ADVERTISEMENT

ಗ್ರಾಹಕರಿಗೆ ನೇರವಾಗಿ ಸಾಲ: ಪರವಾನಗಿ ಪಡೆದ ಅಮೆಜಾನ್

ರಾಯಿಟರ್ಸ್
Published 4 ಸೆಪ್ಟೆಂಬರ್ 2025, 23:30 IST
Last Updated 4 ಸೆಪ್ಟೆಂಬರ್ 2025, 23:30 IST
ಅಮೆಜಾನ್
ಅಮೆಜಾನ್   

ಮುಂಬೈ: ಬೆಂಗಳೂರು ಮೂಲದ ಬ್ಯಾಂಕೇತರ ಹಣಕಾಸು ಕಂಪನಿ ಆಕ್ಸಿಯೊ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಜಾಗತಿಕ ಇ–ಕಾಮರ್ಸ್‌ ಕಂಪನಿ ಅಮೆಜಾನ್‌ ಗುರುವಾರ ತಿಳಿಸಿದೆ. ಅಲ್ಲದೆ, ದೇಶದಲ್ಲಿ ನೇರವಾಗಿ ಗ್ರಾಹಕರಿಗೆ ಸಾಲ ನೀಡುವ ಪರವಾನಗಿ ಪಡೆಯಲಾಗಿದೆ ಎಂದು ತಿಳಿಸಿದೆ.

ಆಕ್ಸಿಯೊ 12 ವರ್ಷದ ಹಳೆಯದಾದ ಫಿನ್‌ಟೆಕ್‌ ಕಂಪನಿಯಾಗಿದೆ. ಸಣ್ಣ ಗ್ರಾಹಕರು ಮತ್ತು ಸಣ್ಣ ಉದ್ದಿಮೆಗಳಿಗೆ ಸಾಲವನ್ನು ನೀಡುತ್ತದೆ. 

2018ರಿಂದ ಅಮೆಜಾನ್‌, ಆಕ್ಸಿಯೊ ಜೊತೆಗೆ ಒಪ್ಪಂದ ಮಾಡಿಕೊಂಡು ಸಾಲವನ್ನು ನೀಡುತ್ತಿತ್ತು. ಕಳೆದ ಡಿಸೆಂಬರ್‌ನಿಂದ ಸ್ವಾಧೀನ ಪ್ರಕ್ರಿಯೆ ಮಾತುಕತೆ ನಡೆಯುತ್ತಿತ್ತು. ಜೂನ್‌ನಲ್ಲಿ ಆರ್‌ಬಿಐ ಒಪ್ಪಂದಕ್ಕೆ ಅನುಮೋದಿಸಿದೆ ಎಂದು ಅಮೆಜಾನ್‌ನ ಉಪಾಧ್ಯಕ್ಷ ಮಹೇಂದ್ರ ನೆರೂರ್ಕರ್ ಹೇಳಿದ್ದಾರೆ.

ADVERTISEMENT

ಆಕ್ಸಿಯೊ ಸ್ವಾಧೀನದಿಂದ ಅಮೆಜಾನ್‌ ತನ್ನ ವೇದಿಕೆಯ ಮೂಲಕ ಗ್ರಾಹಕರಿಗೆ ಮತ್ತು ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ವಿವಿಧ ರೀತಿಯ ಸಾಲವನ್ನು ನೀಡಲು ಯೋಜಿಸಿದೆ ಎಂದು ಹೇಳಿದ್ದಾರೆ. 

ದೇಶದಲ್ಲಿ ಫ್ಲಿಪ್‌ಕಾರ್ಟ್‌ ಸೇರಿದಂತೆ ಬಹುತೇಕ ಇ–ಕಾಮರ್ಸ್‌ ಕಂಪನಿಗಳು ಬ್ಯಾಂಕ್‌ ಮತ್ತು ಬ್ಯಾಂಕೇತರ ಸಂಸ್ಥೆಗಳ ಜೊತೆ ಪಾಲುದಾರಿಕೆ ಮಾಡಿಕೊಂಡು ಸಾಲ ನೀಡುತ್ತವೆ. ಆದರೆ, ಅಮೆಜಾನ್‌ ಈಗ ನೇರವಾಗಿ ಸಾಲ ನೀಡುವ ಪರವಾನಗಿ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.