ADVERTISEMENT

₹ 1.10 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ನಾಲ್ಕು ತಿಂಗಳಿಗೆ ಗುರಿ ನಿಗದಿಪಡಿಸಿದ ಹಣಕಾಸು ಸಚಿವಾಲಯ

ಪಿಟಿಐ
Published 17 ಡಿಸೆಂಬರ್ 2019, 19:33 IST
Last Updated 17 ಡಿಸೆಂಬರ್ 2019, 19:33 IST
ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ
ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ   

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಕೊನೆಯ ನಾಲ್ಕು ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳೂ ₹ 1.10 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹಿಸಬೇಕು ಎಂದು ಕೇಂದ್ರ ಸರ್ಕಾರವು ಗುರಿ ನಿಗದಿಪಡಿಸಿದೆ.

ಈ ಗುರಿ ತಲುಪಲು ತೆರಿಗೆ ಅಧಿಕಾರಿಗಳು ತಮ್ಮ ಪ್ರಯತ್ನ ತೀವ್ರಗೊಳಿಸಬೇಕು ಎಂದು ತಾಕೀತು ಮಾಡಲಾಗಿದೆ. ಮಂದಗತಿಯ ಆರ್ಥಿಕತೆಯಿಂದಾಗಿ ಸರ್ಕಾರ ನಿಗದಿಪಡಿಸಿದ್ದ ತೆರಿಗೆ ಸಂಗ್ರಹ ಪ್ರಮಾಣವು ಕಡಿಮೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.

ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ಅವರು ಇಲಾಖೆಯ ಅಧಿಕಾರಿಗಳ ಜತೆ ಮಂಗಳವಾರ ನಡೆಸಿದ ವಿಡಿಯೊ ಕಾನ್‌ಫೆರನ್ಸ್‌ ಸಭೆಯಲ್ಲಿ ಈ ಗುರಿ ನಿಗದಿಪಡಿಸಲಾಗಿದೆ.

ADVERTISEMENT

ತೆರಿಗೆ ತಪ್ಪಿಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಪ್ರಾಮಾಣಿಕ ತೆರಿಗೆದಾರರಿಗೆ ಕಿರುಕುಳ ನೀಡಬಾರದು. ಹೊಸದಾಗಿ ನಿಗದಿಪಡಿಸಿದ ಗುರಿ ತಲುಪಲು ಪರಿಶ್ರಮಪಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

2019ರ ಡಿಸೆಂಬರ್‌ನಿಂದ 2020ರ ಮಾರ್ಚ್‌ ತಿಂಗಳವರೆಗೆ ಪ್ರತಿ ತಿಂಗಳೂ ₹ 1.10 ಲಕ್ಷ ಕೋಟಿಯಂತೆ ತೆರಿಗೆ ಸಂಗ್ರಹಿಸಬೇಕು. ಕನಿಷ್ಠ ಒಂದು ತಿಂಗಳಿನಲ್ಲಿ ₹ 1.25 ಲಕ್ಷ ತೆರಿಗೆ ಸಂಗ್ರಹಿಸಲು ಸೂಚಿಸಲಾಗಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ಬಜೆಟ್‌ ಸಿದ್ಧತೆಯಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಇದ್ದರೂ ಪಾಂಡೆ ಅವರು ವಾರಾಂತ್ಯದಲ್ಲಿ ವಿವಿಧ ವಲಯಗಳಿಗೆ ಭೇಟಿ ನೀಡಿ ತೆರಿಗೆ ಸಂಗ್ರಹದ ಪ್ರಗತಿ ಪರಿಶೀಲಿಸಲಿದ್ದಾರೆ.

ಕಠಿಣ ಕ್ರಮಕ್ಕೆ ಸೂಚನೆ: ತೆರಿಗೆದಾರರು ಸಕಾಲದಲ್ಲಿ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಸದಿದ್ದರೆ, ಇ–ವೇ ಬಿಲ್‌ ತಡೆಹಿಡಿಯುವ, ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಸ್ಥಗಿತಗೊಳಿಸುವ ಮತ್ತು ಜಿಎಸ್‌ಟಿ ನೋಂದಣಿ ರದ್ದು ಮಾಡುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಸರಕು ಮತ್ತು ಸೇವೆಗಳ ಪೂರೈಕೆದಾರರು ಜಿಎಸ್‌ಟಿಆರ್‌–1 ಸೇರಿದಂತೆ ಸಕಾಲದಲ್ಲಿ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಸುವಂತೆ ಕೇಳಿಕೊಳ್ಳಲು ವರ್ತಕರು ಮತ್ತು ಉದ್ದಿಮೆದಾರರಿಗೆ ಸಲಹೆ ನೀಡಲಾಗಿದೆ.

ನೇರ ತೆರಿಗೆ

₹ 13.35 ಲಕ್ಷ ಕೋಟಿನೇರ ತೆರಿಗೆ ಸಂಗ್ರಹದ ಗುರಿ ನಿಗದಿ

45 %ಅಕ್ಟೋಬರ್‌ವರೆಗಿನ 7 ತಿಂಗಳ ಸಂಗ್ರಹದ ಪ್ರಮಾಣ

ಪರೋಕ್ಷ ತೆರಿಗೆ

ಪ್ರಸಕ್ತ ವರ್ಷ ಇದುವರೆಗೆ 4 ತಿಂಗಳಲ್ಲಿ ಮಾತ್ರ ₹ 1 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ಉಳಿದಿರುವ 4 ತಿಂಗಳ ಪೈಕಿ ಕನಿಷ್ಠ 1 ತಿಂಗಳಲ್ಲಿ ₹ 1.25 ಲಕ್ಷ ತೆರಿಗೆ ಸಂಗ್ರಹಕ್ಕೆ ಸಲಹೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.