ADVERTISEMENT

ನೆಮ್ಮದಿಯ ಜೀವನಕ್ಕೆ ಆರೋಗ್ಯ ವಿಮೆ

ನರಸಿಂಹ ಬಿ
Published 18 ನವೆಂಬರ್ 2018, 20:10 IST
Last Updated 18 ನವೆಂಬರ್ 2018, 20:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ನಮ್ಮನ್ನು ಆಗಾಗ ಅನಾರೋಗ್ಯ ಕಾಡದೆ ಬಿಡುವುದಿಲ್ಲ. ವಯೋ ಸಹಜವಾಗಿ ಕಾಡುವ ರೋಗಗಳು ಒಂದೆಡೆಯಾದರೆ, ದಿಢೀರ್ ಬಂದೆರಗುವ ಅನಾರೋಗ್ಯ ಸಮಸ್ಯೆಗಳು ಇಡೀ ಕುಟುಂಬವನ್ನು ಹೈರಾಣಾಗಿಸಿ ಬಿಡುತ್ತವೆ. ಮನೆಯಲ್ಲಿ ಯಾರೋ ಒಬ್ಬರು ಗಂಭೀರ ಆರೋಗ್ಯ ಸಮಸ್ಯೆಗೆ ಸಿಲುಕಿದಾಗ ಬರುವ
ಆಸ್ಪತ್ರೆ ಖರ್ಚು ಆ ಕುಟುಂಬದ ಹಣಕಾಸಿನ ಪರಿಸ್ಥಿತಿಯನ್ನು ಏರುಪೇರು ಮಾಡುತ್ತದೆ.

ಗ್ಲೋಬಲ್ ಮೆಡಿಕಲ್ ಟ್ರೆಂಡ್ಸ್ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಆರೋಗ್ಯ ಸೇವೆಗಳು ಪ್ರತಿ ವರ್ಷ ಶೇ 20 ರಷ್ಟು ತುಟ್ಟಿಯಾಗುತ್ತಿವೆ. ಆದರೆ, ಬೇಸರದ ಸಂಗತಿ ಏನೆಂದರೆ ಭಾರತದ ಗ್ರಾಮೀಣ ಪ್ರದೇಶದಲ್ಲಿನ ಶೇ 14 ಮತ್ತು ನಗರ ಪ್ರದೇಶದ ಶೇ 18 ರಷ್ಟು ಜನರು ಮಾತ್ರ ಆರೋಗ್ಯ ವಿಮೆ ಹೊಂದಿದ್ದಾರೆ. ರಾಷ್ಟ್ರೀಯ ಸಮೀಕ್ಷೆಯಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ. ವೈದ್ಯಕೀಯ ವೆಚ್ಚ ಮತ್ತು ಜೀವನಶೈಲಿ ಕಾಯಿಲೆಗಳು ಹಿಂದೆಂದಿಗಿಂತಲೂ ಈಗ ಏರುಗತಿಯಲ್ಲಿವೆ. ಹೀಗಾಗಿ ಸುಮಾರು 30 ವರ್ಷಕ್ಕೆ ಬರುವಷ್ಟರಲ್ಲಿ ಆರೋಗ್ಯ ವಿಮೆ (ಹೆಲ್ತ್ ಇನ್ಶೂರೆನ್ಸ್) ಹೊಂದಿದ್ದರೆ ಎಲ್ಲ ರೀತಿಯಲ್ಲೂ ಅನುಕೂಲ. ನಿಮ್ಮ ವಾರ್ಷಿಕ ಆದಾಯದ ಶೇ 2 ರಷ್ಟು ಹಣವನ್ನು ಹೆಲ್ತ್ ಇನ್ಶೂರೆನ್ಸ್ ಗಾಗಿ ಮೀಸಲಿಡುವುದು ಒಳಿತು.

