ನವದೆಹಲಿ: ‘ಕಂಪನಿಯಲ್ಲಿ ಉದ್ಯೋಗಿಗಳು ಎಷ್ಟು ಹೊತ್ತು ಕೆಲಸ ಮಾಡುತ್ತಾರೆ ಎನ್ನುವುದು ಮುಖ್ಯವಲ್ಲ. ಕಂಪನಿಯ ಅಭಿವೃದ್ಧಿಗೆ ಪೂರಕವಾಗಿ ಅವರು ಹೊಂದಿಕೊಳ್ಳುವುದು ಮುಖ್ಯ. ಅವರ ಸಬಲೀಕರಣ ಕೂಡ ಅತಿಮುಖ್ಯವಾಗಿದೆ’ ಎಂದು ಎಫ್‌ಎಂಸಿಜಿ ಕಂಪನಿಯಾದ ಐಟಿಸಿ ಮುಖ್ಯಸ್ಥ ಸಂಜೀವ್ ಪುರಿ ಮಂಗಳವಾರ ಹೇಳಿದ್ದಾರೆ.
‘ಉದ್ಯೋಗಿಗಳು ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು’ ಎಂಬ ಎಲ್ ಆ್ಯಂಡ್ ಟಿ ಮುಖ್ಯಸ್ಥ ಎಸ್.ಎನ್. ಸುಬ್ರಹ್ಮಣ್ಯನ್ ಅವರ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪುರಿ ಅವರು, ಕಟ್ಟಡವೊಂದನ್ನು ನಿರ್ಮಿಸುವಾಗಿ ಕಾರ್ಮಿಕರು ಮಾಡುವ ಕೆಲಸಗಳನ್ನು ಉದಾಹರಿಸಿದ್ದಾರೆ.
‘ನೀವು ಕೆಲಸ ಕಟ್ಟಡ ನಿರ್ಮಾಣದ ಸ್ಥಳಕ್ಕೆ ತೆರಳಿ. ಅಲ್ಲಿರುವ ಕಾರ್ಮಿಕನಿಗೆ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿ. ಆಗ ಆಗ ಇಟ್ಟಿಗೆ ಇಡುತ್ತಿರುವುದಾಗಿ ಹೇಳುತ್ತಾನೆ. ಮತ್ತೊಬ್ಬನನ್ನು ಪ್ರಶ್ನಿಸಿದರೆ ಗೋಡೆ ನಿರ್ಮಿಸುತ್ತಿರುವುದಾಗಿ ಉತ್ತರಿಸುತ್ತಾನೆ. ಮತ್ತೊಬ್ಬ ಕೋಟೆ ನಿರ್ಮಿಸುತ್ತಿರುವಾಗಿ ಹೇಳುತ್ತಾನೆ. ಇದು ಕಾರ್ಮಿಕರಿಗೆ ಇರಬೇಕಾದ ದೃಷ್ಟಿಕೋನವಾಗಿದೆ’ ಎಂದು ಪಿಟಿಐಗೆ ತಿಳಿಸಿದ್ದಾರೆ.
ಕಂಪನಿಯ ಯಶಸ್ಸಿನ ಹಾದಿಯಲ್ಲಿ ಜನರು ಭಾಗಿಯಾಗುವುದನ್ನು ನಾವು ಬಯಸುತ್ತೇವೆ. ಅವರು ಉತ್ಸಾಹದಿಂದ ಪಾಲ್ಗೊಳ್ಳಬೇಕು. ಅದಕ್ಕಾಗಿ ಪ್ರತಿ ವಾರದಲ್ಲಿ ಎರಡು ದಿನ ವರ್ಕ್‌ಫ್ರಮ್ ಹೋಂ (ಮನೆಯಿಂದಲೇ ಕೆಲಸ) ಸೇರಿದಂತೆ ಉದ್ಯೋಗಿಗಳಿಗೆ ಅನುಕೂಲಕರವಾದ ಕೆಲಸದ ವಾತಾವರಣ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.