ದೆಹಲಿ ವಿಮಾನ ನಿಲ್ದಾಣ
(ಸಂಗ್ರಹ ಚಿತ್ರ)
ನವದೆಹಲಿ: ಪ್ರತಿಕೂಲ ಹವಾಮಾನ ಹಾಗೂ ಸಂಚಾರ ದಟ್ಟಣೆಯಿಂದಾಗಿ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐಎ) ಶನಿವಾರ 350ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.
ನಿಲ್ದಾಣದಲ್ಲಿ ಪ್ರಯಾಣಿಕರು ಕಾಯುತ್ತಿರುವ ಫೋಟೊ ಮತ್ತು ವಿಡಿಯೊ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಶುಕ್ರವಾರ ಸಂಜೆ ಪ್ರತಿಕೂಲ ಹವಾಮಾನದಿಂದಾಗಿ ಹಲವು ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿತ್ತು. ಈ ಸಮಸ್ಯೆಯು ಮುಂದುವರಿದಿದ್ದು, ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ.
‘ವಿಮಾನಗಳ ಕಾರ್ಯಚರಣೆಯಲ್ಲಿ ತಲೆದೋರಿದ್ದ ಸಮಸ್ಯೆಯು ಸ್ವಲ್ಪಮಟ್ಟಿಗೆ ಬಗೆಹರಿದಿದೆ. ಕೆಲವು ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದೆ. ಪ್ರಯಾಣಿಕರಿಗೆ ಆಗಿರುವ ತೊಂದರೆ ತಪ್ಪಿಸಲು ನಿಲ್ದಾಣದ ಅಧಿಕಾರಿಗಳು ಕಾರ್ಯನಿರತರಾಗಿದ್ದಾರೆ’ ಎಂದು ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು ‘ಎಕ್ಸ್’ನಲ್ಲಿ ತಿಳಿಸಿದೆ.
ವಿಮಾನಗಳ ಕಾರ್ಯಾಚರಣೆ ಬಗ್ಗೆ ಮಾಹಿತಿ ಒದಗಿಸುವ ಫ್ಲೈಟ್‌ರಾಡಾರ್24 ಡಾಟ್ ಕಾಂ ಪ್ರಕಾರ, ಪ್ರತಿ ವಿಮಾನದ ನಿಗದಿತ ಹಾರಾಟದಲ್ಲಿ 40 ನಿಮಿಷ ವಿಳಂಬವಾಗಿದೆ.
ಸಂಚಾರ ದಟ್ಟಣೆಯಿಂದಾಗಿ ವಿಮಾನಗಳ ಆಗಮನ ಮತ್ತು ನಿರ್ಗಮನಕ್ಕೆ ಸಕಾಲದಲ್ಲಿ ಅನುಮತಿ ದೊರೆಯುತ್ತಿಲ್ಲ. ವಿಮಾನಗಳ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಇಂಡಿಗೊ ವಿಮಾನಯಾನ ಕಂಪನಿ ತಿಳಿಸಿದೆ.
ಒಟ್ಟು ನಾಲ್ಕು ರನ್‌ವೇ ಪೈಕಿ ಮೂರು ಕಾರ್ಯ ನಿರ್ವಹಿಸುತ್ತಿವೆ. ದುರಸ್ತಿ ಕಾರ್ಯದಿಂದಾಗಿ ಒಂದು ರನ್‌ವೇ ಕಾರ್ಯಾಚರಣೆಯು ಸ್ಥಗಿತಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.