ADVERTISEMENT

ಬೆಂಗಳೂರಿನಲ್ಲಿರುವ ರೇಜರ್ ಪೇ, ಪೇಟಿಎಂ, ಕ್ಯಾಶ್‌ಫ್ರೀ ಘಟಕಗಳ ಮೇಲೆ ಇ.ಡಿ ದಾಳಿ

ಪಿಟಿಐ
Published 3 ಸೆಪ್ಟೆಂಬರ್ 2022, 10:08 IST
Last Updated 3 ಸೆಪ್ಟೆಂಬರ್ 2022, 10:08 IST
   

ಬೆಂಗಳೂರು: ನಗರದಲ್ಲಿರುವ ರೇಜರ್ ಪೇ, ಪೇಟಿಎಂ, ಕ್ಯಾಶ್‌ಫ್ರೀಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೆಶನಾಲಯ(ಇ.ಡಿ) ದಾಳಿ ನಡೆಸಿದೆ.

ಚೀನಾದ ವ್ಯಕ್ತಿಗಳು ನಿಯಂತ್ರಿಸುತ್ತಿರುವ ಕಾನೂನು ಬಾಹಿರ ತ್ವರಿತ ಸ್ಮಾರ್ಟ್‌ಫೋನ್ ಆಧಾರಿತ ಸಾಲಗಳ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಶೋಧ ನಡೆಸಲಾಗುತ್ತಿದೆ ಎಂದು ಇ.ಡಿ ಹೇಳಿದೆ.

ಕರ್ನಾಟಕದ ರಾಜಧಾನಿಯ 6 ಕಡೆಗಳಲ್ಲಿ ಶುಕ್ರವಾರದಿಂದ ಶೋಧ ನಡೆಸಲಾಗುತ್ತಿದೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ. ಶನಿವಾರವೂ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಇ.ಡಿ ತಿಳಿಸಿದೆ.

ADVERTISEMENT

ದಾಳಿ ವೇಳೆ, ತನಿಖಾ ಸಂಸ್ಥೆಯು ಚೀನೀ ವ್ಯಕ್ತಿಗಳು ನಿಯಂತ್ರಿಸಲ್ಪಡುತ್ತಿದ್ದ ಈ ಘಟಕಗಳ ವ್ಯಾಪಾರಿ ಐಡಿಗಳು ಮತ್ತು ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ ₹ 17 ಕೋಟಿ ಹಣವನ್ನು ವಶಪಡಿಸಿಕೊಂಡಿದೆ ಎಂದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಘಟಕಗಳ ಕಾರ್ಯ ವಿಧಾನವೆಂದರೆ, ಅವರು ಭಾರತೀಯರ ನಕಲಿ ದಾಖಲೆಗಳನ್ನು ಬಳಸುತ್ತಾರೆ ಮತ್ತು ಅವರನ್ನು ಅಪರಾಧದ ಆದಾಯ ಗಳಿಕೆಗೆ ಡಮ್ಮಿ ನಿರ್ದೇಶಕರನ್ನಾಗಿ ಮಾಡುತ್ತಾರೆ ಎಂದು ಅದು ಆರೋಪಿಸಿದೆ.

ಈ ಘಟಕಗಳು ಚೀನೀ ವ್ಯಕ್ತಿಗಳಿಂದ ನಿಯಂತ್ರಿಸಲ್ಪಡುತ್ತವೆ ಎಂದು ಇ.ಡಿ ಹೇಳಿದೆ.

ಪೇಮೆಂಟ್ ಗೇಟ್‌ವೇಗಳು/ಬ್ಯಾಂಕ್‌ಗಳೊಂದಿಗೆ ಹೊಂದಿರುವ ವಿವಿಧ ವ್ಯಾಪಾರಿ ಐಡಿಗಳು/ಖಾತೆಗಳ ಮೂಲಕ ಈ ಘಟಕಗಳು ತಮ್ಮ ಅಕ್ರಮ ವ್ಯವಹಾರವನ್ನು ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.

‘ರೇಜರ್ ಪೇ ಪ್ರೈ ಲಿ, ಕ್ಯಾಶ್‌ಫ್ರೀ ಪೇಮೆಂಟ್ಸ್, ಪೇಟಿಎಂ ಪೇಮೆಂಟ್ ಸರ್ವಿಸಸ್ ಲಿ ಮತ್ತು ಚೀನಾದ ವ್ಯಕ್ತಿಗಳಿಂದ ನಿಯಂತ್ರಿಸಲ್ಪಡುತ್ತಿರುವ ಘಟಕಗಳು ಶೋಧ ಕಾರ್ಯಾಚರಣೆಯಲ್ಲಿ ಒಳಗೊಂಡಿವೆ’ ಎಂದು ಇ.ಡಿ ತಿಳಿಸಿದೆ.

ಮೊಬೈಲ್ ಮೂಲಕ ಸಣ್ಣ ಮೊತ್ತದ ಸಾಲ ಪಡೆದ ಸಾರ್ವಜನಿಕರ ಸುಲಿಗೆ ಮತ್ತು ಕಿರುಕುಳ ನೀಡುವುದರಲ್ಲಿ ತೊಡಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಘಟಕಗಳು/ವ್ಯಕ್ತಿಗಳ ವಿರುದ್ಧ ಬೆಂಗಳೂರು ಪೊಲೀಸ್ ಸೈಬರ್ ಕ್ರೈಂ ಠಾಣೆಯಲ್ಲಿ ಕನಿಷ್ಠ 18 ಎಫ್‌ಐಆರ್‌ಗಳು ದಾಖಲಾಗಿದ್ದು, ಅವುಗಳನ್ನು ಆಧರಿಸಿ ಇ.ಡಿ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.