(ಚಿತ್ರ ಕೃಪೆ: x/@gautam_adani)
ಅಹಮದಾಬಾದ್: ಉದ್ಯಮಿ ಗೌತಮ್ ಅದಾನಿ ಅವರ ಕಿರಿಯ ಪುತ್ರ ಜೀತ್ ಅದಾನಿ ಮತ್ತು ದಿವಾ ಶಾ ಅವರ ವಿವಾಹ ಸಮಾರಂಭವು ಇಂದು ಸರಳ, ಸಾಂಪ್ರದಾಯಿಕವಾಗಿ ನೆರವೇರಿತು. ಕುಟುಂಬಸ್ಥರು, ಸ್ನೇಹಿತರು ಹಾಗೂ ಆಪ್ತರು ಮಾತ್ರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಿವಾಹವನ್ನು ಸರಳವಾಗಿ ನಡೆಸುವ ಮೂಲಕ ಆರೋಗ್ಯ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಮೂಲಸೌಕರ್ಯ ಸೇರಿದಂತೆ ವಿವಿಧ ಸಾಮಾಜಿಕ ಸೇವೆಗಳಿಗಾಗಿ ಅದಾನಿ, ಬರೋಬ್ಬರಿ ₹10,000 ಕೋಟಿ ದೇಣಿಗೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.
ಶಾಂತಿಗ್ರಾಮದಲ್ಲಿ ಜೈನ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮವು ನೆರವೇರಿತು. ಯಾವುದೇ ಸೆಲೆಬ್ರಿಟಿಗೆ ಆಹ್ವಾನ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.
ನವಜೋಡಿಯ ಚಿತ್ರ ಹಂಚಿಕೊಂಡಿರುವ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ, 'ಸರ್ವಶಕ್ತ ದೇವರ ಆಶೀರ್ವಾದದೊಂದಿಗೆ ಜೀತ್ ಮತ್ತು ದಿವಾ ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ' ಎಂದು ತಿಳಿಸಿದ್ದಾರೆ.
'ಇಂದು ಅಹಮದಾಬಾದ್‌ನಲ್ಲಿ ಪ್ರೀತಿಪಾತ್ರರ ಸಮ್ಮುಖದಲ್ಲಿ ಸಾಂಪ್ರದಾಯಿಕ ವಿಧಿವಿಧಾನ ಮತ್ತು ಶುಭಹಾರೈಕೆಗಳೊಂದಿಗೆ ಮದುವೆ ಕಾರ್ಯಕ್ರಮ ನೆರವೇರಿತು. ಇದು ಚೊಕ್ಕದಾದ ಅತ್ಯಂತ ಖಾಸಗಿ ಸಮಾರಂಭ ಆಗಿದ್ದರಿಂದ ನಾವು ಬಯಸಿದರೂ ಎಲ್ಲ ಹಿತೈಷಿಗಳನ್ನು ಆಹ್ವಾನಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಜೀತ್-ದೀವಾ ಜೋಡಿಗೆ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಇರಲಿ' ಎಂದು ಹೇಳಿದ್ದಾರೆ.
₹10 ಸಾವಿರ ಕೋಟಿ ದೇಣಿಗೆಯು ಕೈಗೆಟುಕುವ ದರದಲ್ಲಿ ವಿಶ್ವದರ್ಜೆಯ ಸೌಲಭ್ಯಗಳುಳ್ಳ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು, ಉನ್ನತ ಶ್ರೇಣಿಯ ಕೆ-12 ಶಾಲೆಗಳು, ಜಾಗತಿಕ ಸುಧಾರಿತ ಕೌಶಲ್ಯ ಅಭಿವೃದ್ಧಿ ಕೇಂದ್ರಗಳು ಮತ್ತು ಉದ್ಯೋಗಾವಕಾಶಗಳನ್ನು ಒಳಗೊಂಡಿರಲಿವೆ.
ಏಷ್ಯಾದ ಎರಡನೇ ಶ್ರೀಮಂತ ವ್ಯಕ್ತಿ ಆಗಿರುವ ಅದಾನಿಗೆ ಇಬ್ಬರು ಮಕ್ಕಳು. ಕರಣ್ ಮತ್ತು ಜೀತ್. ಕರಣ್ ಅದಾನಿ ಅವರು ಪರಿಧಿ ಅವರನ್ನು ವರಿಸಿದ್ದರು. ಜೀತ್ ಅದಾನಿ ಏರ್‌ಪೋರ್ಟ್ಸ್‌ನ ನಿರ್ದೇಶಕರಾಗಿದ್ದಾರೆ.
ದಿವಾ, ವಜ್ರದ ವ್ಯಾಪಾರಿ ಜೈಮಿನ್ ಶಾ ಅವರ ಪುತ್ರಿಯಾಗಿದ್ದಾರೆ. ಆಕೆ 'ಸಿ ದಿನೇಶ್ ಆ್ಯಂಡ್ ಕೊ ಪ್ರೈ. ಲಿಮಿಟೆಡ್'ನ ಸಹ ಮಾಲಕಿ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.