
ಅಮೆಜಾನ್
ಬೆಂಗಳೂರು: ಜಾಗತಿಕವಾಗಿ 14 ಸಾವಿರ ಕಾರ್ಪೋರೇಟ್ ಉದ್ಯೋಗಿಗಳನ್ನು ವಜಾ ಮಾಡುವ ಅಮೆಜಾನ್‌ನ ನಿರ್ಧಾರವು ಭಾರತದ 800 ನೌಕರರ ಮೇಲೆ ಪರಿಣಾಮ ಬೀರಲಿದೆ. ಮಂಗಳವಾರ ಸಂಜೆಯಿಂದಲೇ ನೌಕರಿಯಿಂದ ವಜಾಗೊಳಿಸುವ ಇ–ಮೇಲ್‌ಗಳು ಬರತೊಡಗಿವೆ ಎಂದು ಈ ಬಗ್ಗೆ ಮಾಹಿತಿ ಇರುವವರಿಂದ ಗೊತ್ತಾಗಿದೆ.
ಚಿಲ್ಲರೆ ವ್ಯಾಪಾರ ಸೇವಾ ಘಟಕಗಳು, ರೊಬೊಟಿಕ್ಸ್ / ಮೆಕಾಟ್ರಾನಿಕ್ಸ್ ಮತ್ತು ಸಾಧನಗಳು ಸೇರಿ ವಿವಿಧ ವಿಭಾಗಗಳ ನೌಕರರನ್ನು ವಜಾಗೊಳಿಸಲಾಗುವುದು, ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ‘ಪಿಂಕ್ ಸ್ಲಿಪ್’ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಅಮೆಜಾನ್ ಭಾರತದಲ್ಲಿ 1,30,000 ಉದ್ಯೋಗಿಗಳನ್ನು ಹೊಂದಿದೆ.
ವಜಾಗೊಂಡ ಕೆಲವರು ಆನ್‌ಲೈನ್‌ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದು, ಕೆಲಸದಿಂದ ತೆಗೆದುಹಾಕುವ ಇ–ಮೇಲ್ ಬಂದ ಕೂಡಲೇ ‘ಆ್ಯಕ್ಸೆಸ್’ಗಳನ್ನು ತೆಗೆದು ಹಾಕಲಾಯಿತು ಎಂದು ಹೇಳಿಕೊಂಡಿದ್ದಾರೆ.
ಪ್ರಮುಖ ಹುದ್ದೆಗಳಲ್ಲಿರುವವರು ಕೆಲಸ ಕಳೆದುಕೊಂಡಿದ್ದು, ‘ಪ್ರೈಮ್ ವಿಡಿಯೊ’ ವಿಭಾಗದಲ್ಲಿ ಹೆಚ್ಚು ನೌಕರಿ ಕಡಿತ ನಡೆದಿದೆ. ಉದ್ಯೋಗಿಗಳ ಕೌಶಲ್ಯಕ್ಕೆ ಅನುಗುಣವಾಗಿ ಆಂತರಿಕವಾಗಿ ಉದ್ಯೋಗಾವಕಾಶಗಳನ್ನು ಕಂಪನಿಯು ನೀಡುತ್ತಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅಮೆಜಾನ್ ಅನ್ನು ಸಂಪರ್ಕಸಿದರೂ ಉತ್ತರ ಲಭಿಸಿಲ್ಲ.
ಕಂಪನಿಯ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಸ ಹುದ್ದೆಗಳಿಗೆ ಅರ್ಹತೆ ಪಡೆಯಲು ಉದ್ಯೋಗಿಗಳು ತಮ್ಮನ್ನು ತಾವು ಕೌಶಲ್ಯ ಹೆಚ್ಚಿಸಿಕೊಳ್ಳುವುದು ಮುಖ್ಯ ಎಂದು ಮಾನವ ಸಂಪನ್ಮೂಲ ತಜ್ಞರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ವೇಗವಾಗಿ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಗೆ ಕೌಶಲವನ್ನು ಹೆಚ್ಚಿಸಿಕೊಳ್ಳುವುದು ಆಯ್ಕೆಯಲ್ಲ ಅನಿವಾರ್ಯ’ ಎಂದು ಸಿಐಇಎಲ್ ಎಚ್ಆರ್ ಸಂಸ್ಥೆಯ ಎಂ.ಡಿ ಹಾಗೂ ಸಿಇಒ ಆದಿತ್ಯ ನಾರಾಯಣ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.