ADVERTISEMENT

ಮೈಕ್ರೊಸಾಫ್ಟ್ ಬೆನ್ನಲ್ಲೇ ಅಮೆಜಾನ್ ಘೋಷಣೆ: ಭಾರತದಲ್ಲಿ ₹3.14 ಲಕ್ಷ ಕೋಟಿ ಹೂಡಿಕೆ

ಪಿಟಿಐ
Published 10 ಡಿಸೆಂಬರ್ 2025, 10:45 IST
Last Updated 10 ಡಿಸೆಂಬರ್ 2025, 10:45 IST
ಅಮೆಜಾನ್
ಅಮೆಜಾನ್   

ನವದೆಹಲಿ: ‘ಭಾರತದಲ್ಲಿ ಕ್ಲೌಡ್‌ ಕಂಪ್ಯೂಟಿಂಗ್‌ ಹಾಗೂ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಸಾಮರ್ಥ್ಯದ ವಿಸ್ತರಣೆಗಾಗಿ ₹3.14 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಾಗುವುದು’ ಎಂದು ಇ–ಕಾಮರ್ಸ್‌ ದೈತ್ಯ ಅಮೆಜಾನ್ ಇಂಡಿಯಾ ಮುಖ್ಯಸ್ಥ ಅಮಿತ್‌ ಅಗರ್‌ವಾಲ್‌ ತಿಳಿಸಿದ್ದಾರೆ.

2030ರ ವೇಳೆಗೆ ಭಾರತದಲ್ಲಿ ಕೃತಕ ಎ.ಐ ತಂತ್ರಜ್ಞಾನ ಕ್ಷೇತ್ರದಲ್ಲಿ ₹1.58 ಲಕ್ಷ ಕೋಟಿ ಹೂಡಿಕೆ ಮಾಡಲು ಯೋಜಿಸಿರುವುದಾಗಿ ಮೈಕ್ರೊಸಾಫ್ಟ್‌ನ ಸಿಇಒ ಸತ್ಯ ನಾದೆಲ್ಲಾ ಅವರು ಮಂಗಳವಾರ ತಿಳಿಸಿದ್ದರು. ಇದರ ಬೆನ್ನಲ್ಲೇ ಅಮೆಜಾನ್ ಘೋಷಣೆ ಹೊರಬಿದ್ದಿದೆ. ಇದಕ್ಕೂ ಮೊದಲು ಗೂಗಲ್ ಮುಂದಿನ ಐದು ವರ್ಷಗಳಲ್ಲಿ ಎ.ಐ ಡೇಟಾ ಸೆಂಟರ್‌ಗಳನ್ನು ನಿರ್ಮಿಸಲು ಭಾರತದಲ್ಲಿ ₹1.33 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಹೇಳಿತ್ತು.

2030ರ ವೇಳೆಗೆ ಕೃತಕ ಬುದ್ಧಿಮತ್ತೆ ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯದಂತಹ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದರಿಂದ ಭಾರತದಲ್ಲಿ ಹೆಚ್ಚುವರಿಯಾಗಿ 10 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಮಿತ್‌ ಹೇಳಿದ್ದಾರೆ.

ADVERTISEMENT

2010ರಿಂದ ಅಮೆಜಾನ್ ಭಾರತದಲ್ಲಿ ₹35.97 ಲಕ್ಷ ಕೋಟಿ ಹೂಡಿಕೆ ಮಾಡಿದೆ. 2023ರಲ್ಲಿ ₹23.38 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿತ್ತು. ಇದೀಗ 2030ರ ವೇಳೆಗೆ ಭಾರತದಲ್ಲಿ ಅಮೆಜಾನ್ ಹೂಡಿಕೆ ಪ್ರಮಾಣ ₹71.94 ಲಕ್ಷ ಕೋಟಿಗೆ ಹೆಚ್ಚಳವಾಗಲಿದೆ ಎಂದೂ ಅವರು ವಿವರಿಸಿದ್ದಾರೆ.

‘ಭಾರತದಲ್ಲಿ ನಮ್ಮ ಹೂಡಿಕೆ ಎ.ಐ ತಂತ್ರಜ್ಞಾನ ಸಾಮರ್ಥ್ಯದ ವಿಸ್ತರಣೆ, ಲಾಜಿಸ್ಟಿಕ್ಸ್ ಮೂಲಸೌಕರ್ಯ ಹೆಚ್ಚಳ, ಸಣ್ಣ ಉದ್ಯಮಗಳಿಗೆ ಬೆಂಬಲ ಸೇರಿದಂತೆ ಉದ್ಯೋಗಾವಕಾಶ ಸೃಷ್ಟಿಸುವುದರ ಮೇಲೆ ಕೇಂದ್ರೀಕರಿಸಿದೆ’ ಎಂದಿದ್ದಾರೆ.

‘ನಮ್ಮ ಕಂಪನಿಯು ಭಾರತದಿಂದ ರಫ್ತುಗಳನ್ನು ನಾಲ್ಕು ಪಟ್ಟು ಹೆಚ್ಚಿಸುವುದರ ಜತೆಗೆ ಹೂಡಿಕೆ ಪ್ರಮಾಣ ₹71.94 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. 2030ರ ವೇಳೆಗೆ ಹೆಚ್ಚುವರಿಯಾಗಿ ನೇರ ಮತ್ತು ಪರೋಕ್ಷವಾಗಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದೇವೆ’ ಎಂದು ತಿಳಿಸಿದ್ದಾರೆ.

ಫ್ಲಿಪ್‌ಕಾರ್ಟ್‌, ಜೆಪ್ಟೊ, ಬಿಗ್‌ಬಾಸ್ಕೆಟ್‌, ಸ್ವಿಗ್ಗಿ, ಜಿಯೊಮಾರ್ಟ್‌, ಜೊಮಾಟೊ ಸೇರಿದಂತೆ ಇತರೆ ಸ್ವದೇಶಿ ಇ–ಕಾಮರ್ಸ್‌ ಕಂಪನಿಗಳೊಂದಿಗೆ ಸ್ಪರ್ಧಿಸಲು ಸಲುವಾಗಿ ಅಮೆಜಾನ್ ಹೆಚ್ಚು ಹೂಡಿಕೆ ಮಾಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.