ADVERTISEMENT

ಸುಂಕ ಸಮರ: ಕುಸಿದ ಐ.ಟಿ ಕಂಪನಿ ಲಾಭ, ಉದ್ಯೋಗಿಗಳ ಸಂಬಳ ಹೆಚ್ಚಳ ಮುಂದೂಡಿಕೆ

ಪಿಟಿಐ
Published 21 ಏಪ್ರಿಲ್ 2025, 0:29 IST
Last Updated 21 ಏಪ್ರಿಲ್ 2025, 0:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಜಾಗತಿಕ ಸುಂಕ ಸಮರವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಐ.ಟಿ ಕಂಪನಿಗಳ ವರಮಾನ, ಹೊಸ ನೇಮಕಾತಿ ಮತ್ತು ಉದ್ಯೋಗಿಗಳ ಸಂಬಳದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. 

2024–25ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಟಿಸಿಎಸ್, ಇನ್ಫೊಸಿಸ್‌ ಮತ್ತು ವಿಪ್ರೊ ಕಂಪನಿಯು ನಿರೀಕ್ಷಿತ ಮಟ್ಟದಲ್ಲಿ ನಿವ್ವಳ ಲಾಭಗಳಿಸಿಲ್ಲ. ಪೂರ್ಣ ಆರ್ಥಿಕ ವರ್ಷದಲ್ಲಿಯೂ ಕಂಪನಿಗಳು, ಹಲವು ಎಡರುತೊಡರು ಅನುಭವಿಸಿವೆ. 

ಪ್ರಸ್ತುತ ಅಮೆರಿಕದ ಪ್ರತಿ ಸುಂಕ ನೀತಿಯು ಜಾಗತಿಕ ವ್ಯಾಪಾರ ಮಾರುಕಟ್ಟೆಯಲ್ಲಿ ಅನಿಶ್ಚಿತ ಸ್ಥಿತಿ ಸೃಷ್ಟಿಯಿದೆ. ಇದು ಐ.ಟಿ ಕಂಪನಿಗಳ ವರಮಾನ ಗಳಿಕೆ ಮೇಲೂ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ADVERTISEMENT

ವ್ಯಾಪಾರ ವಹಿವಾಟಿನ ಅನಿಶ್ಚಿತತೆಯಿಂದಾಗಿ ಉದ್ಯೋಗಿಗಳ ಸಂಬಳ ಏರಿಕೆಯನ್ನು ಮುಂದೂಡುವುದಾಗಿ ಟಿಸಿಎಸ್‌ ಘೋಷಿಸಿದೆ. ಮತ್ತೊಂದೆಡೆ ವಿಪ್ರೊ ಕೂಡ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಉದ್ಯೋಗಿಗಳ ವೇತನ ಏರಿಕೆ ಬಗ್ಗೆ ತಡವಾಗಿ ನಿರ್ಧಾರ ಕೈಗೊಳ್ಳುವುದಾಗಿ ಪ್ರಕಟಿಸಿದೆ. 

ಹೊಸ ನೇಮಕಾತಿ ಕಥೆ ಏನು?:

ಮಾರ್ಚ್‌ ತ್ರೈಮಾಸಿಕದಲ್ಲಿ ಕಂಪನಿಗಳಲ್ಲಿ ಹೊಸ ನೇಮಕಾತಿಯು ಸ್ವಲ್ಪಮಟ್ಟಿಗೆ ಉತ್ತಮವಾಗಿತ್ತು. ಡಿಸೆಂಬರ್‌ ಮತ್ತು ಮಾರ್ಚ್‌ ತ್ರೈಮಾಸಿಕ ನಡುವೆ ಟಿಸಿಎಸ್‌, ಇನ್ಫೊಸಿಸ್‌ ಮತ್ತು ವಿಪ್ರೊ ಕಂಪನಿಯು 1,438 ಹೊಸ ಉದ್ಯೋಗಿಗಳನ್ನು ನೇಮಿಸಿಕೊಂಡಿವೆ.

ಟಾಟಾ ಸಮೂಹದ ಟಿಸಿಎಸ್‌ ಕಂಪನಿಯು 2024–25ನೇ ಆರ್ಥಿಕ ವರ್ಷದಲ್ಲಿ 42 ಸಾವಿರ ಹೊಸಬರನ್ನು ನೇಮಿಸಿಕೊಂಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲೂ ಹೊಸಬರನ್ನು ನೇಮಿಸಿಕೊಳ್ಳಲಾಗುವುದು ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮಿಲಿಂದ್ ಲಕ್ಕಾಡ್‌ ಹೇಳಿದ್ದಾರೆ.

ವಿಪ್ರೊ ಕಂಪನಿಯು ಕಳೆದ ಆರ್ಥಿಕ ವರ್ಷದಲ್ಲಿ 10 ಸಾವಿರ ಹೊಸಬರನ್ನು ನೇಮಿಸಿಕೊಂಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಷ್ಟು ಸಂಖ್ಯೆಯಲ್ಲಿ ಹೊಸಬರನ್ನು ನೇಮಿಸಿಕೊಳ್ಳಲಾಗುವುದು ಎಂಬ ಬಗ್ಗೆ ಕಂಪನಿಯು ಅಧಿಕೃತವಾಗಿ ಪ್ರಕಟಿಸಿಲ್ಲ. 

20 ಸಾವಿರ ಹೊಸಬರನ್ನು ನೇಮಿಸಿಕೊಳ್ಳುವುದಾಗಿ ಇನ್ಫೊಸಿಸ್‌ ಕಂಪನಿಯು ವರ್ಷದ ಆರಂಭದಲ್ಲಿ ಹೇಳಿತ್ತು.

‘ಐ.ಟಿ ವಲಯದಲ್ಲಿನ ಹೊಸ ನೇಮಕಾತಿಯು ಜಾಗತಿಕ ವಿದ್ಯಮಾನ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಅವಲಂಬಿತವಾಗಿದೆ’ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ವಂಶಿ ಕರವಾಡಿ ಹೇಳುತ್ತಾರೆ.

‘ಟ್ರಂಪ್‌ ಘೋಷಿಸಿರುವ ಪ್ರತಿ ಸುಂಕ ನೀತಿಯು ಜಾಗತಿಕ ಮಟ್ಟದಲ್ಲಿ ಆರ್ಥಿಕ ಅನಿಶ್ಚಿತತೆ ಸೃಷ್ಟಿಯಿದೆ. ಇದರಿಂದ ಐ.ಟಿ ಸೇವಾ ಬಳಕೆದಾರರು ವೆಚ್ಚ ಕಡಿತಕ್ಕೆ ಮುಂದಾಗಿದ್ದಾರೆ. ಈ ಬೆಳವಣಿಗೆಯು ಪ್ರಸಕ್ತ ವರ್ಷದ ಆರಂಭ ಮೂರು ತಿಂಗಳ ಅವಧಿಯಲ್ಲಿ ಐ.ಟಿ ನೇಮಕಾತಿಯಲ್ಲಿ ಶೇ 10ರಷ್ಟು ಕುಸಿತಕ್ಕೆ ಕಾರಣವಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.