ADVERTISEMENT

ಧನತ್ರಯೋದಶಿ: ಚಿನ್ನ ಖರೀದಿಗೆ ದುಬಾರಿ ಬೆಲೆ ಅಡ್ಡಿ

ಪಿಟಿಐ
Published 18 ಅಕ್ಟೋಬರ್ 2025, 23:30 IST
Last Updated 18 ಅಕ್ಟೋಬರ್ 2025, 23:30 IST
<div class="paragraphs"><p>ಚಿನ್ನ&nbsp;</p></div>

ಚಿನ್ನ 

   

ಮುಂಬೈ/ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಧನತ್ರಯೋದಶಿಯ ವೇಳೆ ಚಿನ್ನ ಮತ್ತು ಬೆಳ್ಳಿ ಖರೀದಿಯು ತೂಕದ ಲೆಕ್ಕದಲ್ಲಿ ಶೇ 15ರಷ್ಟು ಇಳಿಕೆ ಆಗುವ ನಿರೀಕ್ಷೆ ಇದೆ ಎಂದು ವರ್ತಕರು ಅಂದಾಜಿಸಿದ್ದಾರೆ. ಬೆಲೆ ಏರಿಕೆಯೇ ಖರೀದಿ ಇಳಿಕೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಧನತ್ರಯೋದಶಿಯು ಚಿನ್ನಾಭರಣಗಳ ಖರೀದಿಗೆ ಶುಭ ದಿನ ಎಂಬ ನಂಬಿಕೆ ಇದೆ. ಈ ಬಾರಿ ಧನತ್ರಯೋದಶಿ ಆಚರಣೆ ಶನಿವಾರದಿಂದ ಆರಂಭವಾಗಿದ್ದು, ಭಾನುವಾರ ಮಧ್ಯಾಹ್ನ 1.45ರವರೆಗೆ ಇರಲಿದೆ.

ADVERTISEMENT

2024ರ ಅಕ್ಟೋಬರ್‌ 29ರಂದು ನಡೆದ ಧನತ್ರಯೋದಶಿಯಂದು ಚಿನ್ನದ (24 ಕ್ಯಾರೆಟ್‌) ದರ ನವದೆಹಲಿಯ ಮಾರುಕಟ್ಟೆಯಲ್ಲಿ 10 ಗ್ರಾಂ ಗೆ ₹81,400ರಷ್ಟಿತ್ತು. ಅದು ಈ ಬಾರಿ ₹1,34,800 ಆಗಿದೆ. ಬೆಳ್ಳಿ ದರ ₹1.77 ಲಕ್ಷವಿದೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಚಿನ್ನದ ಮಾರಾಟವು ರೂಪಾಯಿ ಲೆಕ್ಕದಲ್ಲಿ ಶೇ 40ರಿಂದ ಶೇ 45ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ಅಖಿಲ ಭಾರತ ಹರಳು ಮತ್ತು ಆಭರಣ ಮಂಡಳಿಯ (ಜಿಜೆಸಿ) ಅಧ್ಯಕ್ಷ ರಾಜೇಶ್ ರೋಕ್ಡೆ ಹೇಳಿದ್ದಾರೆ.

‘ಅಧಿಕ ಬೆಲೆಯಿಂದ ಈ ಬಾರಿಯ ಧನತ್ರಯೋದಶಿ ವೇಳೆ ಚಿನ್ನದ ಮಾರಾಟ ತೂಕದ ಲೆಕ್ಕದಲ್ಲಿ ಕಡಿಮೆ ಆಗಲಿದೆ. ಆದರೆ ಮೌಲ್ಯದ ಲೆಕ್ಕದಲ್ಲಿ ಶೇ 20ರಿಂದ ಶೇ 25ರಷ್ಟು ಹೆಚ್ಚಳವಾಗಲಿದೆ’ ಎಂದು ಸೆನ್ಕೊ ಗೋಲ್ಡ್‌ ಆ್ಯಂಡ್ ಡೈಮಂಡ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಸುವಾಂಕರ್ ಸೇನ್ ಹೇಳಿದ್ದಾರೆ.

ಆಭರಣಗಳ ಆಮದಿನ ಮೇಲಿನ ನಿಷೇಧದಿಂದಾಗಿ ಕಳೆದ ತಿಂಗಳಿನಿಂದ ಬೆಳ್ಳಿ ಕೊರತೆ ಉಂಟಾಗಿದೆ. ಇದರಿಂದ ಬೆಳ್ಳಿ ಬೆಲೆ ಏರಿಕೆಯಾಗಿದೆ ಜಿಜೆಸಿಯ ಮಾಜಿ ಅಧ್ಯಕ್ಷ ಸಯ್ಯಮ್ ಮೆಹ್ರಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.