ADVERTISEMENT

ಕೇಂದ್ರ ಬಜೆಟ್‌ 2022- ಕೃಷಿ ಸಾಲ ಗುರಿ ₹ 18 ಲಕ್ಷ ಕೋಟಿಗೆ ಹೆಚ್ಚಳ?

ಪಿಟಿಐ
Published 2 ಜನವರಿ 2022, 14:01 IST
Last Updated 2 ಜನವರಿ 2022, 14:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೃಷಿ ವಲಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ 2022–23ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಕೃಷಿ ಸಾಲ ಗುರಿಯನ್ನು ₹ 18 ಲಕ್ಷ ಕೋಟಿಗೆ ಹೆಚ್ಚಿಸುವ ಸಾಧ್ಯತೆ ಇದೆ. ಕೇಂದ್ರ ಬಜೆಟ್‌ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಮಂಡಿಸಲಿದ್ದಾರೆ.

ಮಾರ್ಚ್‌ 31ಕ್ಕೆ ಕೊನೆಗೊಳ್ಳಲಿರುವ 2021–22ನೇ ಸಾಲಿಗೆ ₹ 16.5 ಲಕ್ಷ ಕೋಟಿ ಕೃಷಿ ಸಾಲದ ಗುರಿಯನ್ನು ಕೇಂದ್ರವು ನಿಗದಿ ಮಾಡಿಕೊಂಡಿದೆ. ಕೃಷಿ ವಲಯಕ್ಕೆ ಕೊಡುವ ಸಾಲದ ಗುರಿಯನ್ನು ಕೇಂದ್ರವು ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತಿದೆ. ಈ ಪರಿಪಾಠವು ಈ ಬಾರಿಯೂ ಮುಂದುವರಿಯುವ ಸಾಧ್ಯತೆ ಇದ್ದು, ಸಾಲದ ಗುರಿಯನ್ನು ₹ 18 ಲಕ್ಷ ಕೋಟಿ ಅಥವಾ ₹ 18.5 ಲಕ್ಷ ಕೋಟಿಗೆ ಹೆಚ್ಚಿಸಬಹುದು ಎಂದು ಮೂಲಗಳು ತಿಳಿಸಿವೆ.

ವಾರ್ಷಿಕ ಕೃಷಿ ಸಾಲದ ಮೊತ್ತವನ್ನು ಕೇಂದ್ರವು ನಿಗದಿ ಮಾಡುತ್ತದೆ. ಇದರಲ್ಲಿ ಬ್ಯಾಂಕ್‌ಗಳಿಂದ ನೀಡಲಾಗುವ ಬೆಳೆ ಸಾಲದ ಮೊತ್ತವೂ ಸೇರಿದೆ. ಕೃಷಿ ವಲಯಕ್ಕೆ ಕೊಡುತ್ತಿರುವ ಸಾಲದ ಮೊತ್ತವು ಈಚಿನ ವರ್ಷಗಳಲ್ಲಿ ಹೆಚ್ಚುತ್ತ ಸಾಗಿದೆ. ಕೆಲವು ವರ್ಷಗಳಲ್ಲಿ ಗುರಿಗಿಂತಲೂ ಹೆಚ್ಚಿನ ಮೊತ್ತವನ್ನು ಸಾಲವಾಗಿ ನೀಡಿದ ನಿದರ್ಶನ ಇದೆ.

ADVERTISEMENT

‘ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಸಾಲ ನೀಡಿಕೆಯು ಮಹತ್ವದ್ದು. ಬ್ಯಾಂಕ್‌, ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ವಿತರಣೆ ಮಾಡಿದರೆ, ಅವರು ಹೆಚ್ಚಿನ ಬಡ್ಡಿಗೆ ಇತರರಿಂದ ಸಾಲ ಪಡೆಯುವ ಸಂಕಷ್ಟ ನಿವಾರಣೆ ಆಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.