ಸಾಂಕೇತಿಕ ಚಿತ್ರ
ಚೆನ್ನೈ: ‘ಕೆಲಸ ಮಾಡುವ ಮಹಿಳೆಯರಿಗೆ ಬೆಂಗಳೂರು ದೇಶದಲ್ಲೇ ಅತ್ಯುತ್ತಮ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಅಗ್ರಸ್ಥಾನ ಪಡೆದಿದೆ’ ಎಂದು ಅವತಾರ್ ಸಮೂಹದ–2024ರ ವರದಿ ಹೇಳಿದೆ.
ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷತೆ ವಿಷಯದಲ್ಲಿ ತಿರುವನಂತಪುರ, ಮುಂಬೈ ಮತ್ತು ಹೈದರಾಬಾದ್ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು, ಕೊಚ್ಚಿ, ಗುರುಗ್ರಾಮ ಕೊನೆಯ ಸ್ಥಾನದಲ್ಲಿವೆ ಎಂದು ತಿಳಿಸಿದೆ.
ದಕ್ಷಿಣ ಭಾರತದ ಒಟ್ಟು 16 ನಗರಗಳು ಅಗ್ರ 25ರಲ್ಲಿದ್ದರೆ, ತಮಿಳುನಾಡಿನ ಎಂಟು ನಗರಗಳು ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ), ವಿಶ್ವ ಬ್ಯಾಂಕ್, ಅಪರಾಧ ದಾಖಲೆಗಳು ಸೇರಿದಂತೆ ವಿವಿಧ ಮಾಹಿತಿಯನ್ನು ಒಟ್ಟುಗೂಡಿಸಿ ವರದಿ ಸಿದ್ಧಪಡಿಸಲಾಗಿದೆ. ದೇಶದ 60 ನಗರಗಳ 1,672 ಮಹಿಳೆಯರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದೆ.
ಸಾಮಾಜಿಕವಾಗಿ ಮತ್ತು ಕೈಗಾರಿಕೆಗಳಲ್ಲಿ ಮಹಿಳೆಯರ ಒಳಗೊಳ್ಳುವಿಕೆಯಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದಿದೆ. ನಂತರ ಚೆನ್ನೈ, ಮುಂಬೈ, ಹೈದರಾಬಾದ್, ದೆಹಲಿ ಮತ್ತು ಕೊಯಮತ್ತೂರು ಸೇರಿವೆ. ಪ್ರತಿ ನಗರಕ್ಕೆ ನಿಗದಿಪಡಿಸಿದ ಒಟ್ಟಾರೆ ಅಂಕಗಳ ಆಧಾರದ ಮೇಲೆ ಮತ್ತು ಅವತಾರ್ ಸಮೂಹದ ಸಂಶೋಧನೆ ಹಾಗೂ ಸರ್ಕಾರದ ಅಂಕಿ ಅಂಶಗಳನ್ನು ಆಧರಿಸಿ ನಗರಗಳನ್ನು ಶ್ರೇಣೀಕರಿಸಲಾಗಿದೆ.
ರಾಜ್ಯಗಳ ಪೈಕಿ ಕೇರಳವು 20.89 ಅತಿ ಹೆಚ್ಚು ಒಳಗೊಳ್ಳುವಿಕೆ ಅಂಕದೊಂದಿಗೆ ಮುಂಚೂಣಿಯಲ್ಲಿದೆ. ತೆಲಂಗಾಣ 20.57, ಮಹಾರಾಷ್ಟ್ರ 19.93, ತಮಿಳುನಾಡು 19.38 ಮತ್ತು ಕರ್ನಾಟಕ 17.50 ಅಂಕ ಪಡೆದಿದೆ.
ಕೌಶಲ ಮತ್ತು ನಗರಗಳಲ್ಲಿ ಮಹಿಳೆಯರಿಗೆ ಉದ್ಯೋಗ ನೀಡುಡಿಕೆಯಲ್ಲಿ ಗುರುಗ್ರಾಮ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಮುಂಬೈ, ಬೆಂಗಳೂರು ನಂತರದ ಸ್ಥಾನದಲ್ಲಿದ್ದರೆ, ಚೆನ್ನೈ, ಹೈದರಾಬಾದ್ ಮತ್ತು ತಿರುವನಂತಪುರ ಹಿಂದುಳಿದಿವೆ ಎಂದು ಹೇಳಿದೆ. ಸರ್ಕಾರಿ ಸಂಸ್ಥೆಗಳ ದಕ್ಷತೆಯಲ್ಲಿ ತಿರುವನಂತಪುರ ಮೊದಲ ಸ್ಥಾನದಲ್ಲಿದ್ದರೆ, ಪುಣೆ ಎರಡನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.
‘ಕೆಲಸ ಮಾಡುವ ಮಹಿಳೆಯರ ಹೆಚ್ಚು ಒಳಗೊಳ್ಳುವಿಕೆ, ಸುರಕ್ಷತೆ, ಸುಸ್ಥಿರ ನಗರದ ಪಟ್ಟಿಯಲ್ಲಿ ಚೆನ್ನೈ ಎರಡನೇ ಸ್ಥಾನದಲ್ಲಿದೆ. ಕೊಯಮತ್ತೂರು, ತಿರುಚ್ಚಿರಪಳ್ಳಿ, ವೆಲ್ಲೂರು, ಮದುರೈ, ಸೇಲಂ, ಈರೋಡ್ ಮತ್ತು ತಿರುಪ್ಪುರ್ ಸಹ ಸಮೀಕ್ಷೆಯಲ್ಲಿ ಸ್ಥಾನ ಪಡೆದಿವೆ’ ಎಂದು ಅವತಾರ್ ಸಮೂಹದ ಸಂಸ್ಥಾಪಕ ಅಧ್ಯಕ್ಷೆ ಸೌಂದರ್ಯ ರಾಜೇಶ್ ಹೇಳಿದರು.
ನಗರಗಳು ಅವಕಾಶದ ಅಡಿಪಾಯಗಳಾಗಿವೆ. 2047ರ ವೇಳೆಗೆ ವಿಕಸಿತ ಭಾರತದ ಕನಸನ್ನು ನನಸಾಗಿಸಲು, ಪುರುಷರಿಗೆ ಸರಿಸಮಾನವಾಗಿ ಯಶಸ್ವಿಯಾಗಲು ಮಹಿಳಾ ವೃತ್ತಿಪರರ ಅಗತ್ಯವಿದೆ. ನಗರಗಳು ಮಹಿಳೆಯರ ಸಾಮರ್ಥ್ಯವನ್ನು ಉತ್ತಮಗೊಳಿಸುವ ವಾತಾವರಣವನ್ನು ಒದಗಿಸಿದರೆ ಮಾತ್ರ ಇದು ಸಾಧ್ಯ ಎಂದು ಹೇಳಿದ್ದಾರೆ.
ಮುಖ್ಯಾಂಶಗಳು:
ಪಟ್ಟಿಯಲ್ಲಿ ದಕ್ಷಿಣ ಭಾರತದ 16 ನಗರಗಳಿಗೆ ಸ್ಥಾನ
ಸಮೀಕ್ಷೆಯಲ್ಲಿ ದೇಶದ 60 ನಗರಗಳಿಂದ 1,672 ಮಹಿಳೆಯರು ಭಾಗಿ
ಸರ್ಕಾರಿ ಸಂಸ್ಥೆಗಳ ದಕ್ಷತೆಯಲ್ಲಿ ತಿರುವನಂತಪುರಕ್ಕೆ ಮೊದಲ ಸ್ಥಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.