ಉದ್ಯಮಿ ಅನಿಲ್ ಅಂಬಾನಿ
ಸಂಗ್ರಹ ಚಿತ್ರ
ನವದೆಹಲಿ: ವಂಚನೆ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ₹2 ಸಾವಿರ ಕೋಟಿ ನಷ್ಟವುಂಟು ಮಾಡಿದ ಆರೋಪದಡಿ ರಿಲಯನ್ಸ್ ಕಮ್ಯುನಿಕೇಷನ್ ಮತ್ತು ಅದರ ಪ್ರವರ್ತಕ ನಿರ್ದೇಶಕ ಅನಿಲ್ ಅಂಬಾನಿ ವಿರುದ್ಧ ಸಿಬಿಐ ಶನಿವಾರ ಪ್ರಕರಣ ದಾಖಲಿಸಿಕೊಂಡಿದೆ.
ಸ್ಟೇಟ್ ಬ್ಯಾಂಕ್ ಇಂಡಿಯಾ ಜೂನ್ 13ರಂದು ನೀಡಿದ ದೂರು ಆಧರಿಸಿ ಅನಿಲ್ ಅವರ ಮನೆ ಹಾಗೂ ಆರ್‌ಕಾಂಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯ ನಡೆಸಿದೆ.
2016ರ ಆ. 26ಕ್ಕೆ ಅನ್ವಯಿಸುವಂತೆ ಆರ್‌ಕಾಂ ಕಂಪನಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಅಸಲು ಹಾಗೂ ಬಡ್ಡಿ ಸಹಿತ ₹2,227 ಕೋಟಿಯನ್ನು ನೀಡಬೇಕಿತ್ತು. ಜತೆಗೆ ಬ್ಯಾಂಕ್ ಗ್ಯಾರಂಟಿ ಆಧಾರದಲ್ಲಿ ಪಡೆದ ₹786.52 ಕೋಟಿಯನ್ನೂ ನೀಡಬೇಕಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.
ಕಾರ್ಪೊರೇಟ್ ದಿವಾಳಿ ಪ್ರಕ್ರಿಯೆಗೆ 2016ರಲ್ಲಿ ಆರ್‌ಕಾಂ ಒಳಗಾಗಿತ್ತು. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು 2020ರಲ್ಲಿ ಈ ನಿರ್ಣಯದ ಯೋಜನೆಯನ್ನು ಸಾಲಗಾರ ಸಮಿತಿ ಒಪ್ಪಿಕೊಂಡಿತ್ತು. ಇದೇ ವರ್ಷ ನವೆಂಬರ್‌ನಲ್ಲಿ ಕಂಪನಿಯ ಖಾತೆ ಮತ್ತು ಅದರ ಪ್ರವರ್ತಕ ಅನಿಲ್ ಡಿ. ಅಂಬಾನಿಯನ್ನು ‘ವಂಚಕ’ ಎಂದು ಎಸ್‌ಬಿಐ ಪ್ರಕಟಿಸಿತು.
2021ರಲ್ಲಿ ದೆಹಲಿ ಹೈಕೋರ್ಟ್ ಯಥಾ ಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿತ್ತು. ‘ತಮ್ಮ ಖಾತೆಯನ್ನು ಬ್ಯಾಂಕ್ ‘ವಂಚಕ’ ಎಂದು ವರ್ಗೀಕರಿಸುವ ಮೊದಲು ಸಾಲ ಪಡೆದವರಿಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡಬೇಕು ಎಂಬ 2023ರ ಸುಪ್ರೀಂ ಕೋರ್ಟ್‌ನ ಆದೇಶದಂತೆ ಎಸ್‌ಬಿಐ ಕಂಪನಿ ಮತ್ತು ಪ್ರವರ್ತಕರಿಗೆ ಅವಕಾಶ ನೀಡಿತ್ತು. ಇದಾದ ಬಳಿಕ 2024ರ ಜುಲೈ 15ರಂದು ಆರ್‌ಬಿಐನ ಸುತ್ತೋಲೆಯಂತೆ ಆರ್‌ಕಾಂ ಕಂಪನಿ ಮತ್ತು ಅದರ ಪ್ರವರ್ತಕ ಅನಿಲ್ ಡಿ. ಅಂಬಾನಿಯನ್ನು ‘ವಂಚಕ’ ಎಂದು ಎಸ್‌ಬಿಐ ಗುರುತಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.