ADVERTISEMENT

70 ಸಾವಿರ ತಾತ್ಕಾಲಿಕ ಉದ್ಯೋಗ ಸೃಷ್ಟಿ: ಫ್ಲಿಪ್‌ಕಾರ್ಟ್‌

ಪಿಟಿಐ
Published 15 ಸೆಪ್ಟೆಂಬರ್ 2020, 10:31 IST
Last Updated 15 ಸೆಪ್ಟೆಂಬರ್ 2020, 10:31 IST
ಫ್ಲಿಪ್‌ಕಾರ್ಟ್
ಫ್ಲಿಪ್‌ಕಾರ್ಟ್   

ನವದೆಹಲಿ: ‘ಬಿಗ್‌ ಬಿಲಿಯನ್ ಡೇ’ ಹೆಸರಿನ ವ್ಯಾ‍‍ಪಾರ ಉತ್ಸವ ಹಾಗೂ ಹಬ್ಬಗಳ ಸಂದರ್ಭದಲ್ಲಿನ ವ್ಯಾಪಾರದ ಮೂಲಕ ದೇಶದಲ್ಲಿ ಒಟ್ಟು 70 ಸಾವಿರಕ್ಕೂ ಹೆಚ್ಚಿನ ನೇರ, ತಾತ್ಕಾಲಿಕ ಉದ್ಯೋಗ ಸೃಷ್ಟಿಗೆ ತಾನು ನೆರವಾಗುವುದಾಗಿ ಫ್ಲಿಪ್‌ಕಾರ್ಟ್‌ ಹೇಳಿದೆ. ಇದರಿಂದಒಂದು ಲಕ್ಷಕ್ಕೂ ಹೆಚ್ಚಿನ ಪರೋಕ್ಷ ಉದ್ಯೋಗ ಕೂಡ ಸೃಷ್ಟಿಯಾಗಲಿದೆ ಎಂದು ಅದು ಹೇಳಿಕೊಂಡಿದೆ.

‘ಪೂರೈಕೆ ವ್ಯವಸ್ಥೆಯನ್ನು ವಿಸ್ತರಿಸುವುದರಿಂದ ಹಾಗೂ ಬಲಗೊಳಿಸುವುದರಿಂದ ಇ–ಕಾಮರ್ಸ್‌ ಜಾಲತಾಣಗಳನ್ನು ಬಳಕೆ ಮಾಡುವ ಲಕ್ಷಾಂತರ ಜನ ಹೊಸಬರಿಗೆ ಅಡೆತಡೆ ಇಲ್ಲದೆ ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವಾಗುತ್ತದೆ’ ಎಂದು ಫ್ಲಿಪ್‌ಕಾರ್ಟ್ ಪ್ರಕಟಣೆ ತಿಳಿಸಿದೆ. ಮುಂಬರುವ ದಸರಾ, ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ವಾಣಿಜ್ಯ ವಹಿವಾಟು ನಡೆಯಲಿದೆ ಎಂಬ ನಿರೀಕ್ಷೆಯಲ್ಲಿ ಇ–ಕಾಮರ್ಸ್‌ ಕಂಪನಿಗಳು ಇವೆ.

ಒಟ್ಟು 1.4 ಲಕ್ಷ ತಾತ್ಕಾಲಿಕ ಉದ್ಯೋಗ ಸೃಷ್ಟಿಯಾಗಬಹುದು ಎಂದು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಹಿಂದಿನ ವರ್ಷದ ಹಬ್ಬಗಳ ಸಂದರ್ಭದಲ್ಲಿ ಹೇಳಿದ್ದವು. ‘ಬಿಗ್ ಬಿಲಿಯನ್ ಡೇ ಸಂದರ್ಭದಲ್ಲಿ ನಡೆಯುವ ಮಾರಾಟದ ಪ್ರಮಾಣವನ್ನು ಗಮನಿಸಿದರೆ, ವಸ್ತುಗಳ ದಾಸ್ತಾನು ಸಾಮರ್ಥ್ಯ, ಪ್ಯಾಕೇಜಿಂಗ್ ಸೌಲಭ್ಯ, ಮಾನವ ಸಂಪನ್ಮೂಲ ಲಭ್ಯತೆ ಮುಂತಾದವುಗಳನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಇದು ಹೆಚ್ಚುವರಿ ಉದ್ಯೋಗ ಸೃಷ್ಟಿಗೆ ನೆರವಾಗುತ್ತದೆ’ ಎಂದು ಫ್ಲಿಪ್‌ಕಾರ್ಟ್‌ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.