ನವದೆಹಲಿ: ಭವಿಷ್ಯ ನಿಧಿ ಹಣ ಹಿಂಪಡೆಯುವ ವೇಳೆ ಚಂದಾದಾರರು ಇನ್ನು ಮುಂದೆ ಆನ್‌ಲೈನ್‌ನಲ್ಲಿ ರದ್ದು ಮಾಡಲಾದ ಚೆಕ್ ಅನ್ನು ಅಪ್‌ಲೋಡ್ ಮಾಡಬೇಕಿಲ್ಲ. ಜೊತೆಗೆ, ಅವರ ಬ್ಯಾಂಕ್ ಖಾತೆಯನ್ನು ಉದ್ಯೋಗದಾತ ಸಂಸ್ಥೆಯು ದೃಢೀಕರಿಸುವ ಅಗತ್ಯವಿಲ್ಲ ಎಂದು ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಗುರುವಾರ ತಿಳಿಸಿದೆ.
ಪ್ರಸ್ತುತ ಚಂದಾದಾರರು ಆನ್‌ಲೈನ್ ಮೂಲಕ ಭವಿಷ್ಯ ನಿಧಿ ಹಣ ಹಿಂಪಡೆಯಲು ಅರ್ಜಿ ಸಲ್ಲಿಸುವ ವೇಳೆ ಚೆಕ್ ಪ್ರತಿಯ ಫೋಟೊ ಅಪ್‌ಲೋಡ್ ಮಾಡಬೇಕಿದೆ. ಅಥವಾ ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ಅಥವಾ ಪಿಎಫ್ ಸಂಖ್ಯೆ ಜೊತೆಗೆ ಜೋಡಣೆ ಆಗಿರುವ ಬ್ಯಾಂಕ್ ಖಾತೆಯ ಪಾಸ್‌ಬುಕ್ ಪ್ರತಿಯನ್ನು ಅಪ್‌ಲೋಡ್ ಮಾಡಬೇಕಿದೆ.
ಉದ್ಯೋಗದಾತ ಸಂಸ್ಥೆಯು ಚಂದಾದಾರರು ನಮೂದಿಸುವ ಬ್ಯಾಂಕ್ ಖಾತೆಯ ವಿವರಗಳಿಗೆ ಅನುಮೋದನೆ ನೀಡುವ ಅಗತ್ಯವಿತ್ತು. ಸಂಸ್ಥೆಯು ಇದನ್ನು ದೃಢೀಕರಿಸುವ ಅಗತ್ಯವಿಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ.
ಇದರಿಂದ ತ್ವರಿತವಾಗಿ ಕ್ಲೇಮು ಪ್ರಕ್ರಿಯೆ ನಡೆಯಲಿದ್ದು, ಅಂದಾಜು 8 ಕೋಟಿ ಚಂದಾದಾರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.