ADVERTISEMENT

ಟ್ವಿಟರ್‌, ಫೇಸ್‌ಬುಕ್‌ ನಂತರ ಈಗ ಡಿಸ್ನಿಯಲ್ಲೂ ಸಿಬ್ಬಂದಿ ಕಡಿತ, ನೇಮಕಾತಿಗೆ ತಡೆ

ಐಎಎನ್ಎಸ್
Published 12 ನವೆಂಬರ್ 2022, 5:57 IST
Last Updated 12 ನವೆಂಬರ್ 2022, 5:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಮಂದಗತಿಯ ಆದಾಯ ಬೆಳವಣಿಗೆಯ ಕಾರಣ ನೀಡಿರುವ ಅಮೆರಿಕಾ ಮೂಲದ ಮಾಧ್ಯಮ ಮತ್ತು ಮನರಂಜನಾ ಸಂಸ್ಥೆ ‘ಡಿಸ್ನಿ’ ಉದ್ಯೋಗ ಕಡಿತ ಮತ್ತು ನೇಮಕಾತಿಯನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ.

‘ಡಿಸ್ನಿ’ ಸಿಇಒ ಬಾಬ್ ಚಾಪೆಕ್‌ ಅವರು ಆಂತರಿಕವಾಗಿ ಬಿಡುಗಡೆ ಮಾಡಿರುವ ಪತ್ರವನ್ನು ಉಲ್ಲೇಖಿಸಿ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ.

‘ಕಂಪನಿಯು ಉದ್ದೇಶಿತ ನೇಮಕಾತಿಗಳನ್ನು ತಡೆಹಿಡಿಯುತ್ತಿದೆ. ಸಿಬ್ಬಂದಿ ಸಂಖ್ಯೆಯನ್ನೂ ಕಡಿತಗೊಳಿಸಲಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

ADVERTISEMENT

‘ಅತ್ಯಂತ ನಿರ್ಣಾಯಕ, ವ್ಯಾಪಾರ ಉದ್ದೇಶದ ಸಣ್ಣ ಉಪವಿಭಾಗಗಳ ನೇಮಕಾತಿ ಮುಂದುವರಿಯುತ್ತದೆ. ಇನ್ನಿತರ ಎಲ್ಲ ನೇಮಕಾತಿಗಳನ್ನು ತಡೆಹಿಡಿಯಲಾಗುತ್ತದೆ. ಸಿಬ್ಬಂದಿ ಕಡಿತ ಹೇಗೆ ಅನ್ವಯವಾಗುತ್ತದೆ ಎಂಬುದನ್ನು ವಿಭಾಗದ ಮುಖ್ಯಸ್ಥರು ಮತ್ತು ಮಾನವ ಸಂಪನ್ಮೂಲ ವಿಭಾಗದವರು ವಿವರಿಸುತ್ತಾರೆ’ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಡಿಸ್ನಿಯಲ್ಲಿ ಸುಮಾರು 1,90,000 ಜನರು ಕೆಲಸ ಮಾಡುತ್ತಿದ್ದಾರೆ.

‘ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ನಾವು ಉಳಿತಾಯ ಮಾರ್ಗಗಳನ್ನು ಕಂಡುಹಿಡಿಯಲಿದ್ದೇವೆ. ಸಿಬ್ಬಂದಿ ಕಡಿತವನ್ನು ನಾವು ನಿರೀಕ್ಷಿಸುತ್ತಿದ್ದೇವೆ’ ಎಂದು ಚಾಪೆಕ್ ಹೇಳಿದ್ದಾರೆ.

ತೀರ ಅಗತ್ಯ ಎನಿಸುವ ವ್ಯಾಪಾರ ಪ್ರಯಾಣಗಳನ್ನು ಮಾತ್ರ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಅಲ್ಲದೇ, ವರ್ಚುವಲ್ ಸಭೆಗಳನ್ನು ಸಾಧ್ಯವಾದಷ್ಟು ಹೆಚ್ಚಾಗಿ ನಡೆಸುವಂತೆ ಅವರು ಸೂಚಿಸಿದ್ದಾರೆ.

ಇದರ ಜತೆಗೆ, ಕಂಪನಿಯು ‘ವೆಚ್ಚದ ಕಾರ್ಯಪಡೆ’ ರಚಿಸಲು ಯೋಜಿಸಿದೆ.

ಇತ್ತೀಚೆಗೆ ಟ್ವೀಟರ್‌ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದ ವಿಶ್ವದ ಶ್ರೀಮಂತ ಉದ್ಯಮಿ ಇಲಾನ್‌ ಮಸ್ಕ್‌ ಅವರು ಭಾರಿ ಸಂಖ್ಯೆಯ ಸಿಬ್ಬಂದಿಯನ್ನು ವಜಾಗೊಳಿಸಿದ್ದರು. ಇದೇ ಮಾರ್ಗ ಅನುಸರಿಸಿದ್ದ ಫೇಸ್‌ಬುಕ್‌ನ ಮಾಲೀಕ ಸಂಸ್ಥೆ ಮೆಟಾ ಕೂಡ ಸಿಬ್ಬಂದಿ ಕಡಿತ ಘೋಷಿಸಿದೆ. ಈ ಮಧ್ಯೆ ಡಿಸ್ನಿ ಕೂಡ ಸಿಬ್ಬಂದಿ ಕಡಿತ ಮತ್ತು ನೇಮಕಾತಿ ತಡೆಯಲು ಮುಂದಾಗಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.