತದೆ.

ಮಾರ್ಚ್ ತಿಂಗಳಲ್ಲಿ ಪೇಟೆಯ ವರ್ತನೆ
ಷೇರುಪೇಟೆ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಮಾರ್ಚ್‌ ತಿಂಗಳ ಮೊದಲ ವಾರದಲ್ಲಿ ಉತ್ತಮ ಆರಂಭ ಪಡೆದುಕೊಂಡಿವೆ. ಇದೇ ಪೂರಕ ವಾತಾವರಣ ಇದ್ದರೆ ಸೆನ್ಸೆಕ್ಸ್ ಶೀಘ್ರದಲ್ಲಿಯೇ 37 ಸಾವಿರದ ಗಡಿ ದಾಟುವ ಸಾಧ್ಯತೆಯಿದ್ದು, ನಿಫ್ಟಿ 11,100 ಅಂಶಗಳಷ್ಟು ಏರಿಗೆ ದಾಖಲಿಸುವ ನಿರೀಕ್ಷೆಯಿದೆ.

ಮಾರ್ಚ್‌ನಲ್ಲಿ ಪೇಟೆ ವರ್ತನೆ: ಐತಿಹಾಸಿಕ ಅಂಕಿ-ಅಂಶಗಳನ್ನು ನೋಡಿದಾಗ ಕಳೆದ ದಶಕದಲ್ಲಿ ಮಾರ್ಚ್ ತಿಂಗಳಲ್ಲಿ 6 ಬಾರಿ ಸೂಚ್ಯಂಕಗಳು ಸರಾಕಾತ್ಮಕ ಬೆಳವಣಿಗೆ ಕಂಡಿವೆ.

2009 ರ ಮಾರ್ಚ್‌ನಲ್ಲಿ ಸೆನ್ಸೆಕ್ಸ್ ಶೇ 12 ರಷ್ಟು ಏರಿಕೆ ದಾಖಲಿಸಿತ್ತು. 2014 ಮತ್ತು 2016 ರಲ್ಲಿ ಶೇ 6 ರಷ್ಟು ಏರಿಕೆ ದಾಖಲಿಸಿತ್ತು. 2016 ರಲ್ಲಿ ನಿಫ್ಟಿ ಶೇ 10 ರಷ್ಟು ಏರಿಕೆ ಕಂಡಿದ್ದರೆ, 2011 ರಲ್ಲಿ ಶೇ 9.3 ಮತ್ತು 2010 ರಲ್ಲಿ ಶೇ 6 ರಷ್ಟು ಜಿಗಿದಿತ್ತು.

ಇನ್ನು, ಕಳೆದ 10 ವರ್ಷಗಳ ಅವಧಿಯಲ್ಲಿ ಮಾರ್ಚ್ ತಿಂಗಳಲ್ಲಿ ನಿಫ್ಟಿ ನಾಲ್ಕು ಬಾರಿ ನಕಾರಾತ್ಮಕ ಫಲಿತಾಂಶ ನೋಡಿದೆ. 2015 ರಲ್ಲಿ ಶೇ 4.6 ರಷ್ಟು ಕುಸಿದಿದ್ದರೆ, 2018 ಹಾಗು 2012 ರಲ್ಲಿ ಕ್ರಮವಾಗಿ ಶೇ 3.6 ಮತ್ತು ಶೇ 1.6 ರಷ್ಟು ಇಳಿಕೆ ಕಂಡಿದೆ.

ಮಾರ್ಚ್ ತಿಂಗಳಲ್ಲಿ ಷೇರುಪೇಟೆ ಸಕಾರಾತ್ಮಕವಾಗಿ ಸಾಗಲು ಹಲವು ಕಾರಣಗಳನ್ನು ಮಾರುಕಟ್ಟೆ ವಿಶ್ಲೇಷಕರು ನೀಡುತ್ತಾರೆ.

ಈ ತಿಂಗಳಲ್ಲಿ ಆರ್ಥಿಕ ವರ್ಷ ಕೊನೆಯಾಗುವುದರಿಂದ ಮಾರುಕಟ್ಟೆಗೆ ಹಣದ ಹರಿವು ಹೆಚ್ಚಾಗುತ್ತದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕೂಡ ಈ ಸಮಯದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡುತ್ತಾರೆ. 2016 ರಲ್ಲಿ ₹ 20 ಸಾವಿರ ಕೋಟಿ ಹೂಡಿಕೆ ಮಾಡಿದ್ದ ವಿದೇಶಿ ಸಾಂಸ್ಥಾಕ ಹೂಡಿಕೆದಾರರು 2017 ರಲ್ಲಿ ₹ 30 ಸಾವಿರ ಕೋಟಿ ತೊಡಗಿಸಿದ್ದಾರೆ.

ಹೂಡಿಕೆದಾರರು ಏನು ಮಾಡಬೇಕು?: ಚುನಾವಣೆ ಸಮೀಪದಲ್ಲಿರುವುದು ಮತ್ತು ಪಾಕಿಸ್ತಾನ ಹಾಗೂ ಭಾರತದ ನಡುವೆ ಬಿಕ್ಕಟ್ಟು ಉಲ್ಬಣಿಸಿರುವುದು ಮಾರುಕಟ್ಟೆಯ ಸೂಚ್ಯಂಕದ ಮೇಲೆ ನೇರ ಪರಿಣಾಮ ಬೀರಲಿವೆ. ಹೂಡಿಕೆದಾರರು ಚುನಾವಣಾ ಪೂರ್ವ ವಿಶ್ಲೇಷಣೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸುವುದು ಅಗತ್ಯ.

ಮುನ್ನೋಟ: ಚುನಾವಣೆ ದಿನಾಂಕ ನಿಗದಿ, ಗ್ರಾಹಕ ದರ ಸೂಚ್ಯಂಕ, ಸಗಟು ದರ ಸೂಚ್ಯಂಕ, ಜನವರಿಯ ಕೈಗಾರಿಕೆ ಉತ್ಪನ್ನ ದತ್ತಾಂಶ, ತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟದಿಂದ (ಒಪೆಕ್) ಉತ್ಪಾದನೆ ದತ್ತಾಂಶ ಮತ್ತು ಬೇಡಿಕೆ ಅಂದಾಜು ಪ್ರಕಟಗೊಳ್ಳಲಿದೆ. ಈ ಎಲ್ಲ ವಿದ್ಯಮಾನಗಳು ಮಾರುಕಟ್ಟೆ ಸೂಚ್ಯಂಕಗಳ ಮೇಲೆ ಪ್ರಭಾವ ಬೀರಲಿವೆ.

(ಲೇಖಕ: ಇಂಡಿಯನ್ ಮನಿಡಾಟ್ ಕಾಂ ಉಪಾಧ್ಯಕ್ಷ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.