ಈ ಅಂಶಗಳನ್ನು ಗಮನಿಸಿ
1. ಕಡಿಮೆ ಪ್ರೀಮಿಯಂ: ವಯಸ್ಸು ಚಿಕ್ಕದಿದ್ದು ವ್ಯಕ್ತಿ ಆರೋಗ್ಯವಾಗಿದ್ದಲ್ಲಿ ಕಡಿಮೆ ಪ್ರೀಮಿಯಂಗೆ ಒಳ್ಳೆಯ ಹೆಲ್ತ್ ಇನ್ಶೂರೆನ್ಸ್ ಸಿಗುತ್ತದೆ. ವಯಸ್ಸಿಗೆ ಅನುಗುಣವಾಗಿ ಪ್ರೀಮಿಯಂ ಜಾಸ್ತಿಯಾಗುತ್ತದೆ. ಆದರೆ, ಸಣ್ಣ ವಯಸ್ಸಿನಲ್ಲಿ ವಿಮೆ ಮಾಡಿಸಿದರೆ ಅನುಕೂಲ ಹೆಚ್ಚು.

ADVERTISEMENT

2. ವಯಸ್ಸಾದಾಗ ಇನ್ಶೂರೆನ್ಸ್ ನಿರಾಕರಣೆ: ವಯಸ್ಸಾದಂತೆ ಕಾಯಿಲೆಗಳು ಜಾಸ್ತಿ. ಆಗ ವಿಮೆಯ ವ್ಯಾಪ್ತಿಯೂ (ಕವರೇಜ್) ಹಿಗ್ಗುತ್ತದೆ. ಕವರೇಜ್ ಹೆಚ್ಚಾದಂತೆ ಪ್ರೀಮಿಯಂ ಮೊತ್ತ ಕೂಡ ಹೆಚ್ಚು. ಇದಲ್ಲದೆ ಹಲವು ಸಂದರ್ಭಗಳಲ್ಲಿ ಇನ್ಸೂರೆನ್ಸ್ ಕಂಪನಿಯು ವಯಸ್ಸಾದ ವ್ಯಕ್ತಿಗಳಿಗೆ ಇನ್ಶೂರೆನ್ಸ್ ಪಾಲಿಸಿ ನೀಡಲು ನಿರಾಕರಿಸಬಹುದು. ಏಕೆಂದರೆ ವಯಸ್ಸಾದ ಮೇಲೆ ಅನಾರೋಗ್ಯ ಜಾಸ್ತಿ. ಇಂತಹ ಸನ್ನಿವೇಶ ಎದುರಾಗದಂತೆ ಸಣ್ಣ ವಯಸ್ಸಿನಲ್ಲೇ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದು ಉತ್ತಮ.

3. ರಿನೀವಲ್ ನಿರಾಕರಣೆ ಸಾಧ್ಯವಿಲ್ಲ: ಸಣ್ಣ ವಯಸ್ಸಿನಲ್ಲೇ ಇನ್ಶೂರೆನ್ಸ್ ಮಾಡಿಸಿಕೊಂಡು ಪ್ರತಿ ವರ್ಷ ಅದನ್ನು ನವೀಕರಣ (ರಿನಿವಲ್) ಮಾಡಿಸುತ್ತಿದ್ದರೆ, ವಯಸ್ಸಾದ ಸಂದರ್ಭದಲ್ಲಿ ಆ ಇನ್ಶೂರೆನ್ಸ್ ರಿನಿವಲ್ ಅನ್ನು ಇನ್ಶೂರೆನ್ಸ್ ಕಂಪನಿ ನಿರಾಕರಿಸಲು ಸಾಧ್ಯವಿಲ್ಲ.

4. ನಿಮ್ಮ ಕಂಪನಿ ನೀಡುವ ಹೆಲ್ತ್ ಇನ್ಶೂರೆನ್ಸ್ ಸಾಲದು: ಇತ್ತೀಚೆಗೆ ಬಹುತೇಕ ಕಂಪನಿಗಳು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಕುಟುಂಬದವರಿಗೂ ಒಳಗೊಂಡಂತೆ ನೀಡುತ್ತವೆ. ಆದರೆ ಆ ಕವರೇಜ್ ಮೊತ್ತ ಸಾಕಾಗುವುದಿಲ್ಲ. ಹೆಚ್ಚುವರಿಯಾಗಿ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಮಾಡಿಸಿಕೊಳ್ಳುವುದು ಉತ್ತಮ. ಕೆಲಸಕ್ಕಾಗಿ ಒಂದೆರಡು ವರ್ಷಕ್ಕೆ ಒಂದು ಕಂಪನಿಯಿಂದ ಮತ್ತೊಂದು ಕಂಪನಿ ಬದಲಾಯಿಸುವುದು ಸರ್ವೇ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಇನ್ಶೂರೆನ್ಸ್ ಇಲ್ಲದೆ ವ್ಯಕ್ತಿ ಸಂಕಷ್ಟಕ್ಕೆ ಸಿಲುಕಬಾರದು ಎಂದರೆ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಅಗತ್ಯ.

