ADVERTISEMENT

ದತ್ತಾಂಶ ಕೇಂದ್ರ | ₹9 ಲಕ್ಷ ಕೋಟಿ ಹೂಡಿಕೆ: ಅದಾನಿ ಸಮೂಹದಿಂದ ಮಹತ್ವದ ಘೋಷಣೆ

ಇಂಧನ ಉತ್ಪಾದನೆ ಮೇಲೆಯೂ ಹೂಡಿಕೆ

ಪಿಟಿಐ
Published 17 ಫೆಬ್ರುವರಿ 2026, 16:18 IST
Last Updated 17 ಫೆಬ್ರುವರಿ 2026, 16:18 IST
ಅದಾನಿ ಸಮೂಹ
ಅದಾನಿ ಸಮೂಹ   

ನವದೆಹಲಿ: ನವೀಕರಿಸಬಹುದಾದ ಇಂಧನ ಬಳಕೆ ಮಾಡುವ ಭಾರಿ ಸಾಮರ್ಥ್ಯದ ದತ್ತಾಂಶ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು 2035ರೊಳಗೆ 100 ಬಿಲಿಯನ್ ಡಾಲರ್‌ (ಸರಿಸುಮಾರು ₹9.07 ಲಕ್ಷ ಕೋಟಿ) ಹೂಡಿಕೆ ಮಾಡುವುದಾಗಿ ಅದಾನಿ ಸಮೂಹ ಹೇಳಿದೆ.

ಈ ಹೂಡಿಕೆಯು ಸರ್ವರ್ ತಯಾರಿಕೆ, ಕ್ಲೌಡ್‌ ವೇದಿಕೆಗಳು, ಪೂರಕವಾಗಿರುವ ಇತರ ಉದ್ಯಮಗಳ ವಲಯದಲ್ಲಿ ಹೆಚ್ಚುವರಿಯಾಗಿ ಒಟ್ಟು 150 ಬಿಲಿಯನ್‌ ಡಾಲರ್‌ (₹13.60 ಲಕ್ಷ ಕೋಟಿ) ವಹಿವಾಟುಗಳಿಗೆ ಕಾರಣವಾಗಲಿದೆ ಎಂದು ಅದಾನಿ ಎಂಟರ್‌ಪ‍್ರೈಸಸ್ ಹೇಳಿದೆ.

‘ಇಂಧನ ಹಾಗೂ ಕಂಪ್ಯೂಟಿಂಗ್ ಸಾಮರ್ಥ್ಯದ ನಡುವಿನ ಸಮತೋಲನದ ಮೇಲೆ ಹಿಡಿತ ಸಾಧಿಸುವ ದೇಶಗಳು ಮುಂದಿನ ದಶಕವನ್ನು ರೂಪಿಸುವ ಕೆಲಸ ಮಾಡಲಿವೆ’ ಎಂದು ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಹೇಳಿದ್ದಾರೆ.

ADVERTISEMENT

‘ಎ.ಐ ಕಾಲಘಟ್ಟದಲ್ಲಿ ಭಾರತವು ಗ್ರಾಹಕ ಆಗಿ ಮಾತ್ರವೇ ಇರುವುದಿಲ್ಲ. ಅದು ಸೃಷ್ಟಿಕರ್ತನ, ನಿರ್ಮಾತೃವಿನ ಜಾಗದಲ್ಲಿ ಹಾಗೂ ಬುದ್ಧಿಮತ್ತೆಯ ರಫ್ತುದಾರನ ಸ್ಥಾನದಲ್ಲಿ ಇರಲಿದೆ’ ಎಂದು ಅವರು ವಿವರಿಸಿದ್ದಾರೆ.

ಅದಾನಿ ಸಮೂಹವು ವಿಶಾಖಪಟ್ಟಣದಲ್ಲಿ ಗಿಗಾವಾಟ್‌ ಸಾಮರ್ಥ್ಯದ ದತ್ತಾಂಶ ಕೇಂದ್ರ ನಿರ್ಮಾಣಕ್ಕೆ ಗೂಗಲ್ ಕಂಪನಿಯ ಜೊತೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಅಲ್ಲದೆ, ಹೈದರಾಬಾದ್‌ ಮತ್ತು ಪುಣೆಯಲ್ಲಿ ದತ್ತಾಂಶ ಕೇಂದ್ರಗಳ ಸ್ಥಾಪನೆಗೆ ಮೈಕ್ರೊಸಾಫ್ಟ್‌ ಜೊತೆ ಪಾಲುದಾರಿಕೆ ಹೊಂದಿದೆ.

ಅದಾನಿ ಸಮೂಹವು ತನ್ನ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು 55 ಬಿಲಿಯನ್ ಡಾಲರ್ (₹4.98 ಲಕ್ಷ ಕೋಟಿ) ಹೂಡಿಕೆ ಮಾಡಲಿದೆ.

ಸಮೂಹವು ಘೋಷಣೆ ಮಾಡಿರುವ ದತ್ತಾಂಶ ಕೇಂದ್ರವು ಸಾಂಪ್ರದಾಯಿಕ ಮಾದರಿಯಲ್ಲಿ ಕೆಲಸ ಮಾಡುವುದಿಲ್ಲ. ‘ಇಲ್ಲಿ ಇಂಧನ ಉತ್ಪಾದನೆ, ಭಾರಿ ಪ್ರಮಾಣದ ದತ್ತಾಂಶವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಒಟ್ಟೊಟ್ಟಿಗೆ ಅಭಿವೃದ್ಧಿಪಡಿಸಲಾಗುತ್ತದೆ’ ಎಂದು ಸಮೂಹವು ಪ್ರಕಟಣೆಯಲ್ಲಿ ತಿಳಿಸಿದೆ.

ಜಾಗತಿಕ ಮಟ್ಟದಲ್ಲಿನ ಎ.ಐ. ಕೆಲಸಗಳಿಗೆ ಅಪಾರ ಪ್ರಮಾಣದ ಇಂಧನದ ಅಗತ್ಯ ಇದೆ. ಇಂತಹ ಸಂದರ್ಭದಲ್ಲಿ ಅದಾನಿ ಸಮೂಹವು ಈ ಕೆಲಸಗಳಿಗೆ ಬೇಕಿರುವ ಇಂಧನವನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ, ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯ ಮಟ್ಟದಲ್ಲಿ ಇರಿಸಿಕೊಂಡು ಒದಗಿಸುವ ಸ್ಥಾನದಲ್ಲಿದೆ ಎಂದು ಅದು ಹೇಳಿದೆ.

ಜಾಗತಿಕ ಮಟ್ಟದ ಪೂರೈಕೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಈ ಯೋಜನೆಯ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನು ತಡೆಯುವ ಉದ್ದೇಶದಿಂದ ಅದಾನಿ ಸಮೂಹವು, ಮಹತ್ವದ ಮೂಲಸೌಕರ್ಯ ಬಿಡಿಭಾಗಗಳು, ಹೆಚ್ಚಿನ ಸಾಮರ್ಥ್ಯದ ಪರಿವರ್ತಕಗಳು, ಗ್ರಿಡ್‌ ವ್ಯವಸ್ಥೆಗಳು, ಇನ್ವರ್ಟರ್‌ಗಳು ಮತ್ತು ಇತರ ಅಗತ್ಯ ಉಪಕರಣಗಳ ದೇಶಿ ತಯಾರಿಕೆಯಲ್ಲಿಯೂ ಪಾಲುದಾರರ ಜೊತೆಯಾಗಿ ಹೂಡಿಕೆ ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.