ಬೆಂಗಳೂರು: ಚಿಟ್ ಫಂಡ್ ವಹಿವಾಟು ಮೊತ್ತವನ್ನು 2026ರ ವೇಳೆಗೆ ₹5,000 ಕೋಟಿಗೆ ಹೆಚ್ಚು ಮಾಡುವ ಗುರಿಯನ್ನು ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ಹೊಂದಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಹೇಳಿದ್ದಾರೆ.
2028ರ ವೇಳೆಗೆ ಈ ಮೊತ್ತವನ್ನು ₹10 ಸಾವಿರ ಕೋಟಿಗೆ ಹೆಚ್ಚು ಮಾಡುವ ಗುರಿಯನ್ನು ಕೂಡ ಸಂಸ್ಥೆಯು ಹೊಂದಿದೆ. ಈಗ ಎಂಎಸ್‌ಐಎಲ್ ₹1 ಲಕ್ಷದಿಂದ ಆರಂಭಿಸಿ ₹1 ಕೋಟಿಗಿಂತ ಹೆಚ್ಚಿನ ಮೊತ್ತದ ಚಿಟ್ ಫಂಡ್‌ಗಳನ್ನು ನಿರ್ವಹಣೆ ಮಾಡುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಕರ್ನಾಟಕ ಚಿಟ್ ಫಂಡ್ ಅಸೋಸಿಯೇಷನ್ ಈಚೆಗೆ ಆಯೋಜಿಸಿದ್ದ ‘ಅಖಿಲ ಭಾರತ ಚಿಟ್ ಫಂಡ್ಸ್ ಶೃಂಗಸಭೆ – 2025’ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮನೋಜ್ ಕುಮಾರ್ ಅವರು ಈ ವಿಷಯ ತಿಳಿಸಿದ್ದಾರೆ. ‘ಚಿಟ್ ಫಂಡ್‌ಗಳನ್ನು ಹೆಚ್ಚು ಪಾರದರ್ಶಕ ಆಗಿಸಿ, ಅವು ಎಲ್ಲರನ್ನೂ ಒಳಗೊಳ್ಳುವಂತೆ ಮಾಡಿ ಮತ್ತು ರಾಜ್ಯದಾದ್ಯಂತ ಮನೆಮನೆಗಳಿಗೆ ವಿಸ್ತರಿಸುವಂತೆ ಮಾಡುವ ಉದ್ದೇಶ ಇದೆ’ ಎಂದರು.
ಮಾರ್ಗದರ್ಶಿ ಚಿಟ್ ಫಂಡ್‌ನ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್, ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.