5. ಹೆಚ್ಚುತ್ತಿರುವ ಜೀವನಶೈಲಿ ಕಾಯಿಲೆ: ಯಾಂತ್ರಿಕ ಜೀವನಶೈಲಿಯಿಂದಾಗಿ ಸಣ್ಣ ವಯಸ್ಸಿನಲ್ಲೇ ಹೃದ್ರೋಗ, ಸಕ್ಕರೆ ಕಾಯಿಲೆ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಹೆಲ್ತ್ ಇನ್ಶೂರೆನ್ಸ್ ಬೇಕೇ ಬೇಕು.

6. ಉತ್ತಮ ಆರ್ಥಿಕ ಯೋಜನೆ ರೂಪಿಸಲು: ಮನೆಯಲ್ಲಿ ಯಾರಾದರೊಬ್ಬರಿಗೆ ಅನಾರೋಗ್ಯ ಉಂಟಾದರೆ ಆ ಮನೆಯ ಆರ್ಥಿಕ ಆರೋಗ್ಯ ಹದಗೆಡುತ್ತದೆ. ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು, ಬೇರೆ ಬೇರೆ ಕಡೆ ನಿಶ್ಚಿತೆಯಿಂದ ಹಣ ಹೂಡಿಕೆ ಮಾಡಬೇಕು ಎಂಬ ಕನಸು ಕೈಗೂಡಲು ಹೆಲ್ತ್ ಇನ್ಶೂರೆನ್ಸ್ ಸಹಕಾರಿ.

7. ತುಂಬಾ ಅಗತ್ಯ ಇದ್ದಾಗ ಸಂಪೂರ್ಣ ಅನುಕೂಲ: ಹೆಲ್ತ್ ಇನ್ಸೂರೆನ್ಸ್ ನಿಮಗೆ ಸಣ್ಣ ವಯಸ್ಸಿನಲ್ಲೇ ಅಗತ್ಯವಿರದೆ ಇರಬಹುದು. ಆದರೆ, ಸಣ್ಣ ವಯಸ್ಸಿನಲ್ಲೇ ಇನ್ಶೂರೆನ್ಸ್ ಪಡೆದಾಗ ವೇಯ್ಟಿಂಗ್ ಪಿರಿಯಡ್ ಸೇರಿದಂತೆ ಇತರೆ ನಿಬಂಧನೆಗಳನ್ನು ನೀವು ಬೇಗ ಪೂರೈಸುತ್ತೀರಿ. ಹೀಗಾಗಿ ವಯಸ್ಸಾದ ಕಾಲದಲ್ಲಿ ನಿಮಗೆ ಅಡೆತಡೆಯಿಲ್ಲದ ವೈದ್ಯಕೀಯ ಸೇವೆ ಸಿಗುತ್ತದೆ.

ಪೇಟೆಯಲ್ಲಿ ಅನಿಶ್ಚಿತತೆಯ ಕಾರ್ಮೋಡ
ಸೆನ್ಸೆಕ್ಸ್ ಮತ್ತು ನಿಫ್ಟಿ ವಾರದ ಕೊನೆಯ ವಹಿವಾಟನ್ನು ಸಕಾರಾತ್ಮಕವಾಗಿ ಪೂರ್ಣಗೊಳಿಸಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಅನಿಶ್ಚಿತತೆಯ ಕವಿದಿದೆ.

