ಕಳಸ (ಚಿಕ್ಕಮಗಳೂರು ಜಿಲ್ಲೆ): 50 ಕೆ.ಜಿ ಚೀಲ ತೂಕದ ರೊಬಸ್ಟಾ ಚೆರ‍್ರಿ ಕಾಫಿ ಬೆಲೆಯು ₹11,500 ತಲುಪಿದೆ. ಈ ದರ ಏರಿಕೆಯ ಲಾಭ ಪಡೆಯಲು ಬೆಳೆಗಾರರು ತರಾತುರಿಯಲ್ಲಿ ಕಾಫಿ ಕೊಯ್ಲು ಆರಂಭಿಸಿದ್ದಾರೆ.
ರೊಬಸ್ಟಾ ಕಾಫಿ ಕೆ.ಜಿಗೆ ₹405ರಿಂದ ₹410ರ ಆಸುಪಾಸಿನಲ್ಲಿದೆ. ಈ ಬಾರಿ ಬಹುತೇಕ ತೋಟಗಳಲ್ಲಿ ಒಂದು ಮೂಟೆ ರೊಬಸ್ಟಾ ಚೆರ‍್ರಿಯಲ್ಲಿ 27ರಿಂದ 28 ಕೆ.ಜಿ. ಇಳುವರಿ ಸಿಗುತ್ತಿದೆ. ಇದರಿಂದಾಗಿ ವ್ಯಾಪಾರಿಗಳು ಹೆಚ್ಚು ಷರತ್ತು ಇಲ್ಲದೆ ಕಾಫಿ ಖರೀದಿಸುತ್ತಿದ್ದಾರೆ.
‘ಮೊದಲ ಕೊಯ್ಲಿನಲ್ಲಿ ಒಂದು ಚೀಲ ಕಾಫಿಗೆ 29 ಕೆ.ಜಿ. ಇಳುವರಿ ಸಿಕ್ಕಿದೆ. ಇದರಿಂದ ಚೀಲವೊಂದಕ್ಕೆ ₹11,500 ಬೆಲೆ ಏರಿಕೆಯಾಗಿದೆ’ ಎಂದು ಕಳಸದ ಬೆಳೆಗಾರ ಅನಿಲ್ ಡಿಸೋಜ ತಿಳಿಸಿದರು.
‘ಕಳೆದ ವರ್ಷದ ಡಿಸೆಂಬರ್ ಮಧ್ಯಭಾಗದವರೆಗೂ ಮಳೆ ಸುರಿದಿದ್ದರಿಂದ ಕಾಫಿ ಬೆಳೆ ಉತ್ತಮ ಬೆಳವಣಿಗೆ ಕಂಡಿದೆ. ಇದರಿಂದ ಈ ವರ್ಷ ಎಲ್ಲ ಬೆಳೆಗಾರರ ಕಾಫಿಯು ಹೆಚ್ಚಿನ ತೂಕ ಬರುತ್ತಿದೆ. ಹಿಂದೆಲ್ಲ ಚಳಿಗಾಲದಲ್ಲೂ ಕಾಫಿಗೆ ನೀರು ಕೊಡುವಂತೆ ಸಲಹೆ ಮಾಡುತ್ತಿದ್ದರು. ಈ ವರ್ಷ ಮಳೆಯೇ ಆ ಕೆಲಸ ಮಾಡಿದ್ದರಿಂದ ಕಾಫಿಯಲ್ಲಿ ತೂಕ ಹೆಚ್ಚಾಗಿದೆ’ ಎನ್ನುತ್ತಾರೆ ಹೊರನಾಡಿನಲ್ಲಿ ತೋಟ ಹೊಂದಿರುವ ಬೆಳೆಗಾರ ವಿಶಾಲ್ ನೋಟದ.
ಪ್ರತಿವರ್ಷ ಒಂದೇ ಬಾರಿಗೆ ಕಾಫಿ ಕೊಯ್ಲು ಮಾಡಲಾಗುತ್ತಿತ್ತು. ಈ ಬಾರಿ ಹಣ್ಣು ಮಾತ್ರ ಕೊಯ್ಯುವ ಕ್ರಮ ಹೆಚ್ಚಾಗಿದೆ. ಇದರಿಂದ ಎರಡನೇ ಕೊಯ್ಲಿನಲ್ಲಿ ಹೆಚ್ಚು ಹಣ್ಣು ಸಿಗಲಿದ್ದು, ಫಸಲಿನ ಗುಣಮಟ್ಟ ಮತ್ತು ತೂಕ ಹೆಚ್ಚಾಗುತ್ತದೆ ಎಂಬುದು ಬೆಳೆಗಾರರ ಅಂಬೋಣ. ಈ ಬಾರಿ ಕಾಫಿ ಕೊಯ್ಯುವ ಕಾರ್ಮಿಕರಿಗೆ ಹೆಚ್ಚಿನ ಕೂಲಿ ಸಿಗುತ್ತಿದೆ.
ಬೆಳೆಗಾರರು ಕಣದಲ್ಲಿ ಕಾಫಿ ಒಣಗಿಸುವಾಗಲೂ ಎಚ್ಚರ ವಹಿಸುತ್ತಿದ್ದಾರೆ. ಕಾಫಿ ಅತಿಯಾಗಿ ಒಣಗಿಸಿದರೆ ತೂಕದಲ್ಲಿ ನಷ್ಟ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬೆಳೆಗಾರರು ಅಗತ್ಯ ಇರುವಷ್ಟೇ ಒಣಗಿಸುತ್ತಿದ್ದಾರೆ.
ರೊಬಸ್ಟಾ ಕಾಫಿಯಲ್ಲಿ ಶೇ 13ರ ವರೆಗೆ ತೇವಾಂಶ ಇರಬಹುದು. ಅತಿಹೆಚ್ಚು ಒಣಗಿಸಿದರೆ ತೇವಾಂಶ 10ಕ್ಕಿಂತ ಕಡಿಮೆ ಆಗುತ್ತದೆ. ಅಂತಹ ಸಂದರ್ಭದಲ್ಲಿ ಚೀಲವೊಂದಕ್ಕೆ 2 ಕೆ.ಜಿ ತೂಕ ಇಳಿಕೆಯಾಗುತ್ತದೆ ಎಂಬುದು ಬೆಳೆಗಾರರ ಲೆಕ್ಕಾಚಾರವಾಗಿದೆ.
‘ವಿಯೆಟ್ನಾಂನಲ್ಲಿ ರೊಬಸ್ಟಾ ಮತ್ತು ಬ್ರೆಜಿಲ್‌ನಲ್ಲಿ ಅರೇಬಿಕಾ ಕಾಫಿ ಫಸಲು ನಷ್ಟವಾಗಿದೆ. ಇದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ದರ ಇನ್ನಷ್ಟು ಏರಿಕೆ ಆಗುವ ನಿರೀಕ್ಷೆ ಇದೆ’ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಕಾಫಿ ಹಣ್ಣು ಕೊಯ್ಲು ಮಾಡಲು ಕಾರ್ಮಿಕರ ಕೊರತೆ ಇದೆ. ಈ ವರ್ಷ ಬೆಲೆ ಹೆಚ್ಚಾಗಿದೆ. ಹೆಚ್ಚಿನ ಕೂಲಿ ನೀಡಿ ಕೊಯ್ಲು ಮಾಡಿಸಬಹುದು.–ಕೆ.ಆರ್.ಭಾಸ್ಕರ್, ಅಧ್ಯಕ್ಷ, ಕಳಸ ಮತ್ತು ಬಾಳೂರು ಕಾಫಿ ಬೆಳೆಗಾರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.