ಶುಕ್ರವಾರ ಸೆನ್ಸೆಕ್ಸ್ 196 ಅಂಶಗಳ ಏರಿಕೆ ದಾಖಲಿಸಿ 35,457 ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 65 ಅಂಶಗಳ ಏರಿಕೆ ಕಂಡು 10,682 ರಲ್ಲಿ ವಹಿವಾಟು ಕೊನೆಗೊಳಿಸಿದೆ. ಆದರೆ, ನವೆಂಬರ್ 9 ರಿಂದ 16 ರ ವರೆಗಿನ ದತ್ತಾಂಶ ನೋಡಿದಾಗ ನಿಫ್ಟಿ ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳ ಹಿನ್ನಡೆ ಸ್ಪಷ್ಟವಾಗುತ್ತದೆ. ಈ ಅವಧಿಯಲ್ಲಿ ಸೆನ್ಸೆಕ್ಸ್ 2.04 ರಷ್ಟು (34,733.58) ಹಿನ್ನಡೆ ಅನುಭವಿಸಿದ್ದರೆ, ನಿಫ್ಟಿ 1.96 ರಷ್ಟು ( 10,472.50) ಕುಸಿದಿದೆ.

ರೂಪಾಯಿ ಮೌಲ್ಯ 71.92 ಗೆ ಚೇತರಿಕೆ, ಗ್ರಾಹಕ ಬೆಲೆ ಸೂಚ್ಯಂಕ 13 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಕೆ, ಕಚ್ಚಾ ತೈಲ ಬೆಲೆ ಇಳಿಕೆ ಸಕಾರಾತ್ಮಕ ಅಂಶಗಳಾದರೂ ಪೇಟೆ ಮಾರಾಟದ ಒತ್ತಡದಲ್ಲಿದೆ. ದೇಶೀಯ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಅಕ್ಟೋಬರ್‌ನಲ್ಲಿ ₹ 38,906 ಕೋಟಿ ಮತ್ತು ಸೆಪ್ಟೆಂಬರ್‌ನಲ್ಲಿ ₹ 21,035 ಕೋಟಿ ಹಿಂತೆಗೆದುಕೊಂಡಿದ್ದಾರೆ. ಅಮೆರಿಕದಲ್ಲಿ ಹೆಚ್ಚು ಲಾಭದಾಯಕ ಅವಕಾಶಗಳು ಸಿಗುತ್ತಿರುವುದರಿಂದ ಅತ್ತ ಆಕರ್ಷಿತರಾಗುತ್ತಿದ್ದಾರೆ.

ಮುನ್ನೋಟ: ಇತ್ತೀಚಿನ ಕೆಲ ದಿನಗಳಿಂದ ಜಾಗತಿಕ ವಿದ್ಯಮಾನಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಷೇರುಪೇಟೆ ಮೇಲೆ ಈ ವಾರ ದೇಶಿ ಬೆಳವಣಿಗೆಗಳು ಪ್ರಭಾವ ಬೀರಲಿವೆ.

ರೂಪಾಯಿ ಚೇತರಿಕೆ, ಆರ್‌ಬಿಐ ಮಂಡಳಿ ಸಭೆ, ಛತ್ತೀಸಗಡ ವಿಧಾನಸಭೆ ಚುನಾವಣೆ ಒಳಗೊಂಡಂತೆ ಒಟ್ಟಾರೆ ಅರ್ಥಿಕತೆಯ ಲೆಕ್ಕಾಚಾರಗಳಿಗೆ ತಕ್ಕಂತೆ ಪೇಟೆಯಲ್ಲಿ ವಹಿವಾಟು ಏರಿಳಿತ ಕಾಣಲಿದೆ. ಮಿಡ್‌ಕ್ಯಾಪ್‌ ಇಂಡೆಕ್ಸ್‌ ಮೇಲೆ ವಹಿವಾಟುದಾರರು ಗಮನ ಕೇಂದ್ರೀಕರಿಸಲಿದ್ದಾರೆ.

ರೆಲಿಗೇರ್, ಡಿಎಚ್ಎಫ್ಎಲ್, ಸೀಮನ್ಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ವರದಿ ಪ್ರಕಟಿಸಲಿವೆ. ಈ ವಾರ ನಿಫ್ಟಿ 10,700 ರಿಂದ 10,800 ಅಂಶಗಳ ವರೆಗೆ ಏರಿಕೆ ದಾಖಲಿಸುವ ನಿರೀಕ್ಷೆಯಿದೆ.

(ಲೇಖಕ: ಇಂಡಿಯನ್‌ ಮನಿ ಡಾಟ್‌ಕಾಂನ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.